More

    ರೇವಣ್ಣ, ಪ್ರಜ್ವಲ್ ವಿರುದ್ಧ ಕ್ರಮಕ್ಕೆ ಪಟ್ಟು

    ಕೋಲಾರ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಸಿದ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ ಕ್ರಮ ಕೈಗೊಂಡು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಗಳ ಮುಖಂಡರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಗಮನ ಮಹಿಳಾ ಸಂಸ್ಥೆ ಅಧ್ಯಕ್ಷೆ ಶಾಂತಮ್ಮ ಮಾತನಾಡಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸಗಿರುವ ಕೃತ್ಯವು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪೆನ್‌ಡ್ರೈನ್‌ನಲ್ಲಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಹೊಸ ಹೊಸ ಚಿತ್ರಗಳು, ದೃಶ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಮಹಿಳೆಯ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನು ಕೆಲವರು ಯತ್ನಿಸಿರುವ ಘಟನೆಗಳು ಸಂಭವಿಸಿವೆ. ಶಾಸಕ ಎಚ್.ಡಿ.ರೇವಣ್ಣ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಇಬ್ಬರನ್ನೂ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
    ಪ್ರಕರಣವನ್ನು ಸರ್ಕಾರವು ಎಸ್‌ಐಟಿ ತನಿಖೆಗೆ ಒಪ್ಪಿಸಿದೆ, ಎಫ್‌ಐಆರ್‌ನಲ್ಲಿ ಕೈಬಿಟ್ಟಿರುವ ೩೫೪ಬಿ, ೩೫೪ಸಿ ಕಾಯಿದೆಗಳನ್ನು ಸೇರಿಸಬೇಕು. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಿಗೆ ನ್ಯಾಯ ಒದಗಿಸಿ ರಕ್ಷಣೆ ನೀಡಬೇಕು ಎಂದರು.
    ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳನಿಗೌಡ ಮಾತನಾಡಿ, ಅಮಾಯಕ ಮಹಿಳೆಯರನ್ನು ಪ್ರಜ್ವಲ್ ಕಾಮದಾಹಕ್ಕೆ ಬಳಸಿಕೊಂಡಿದ್ದಲ್ಲದೆ, ವಿಡಿಯೋ ಚಿತ್ರೀಕರಣ ಮಾಡಿ ವಿಕೃತವೆಸಗಿದ್ದಾನೆ. ಇದಕ್ಕೆ ರಾಜಕೀಯ ಅಧಿಕಾರ ಬಳಿಸಿಕೊಂಡಿರುವುದು ಗೊತ್ತಾಗುತ್ತಿದೆ. ತಾಯಿ ಸಮಾನಳಾದ ಮಹಿಳೆಯರನ್ನೂ ಬಿಡದೆ ಕೃತ್ಯ ಎಸಗಿ ರಾಜ್ಯಕ್ಕೆ ಅಪಕೀರ್ತಿ ತಂದಿಟ್ಟಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪ್ರಕರಣಕ್ಕೆ ಸಂಬಂಸಿದಂತೆ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಪೆನ್‌ಡ್ರೈವ್ ಯಾರಿಂದ ಬಂತು..?, ವಿಡಿಯೋಗಳನ್ನು ಹರಿಬಿಟ್ಟವರು ಯಾರು..?, ಯಾರು ಚಿತ್ರೀಕರಣ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಮೊಬೈಲ್ ಮತ್ತು ಪೆನ್‌ಡ್ರೈವ್‌ನ್ನು ವಶಪಡಿಸಿಕೊಂಡು ಮಹಿಳೆಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
    ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತರಾಗಿರುವ ಮಹಿಳೆಯ ಗೌಪ್ಯತೆ ಕಾಪಾಡಬೇಕು. ಸಂತ್ರಸ್ಥ ಮಹಿಳೆಯರು ದೂರು ದಾಖಲಿಸಲು ಹಾಸನ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ದೂರು ಸ್ವೀಕಾರ ಕೇಂದ್ರ ಸ್ಥಾಪನೆ ಮಾಡಬೇಕು. ತನಿಖಾ ಸಂಸ್ಥೆಗಳವರು ಯಾವುದೇ ರೀತಿಯ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಎಸ್‌ಐಟಿ ಕೆಲಸ ಮಾಡುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳುಹಿಸದಂತೆ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ವಕೀಲ ಸತೀಶ್, ಯಂಗ್ ಇಂಡಿಯಾ ಡೆವಲಪ್‌ಮೆಂಟ್ ಅಧ್ಯಕ್ಷ ಹೂವಳ್ಳಿ ನಾಗರಾಜ್, ಮುಖಂಡರಾದ ವೆಂಕಟಚಲಪತಿ, ಲಕ್ಷಿದೇವಿ, ಆನಂದ್, ಸುಬ್ರಹ್ಮಣಿ, ಎಚ್.ರೇಣುಕಾದೇವಿ, ಕೆ.ಎಂ.ಸೌಮ್ಯಾ ಮುಂತಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts