More

    ಅಗತ್ಯ ವಸ್ತು, ತರಕಾರಿ ಬೆಲೆ ಹೆಚ್ಚಳ

    ಮಂಗಳೂರು/ಉಡುಪಿ: ಕರೊನ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್ ಪರಿಣಾಮ ದಿನಬಳಕೆ ಅಗತ್ಯ ವಸ್ತುಗಳು, ತರಕಾರಿ, ಸೊಪ್ಪು, ಹಣ್ಣು ಹಂಪಲು ಧಾರಣೆ ಏರಿಕೆಯಾಗಿದೆ.
    ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮೊದಲಾದ ಕಡೆಯಿಂದ ತರಕಾರಿ ಮಂಗಳೂರು ಸೆಂಟ್ರಲ್ ಮಾರುಕಟ್ಟೆಗೆ ಬರುತ್ತಿದೆ. ಲಾಕ್‌ಡೌನ್ ಘೋಷಣೆ ಬಳಿಕ ತರಕಾರಿ ಪೂರೈಕೆಯಲ್ಲೂ ಇಳಿಕೆಯಾಗಿದೆ. ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರು ತರಕಾರಿಗೆ ಮುಗಿ ಬೀಳುವುದನ್ನು ಕಂಡು ಏಕಾಏಕಿ ದರ ಏರಿಕೆ ಮಾಡಿದ್ದಾರೆ.
    ಚಿಲ್ಲರೆ ವ್ಯಾಪಾರ ಅಂಗಡಿಗಳಲ್ಲಿ ಟೊಮೆಟೋ 20 ರೂ. ನಿಂದ 35 ರೂ., ತೊಂಡೆ 50 ರಿಂದ 90ರೂ., ಸೌತೆ 20 ರೂ. ನಿಂದ 40 ರೂ., ನೀರುಳ್ಳಿ 30 ರೂ. ನಿಂದ 40 ರೂ., ಬೀನ್ಸ್ 60ರಿಂದ 90 ರೂ. ಸೇರಿದಂತೆ ಹೆಚ್ಚಿನ ತರಕಾರಿಗಳಿಗೆ ದರ ಏರಿಕೆಯಾಗಿದೆ. ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳಿಗೂ ಕೆಲವು ಕಡೆ ದರ ಏರಿಕೆಯಾಗಿದೆ. ಹಣ್ಣು, ಹಂಪಲು ದರದಲ್ಲೂ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

    ಉಡುಪಿಯಲ್ಲಿ ಎಲ್ಲ ಬಗೆಯ ತರಕಾರಿಗಳು ಕೆಜಿಗೆ 20ರಿಂದ 25 ರೂಪಾಯಿ ಹೆಚ್ಚಳವಾಗಿದೆ. ಕೆಲವೇ ದಿನಗಳ ಹಿಂದೆ 25-30 ರೂಪಾಯಿ ಇದ್ದ ಟೊಮ್ಯಾಟೊ ಮತ್ತು ಈರುಳ್ಳಿ ಕೆಜಿಗೆ 50 ರೂಪಾಯಿ ತಲುಪಿದೆ. ಸ್ಥಳೀಯ ವ್ಯಾಪಾರಿಗಳಲ್ಲಿ ಹಸಿ ಮೆಣಸು ಕೆಜಿಗೆ 100ರ ಗಡಿ ದಾಟಿದೆ. ಉಳಿದಂತೆ ಬೀನ್ಸ್‌ಗೆ 100, ಆಲೂಗಡ್ಡೆ 50, ಬೀಟ್‌ರೂಟ್ 60, ಕ್ಯಾರೆಟ್ 110, ಸೌತೆ 40, ನುಗ್ಗೆಕಾಯಿ 60-80, ಕುಂಬಳ 40, ಸುವರ್ಣಗೆಡ್ಡೆ 30, ಬೆಂಡೆ-60 ರೂ. ದರವಿದೆ. ಮಧ್ಯವರ್ತಿ ಮತ್ತು ರಖಂ ವ್ಯಾಪಾರಿಗಳಿಂದ ಪೂರೈಕೆಯಾಗುವಾಗಲೇ ದರ ಹೆಚ್ಚಳವಾಗಿದೆ. ನಾವಾಗಿಯೇ ಏರಿಸಿದ್ದಲ್ಲ. ಈ ಹಿಂದೆ ಜಿಲ್ಲೆಗೆ ಐದಾರು ಲೋಡು ಬರುತ್ತಿದ್ದ ತರಕಾರಿ ಸದ್ಯಕ್ಕೆ ಎರಡು ಮೂರು ಲೋಡುಗಳಷ್ಟೆ ಬರುತ್ತಿವೆ ಎಂದು ಸ್ಥಳೀಯ ಮಾರುಕಟ್ಟೆ ವ್ಯಾಪಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.

    ಹೆಚ್ಚಿನ ದರ, ಕೃತಕ ಅಭಾವ ಸೃಷ್ಟಿಸಿದರೆ ಕ್ರಮ
    ಉಡುಪಿ ಜಿಲ್ಲೆಯಾದ್ಯಂತ ತರಕಾರಿ, ದಿನಸಿ, ಮೀನು, ಮಾಂಸ, ಹಣ್ಣು ಹಂಪಲು, ಔಷಧ, ಹಾಲು ಮುಂತಾದುವನ್ನು ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಅಂಗಡಿಗಳ ಎದುರಿನಲ್ಲಿ ಕನಿಷ್ಠ 6 ಅಡಿಗಳ ಅಂತರದಲ್ಲಿ ವ್ಯಾಪಾರ ನಡೆಸಬೇಕು. ಈ ನಿರ್ದೇಶನಗಳನ್ನು ಪಾಲಿಸದ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ. ಯಾವುದೇ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಕೂಡದು. ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಇಂತಹ ವಸ್ತುಗಳನ್ನು ದಾಸ್ತಾನು ಮಾಡಕೂಡದು. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ನಿರ್ದೇಶನಗಳು ಪಾಲನೆಯಾಗುವಂತೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒ ಕ್ರಮ ವಹಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

    ಸೆಂಟ್ರಲ್ ಮಾರುಕಟ್ಟೆಗೆ ಪ್ರವೇಶವಿಲ್ಲ: ಆಹಾರ ಸಾಮಗ್ರಿಗಳ ಸಾಗಾಟ ವಾಹನಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದೇ ವೇಳೆ ವ್ಯಾಪಾರಸ್ಥರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದರೆ, ದರ ಹೆಚ್ಚಳ ಮಾಡುವುದು ಅಥವಾ ಕಾಳ ಸಂತೆ ದಂಧೆ ಮಾಡುವ ಬಗ್ಗೆ ದೂರು ಬಂದಲ್ಲಿ ಅಂತಹ ವ್ಯಾಪಾರಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ಮಂಗಳೂರು ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಬೆಳಗ್ಗೆ 6ರಿಂದ 10ರವರೆಗೆ ಚಿಲ್ಲರೆ ವ್ಯಾಪಾರಸ್ಥರಿಗೆ ದಿನ ಬಳಕೆಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ, ಆದರೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಇದೇ ವೇಳೆ ಸಮೀಪದ ಎಲ್ಲ ದಿನಸಿ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ದಿನಬಳಕೆಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 12ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಖರೀದಿಯ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಬೇಕು. ವ್ಯಾಪಾರಸ್ಥರು ಶಿಸ್ತುಬದ್ಧ ಯೋಜನೆ ರೂಪಿಸದಿದ್ದರೆ ಅಂಗಡಿಗಳನ್ನು ಬಂದ್ ಮಾಡಿಸಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

    ಔಷಧ, ದಿನಸಿ ವಸ್ತುಗಳ ಕೊರತೆ ಆತಂಕ 
    ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಔಷಧ ಹಾಗೂ ಅಗತ್ಯ ದಿನಸಿ ವಸ್ತುಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಬಹುತೇಕ ಎಲ್ಲ ಔಷಧಿ ಅಂಗಡಿಗಳಲ್ಲಿ 2-3 ದಿನಗಳಿಗಾಗುವಷ್ಟು ಔಷಧಿಗಳ ದಾಸ್ತಾನು ಇದ್ದು, 2-3 ದಿನಗಳ ಒಳಗಾಗಿ ಔಷಧಿ ಸರಬರಾಜು ಆದರೆ ಮಾತ್ರ ಅಂಗಡಿಗಳಲ್ಲಿ ಅಗತ್ಯ ಔಷಧಿಗಳು ದೊರೆಯುವ ಸಾಧ್ಯತೆ ಇದೆ. ಇನ್ನೊಂದೆಡೆ ದಿನಸಿ ಅಂಗಡಿಗಳಲ್ಲಿ ಕೂಡ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ದಿನಸಿ ಅಂಗಡಿಗಳಲ್ಲಿ ಕೇವಲ 2-3 ದಿನಗಳಿಗಾಗುವಷ್ಟು ಸಾಮಾನುಗಳ ದಾಸ್ತಾನಿದೆ. ದಾಸ್ತಾನು ಖಾಲಿಯಾದರೆ ದೈನಂದಿನ ಬಳಕೆಯ ವಸ್ತುಗಳು ಕೊರತೆ ಎದುರಾಗುವ ಸಾಧ್ಯತೆ ಇದೆ.

    ಸಾರ್ವಜನಿಕರಿಗೆ ನೇರ ಪೂರೈಕೆ ಬಗ್ಗೆ ಸಭೆ: ದ.ಕ. ಜಿಲ್ಲೆಯಲ್ಲಿ ಅಗತ್ಯವಿದ್ದರೆ ಸಾರ್ವಜನಿಕರಿಗೆ ನೇರವಾಗಿ ಅಗತ್ಯವಸ್ತು ಪೂರೈಕೆ ಬಗ್ಗೆ ದಿನಸಿ ಅಂಗಡಿಗಳ ಪಟ್ಟಿ ಮಾಡಿ, ಅದರ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ. ಅಂಗಡಿಗಳ ವಲಯವಾರು ಪಟ್ಟಿ ಮಾಡಿದ್ದು, ನೇರ ಪೂರೈಕೆ ಬಗ್ಗೆಯೂ ಚರ್ಚೆ ಮಾಡಲಾಗಿದೆ.

    ಆಹಾರ ಸಾಮಗ್ರಿ ಪೂರೈಕೆ ತಡೆಯದಂತೆ ಡಿಸಿ ಸೂಚನೆ
    ಹೊರಜಿಲ್ಲೆಗಳಿಂದ ಬರುವ ಆಹಾರ ಸಾಮಗ್ರಿ, ದಿನಸಿ ಅಂಗಡಿ, ತರಕಾರಿ,ಹಣ್ಣು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
    ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ತರಕಾರಿ, ಅಕ್ಕಿ, ಹಣ್ಣುಹಂಪಲು ಸೇರಿದಂತೆ ಆಹಾರ ಸಾಮಗ್ರಿಗಳ ಪೂರೈಕೆ ನಿರಂತರವಾಗಿರಬೇಕು. ಅಕ್ಕಿ,ದಿನಸಿ, ತರಕಾರಿ, ಹಣ್ಣು ಹಂಪಲು ಸಾಗಿಸುವ ವಾಹನಗಳಿಗೆ ಯಾವುದೇ ಅಡೆತಡೆ ಮಾಡದಂತೆ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
    ಜಿಲ್ಲೆಗೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಇತರ ಜಿಲ್ಲೆಗಳಿಂದ ತರಕಾರಿ ಹಣ್ಣು ಹಂಪಲು ಸರಬರಾಜು ಆಗುತ್ತಿದ್ದು, ಅಕ್ಕಿ ಉಡುಪಿಯಿಂದ ರವಾನೆಯಾಗುತ್ತದೆ. ಇಂತಹ ವಾಹನಗಳ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅಡೆತಡೆ ಮಾಡದಂತೆ ಅವರು ಸೂಚಿಸಿದರು.

    ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಒಂದೇ ಬಾರಿಗೆ ಸಾಮಗ್ರಿ ಖರೀದಿಸುವ ಅಗತ್ಯವಿಲ್ಲ. ಆಹಾರ ಸಾಮಗ್ರಿ ಸಾಕಷ್ಟು ದಾಸ್ತಾನು ಇರುವಂತೆ ಅಹಾರ ಇಲಾಖೆಗೆ ಸೂಚಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲೂ ಸ್ಥಳೀಯ ತಂಡ ರಚಿಸಿ ನಿಗಾ ಇಡಲು ಸೂಚಿಸಲಾಗಿದೆ. ಜನರು ಅಂಗಡಿಗಳಿಗೆ ಮುಗಿ ಬೀಳಬಾರದು. ಮಾರುಕಟ್ಟೆಯಲ್ಲಿ ಆಹಾರ ಸಾಮಗ್ರಿಗಳ ಸರಬರಾಜು ಕೊರತೆಯಾಗದಂತೆ ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ರೂಪಾ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಡಿಸಿಪಿಗಳಾದ ಅರುಣಾಂಗ್ಶುಗಿರಿ, ಲಕ್ಷ್ಮೀಗಣೇಶ್, ಎಎಸ್ಪಿ ವಿಕ್ರಂ ಅಮಾಟೆ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts