More

    ಹೆದ್ದಾರಿ ಸಮೀಕ್ಷೆ ಅಂತಿಮ

    ಮನೋಹರ್ ಬಳಂಜ ಬೆಳ್ತಂಗಡಿ

    ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಎರಡನೇ ಹಂತದ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿದೆ. ಈಗಾಗಲೇ ಸರ್ಕಾರಿ ಹಾಗೂ ಕಂದಾಯ ಜಾಗಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ರಸ್ತೆಗಾಗಿ ಇನ್ನೂ ಹಲವು ಖಾಸಗಿ ಕಟ್ಟಡಗಳು ತೆರವುಗೊಳ್ಳಬೇಕಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಅವುಗಳ ಅಂತಿಮ ಹಂತದ ಸಮೀಕ್ಷೆ ನಡೆಸುತ್ತಿದ್ದಾರೆ.

    ಪುಂಜಾಲಕಟ್ಟೆ, ಮದ್ದಡ್ಕ, ಕುವೆಟ್ಟು, ಗುರುವಾಯನಕೆರೆ, ಬೆಳ್ತಂಗಡಿ, ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ ಮೊದಲಾದ ಗ್ರಾಮಗಳಲ್ಲಿ ಸಮೀಕ್ಷೆ ಪೂರ್ಣಗೊಂಡು ತೆರವುಗೊಳ್ಳಬೇಕಾದ ಕಟ್ಟಡಗಳನ್ನು ಗುರುತಿಸಲಾಗಿದೆ. ಲಾಲ, ಉಜಿರೆ ಭಾಗದಲ್ಲಿ ಸಮೀಕ್ಷೆ ನಡೆಯಬೇಕಿದೆ. ಈ ಮೊದಲು ತೆರವುಗೊಳ್ಳಬೇಕಾದ ಕಟ್ಟಡಗಳನ್ನು ಪ್ರಥಮ ಹಂತದಲ್ಲಿ ಗುರುತಿಸಲಾಗಿತ್ತು. 35 ಕಿ.ಮೀ. ವ್ಯಾಪ್ತಿಯ ಈ ರಸ್ತೆ ಹೆಚ್ಚು ನೇರಗೊಂಡು 33.1 ಕಿ.ಮೀ.ಗೆ ಸೀಮಿತವಾಗಲಿದೆ. ಇದಕ್ಕಾಗಿ ಈಗ ಅಂತಿಮ ಹಂತದ ಸಮೀಕ್ಷೆ ನಡೆಯುತ್ತಿದೆ.

    ತೆರವು ಕಾರ್ಯ

    ಈ ಹಿಂದೆ ಗುರುತಿಸಲಾದ ರಸ್ತೆಯ ಮಧ್ಯಭಾಗದಿಂದ ಸಮೀಕ್ಷೆ ನಡೆಸಿ ಕಟ್ಟಡ, ಮನೆ, ಅಂಗಡಿಗಳ ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಅಧಿಕಾರಿ ವರ್ಗದ ಮಾಹಿತಿ, ಸಮಜಾಯಿಷಿಗಳು ಜನರಿಗೆ ಅರ್ಥವಾಗುವ ರೀತಿಯಲ್ಲಿದ್ದು, ಅಧಿಕಾರಿ ವರ್ಗ ಜನಸ್ನೇಹಿಯಾಗಿ ವರ್ತಿಸುತ್ತಿದೆ ಎಂದು ಜನರು ತಿಳಿಸಿದ್ದಾರೆ. ರಸ್ತೆ ಬದಿ ಹಲವು ಅಂಗಡಿ, ಕಟ್ಟಡಗಳು ತೆರವುಗೊಳ್ಳುವ ಕಾರಣ ಅಂತಹ ಕಟ್ಟಡಗಳ ಮಾಲೀಕರಿಗೆ ಯಾವುದೇ ಹೆಚ್ಚುವರಿ ಕೆಲಸ ಮಾಡದಂತೆ ಸೂಚಿಸಲಾಗಿದೆ. ಮಾರ್ಚ್ ಒಳಗೆ ಸಂಪೂರ್ಣ ಚಿತ್ರಣ ದೊರಕಲಿದ್ದು, ಸಂಬಂಧಪಟ್ಟ ಕಚೇರಿ ಕೆಲಸ ಪೂರ್ಣಗೊಂಡ ಬಳಿಕ ತೆರವು ಕಾರ್ಯ ಆರಂಭವಾಗಲಿದೆ.

    ನಗರ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ

    ಗುರುವಾಯನಕೆರೆಯಿಂದ ಉಜಿರೆ ತನಕ ರಸ್ತೆಯ ವ್ಯಾಪ್ತಿ 30 ಮೀ. ಇರಲಿದ್ದು, 20 ಮೀ. ಹೆದ್ದಾರಿ ವ್ಯಾಪ್ತಿ ಹಾಗೂ 10 ಮೀ. ಪ್ರದೇಶದಲ್ಲಿ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಅಗತ್ಯ ಸ್ಥಳಗಳಲ್ಲಿ ಮೋರಿ, ಕಿರು ಸೇತುವೆ, ಸೇತುವೆ ನಿರ್ಮಾಣ, ರಸ್ತೆ ವಿಸ್ತರಣೆ ಇನ್ನಿತರ ಕಾಮಗಾರಿ ಅಹರ್ನಿಶಿಯಾಗಿ ಸಾಗುತ್ತಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆಯ ಅಗಲ 20 ಮೀ. ಇರಲಿದೆ. ರಸ್ತೆ ವ್ಯಾಪ್ತಿಯನ್ನು ಈಗಾಗಲೇ ಗುರುತಿಸಲಾಗಿದೆ.

    ಪುಂಜಾಲಕಟ್ಟೆಯಿಂದ ಉಜಿರೆ ಹಳೆಪೇಟೆ ತನಕ ರಸ್ತೆ ಬದಿ ಮರಗಳ ತೆರವು ನಡೆದಿದೆ. ಇಲ್ಲಿನ ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಪೂರ್ಣಗೊಂಡಿದೆ. ಉಜಿರೆಯಿಂದ ಚಾರ್ಮಾಡಿ ತನಕ ರಸ್ತೆ ಬದಿಮರಗಳ ತೆರವು, ವಿದ್ಯುತ್ ಲೈನ್ ಸ್ಥಳಾಂತರ ಇನ್ನಷ್ಟೇ ನಡೆಯಬೇಕಿದೆ. ಪೇಟೆ ಪ್ರದೇಶಗಳಲ್ಲಿ ಕಾಮಗಾರಿ ಮುಂದಿನ ಹಂತದಲ್ಲಿ ಆರಂಭವಾಗಲಿದೆ.

    ಘಾಟಿ ವಿಸ್ತರಣೆಗೆ ಅನುಮೋದನೆ

    ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಮೂರನೇ ಹಂತದ ಅಭಿವೃದ್ಧಿ ಕಾಮಗಾರಿಯಲ್ಲಿ ಚಾರ್ಮಾಡಿ ಘಾಟಿ ವಿಸ್ತರಣೆಗೆ 343.73 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ ದೊರಕಿದ್ದು, ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಇಪಿಸಿ ಮಾದರಿಯಲ್ಲಿ 10.8 ಕಿ.ಮೀ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ಈ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಪರಿವರ್ತಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ. ಚಾರ್ಮಾಡಿ ಘಾಟ್‌ನ ಗುಡ್ಡಗಾಡು ಪ್ರದೇಶದಲ್ಲಿ ಕೈಗೆತ್ತಿಕೊಳ್ಳುವಂತಹ ಉಪಕ್ರಮ ಸವಾಲಿನದ್ದಾಗಿದೆ. ಇದರೊಂದಿಗೆ ಸಂಚಾರ ವ್ಯವಸ್ಥೆ ಗಣನೀಯವಾಗಿ ಸುಧಾರಣೆಗೊಳ್ಳಲಿದೆ. ಘಾಟಿಯ ತಿರುವುಗಳು ನೇರಗೊಳ್ಳಲಿವೆಯೇ, ರಸ್ತೆಯ ಅಗಲ ವ್ಯಾಪ್ತಿ ಎಷ್ಟು ಎಂಬಿತ್ಯಾದಿ ವಿಚಾರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಘಾಟಿಯಲ್ಲಿ ರಸ್ತೆ ಮಾತ್ರವಲ್ಲದೆ ಶೌಚಗೃಹ, ಕಾಡ್ಗಿಚ್ಚು ಪ್ರಕರಣಕ್ಕೆ ತಡೆ ಸೇರಿದಂತೆ ಘಾಟಿಯ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಕೆಲಸ ನಡೆಯಬೇಕಿದೆ.

    ಸಮೀಕ್ಷೆ ಪೂರ್ಣಗೊಂಡ ಸ್ಥಳಗಳ ನಕ್ಷೆಯನ್ನು ಈಗಾಗಲೇ ಸಿದ್ಧಪಡಿಸುವ ಕೆಲಸ ನಡೆದಿದೆ. ಕೆಲವೊಂದು ಭಾಗಗಳಲ್ಲಿ ಸಮೀಕ್ಷೆ ಬಾಕಿ ಇದೆ. ಇಲಾಖೆ ಅಧಿಕಾರಿ ನವೀನ್, ಸರ್ವೇಯರ್‌ಗಳಾದ ಸಚಿನ್ ವಿನೋದ್ ಕುಮಾರ್, ಪ್ರಸನ್ನ ಕುಮಾರ್, ಸಚಿನ್ ಹಾಗೂ ಇತರರ ತಂಡದೊಂದಿಗೆ ಸಮೀಕ್ಷೆ ನಡೆಸಲಾಗುತ್ತಿದೆ.
    -ಹರೀಶ್, ರಾಷ್ಟ್ರೀಯ ಹೆದ್ದಾರಿಯ ಕಂದಾಯ ವಿಭಾಗ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts