More

    ಉನ್ನತ ಶಿಕ್ಷಣದಲ್ಲಿ ಕನ್ನಡಿಗರಿಗೆ ಬೇಕು ಆದ್ಯತೆ

    ಬೆಳಗಾವಿ: ‘ಉನ್ನತ ಶಿಕ್ಷಣ ಹಂತದ ವೈದ್ಯಕೀಯ, ಇಂಜಿನಿಯರಿಂಗ್, ಐಟಿ, ವಿಜ್ಞಾನ ಮತ್ತಿತರ ಕೋರ್ಸ್‌ಗಳ ಪಠ್ಯಕ್ರಮವನ್ನು ಕನ್ನಡದಲ್ಲಿ ಅಳವಡಿಸಲು ಸರ್ಕಾರ ಮನಸ್ಸು ಮಾಡಬೇಕು…’

    ಇದು, ಗಡಿಭಾಗ ಕಾಗವಾಡದಲ್ಲಿ ಜ. 30, 31ರಂದು ಜರುಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಆಶಯ. ಸಮ್ಮೇಳನ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಜತೆ ಅವರು ತಮ್ಮ ಮನದಾಳ ಹಂಚಿಕೊಂಡರು.

    ತಮಿಳುನಾಡು ಸರ್ಕಾರ ಈಗಾಗಲೇ ತಮಿಳು ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಶಿಕ್ಷಣಕ್ಕೆ ಮೀಸಲಾತಿ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಮೀಸಲಾತಿ ನೀಡಿದರೆ, ಕನ್ನಡದಲ್ಲಿ ವ್ಯಾಸಂಗ ಕೈಗೊಳ್ಳುವವರ ಸಂಖ್ಯೆ ಹೆಚ್ಚಲಿದೆ ಎಂದರು.

    ಕನ್ನಡ ಉಳಿಸಿ, ಬೆಳೆಸುವುದಕ್ಕಾಗಿ ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಏಕೆಂದರೆ, ಈಗಾಗಲೇ ತಂತ್ರಜ್ಞಾನದಲ್ಲಿ ಮುಂದುವರಿದ ರಾಷ್ಟ್ರಗಳಾದ ಚೀನಾ, ಜರ್ಮನ್, ಜಪಾನ್ ಮತ್ತಿತರ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣವನ್ನು ಅವರ ಮಾತೃಭಾಷೆಯಲ್ಲೇ ನೀಡಲಾಗುತ್ತಿದೆ ಎಂದರು.
    ಶೇ.100 ಕನ್ನಡ ಅನುಷ್ಠಾನವಾಗಲಿ: ನಮ್ಮಲ್ಲಿನ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಇಂಗ್ಲಿಷ್ ಭಾಷಾ ಪ್ರೇಮ ಅಧಿಕವಾಗುತ್ತಿದೆ. ಇಂಗ್ಲಿಷ್ ಈಗ ಅನ್ನ ಕೊಡುವ ಭಾಷೆಯಾಗಿ ಪರಿವರ್ತನೆಯಾಗಿದೆ. ಇದಕ್ಕೆ ಸರ್ಕಾರದ ನೀತಿ-ನಿಯಮ ಕಾರಣ. ನಿಜಕ್ಕೂ ಕನ್ನಡ ಉಳಿಯಬೇಕಾದರೆ ಸರ್ಕಾರ ಜಾರಿಗೊಳಿಸುವ ಕನ್ನಡಪರ ನೀತಿಗಳು ಕೇವಲ ಆದೇಶಕ್ಕೆ ಸೀಮಿತವಾಗಬಾರದು. ವಾಸ್ತವವಾಗಿ ಶೇಕಡಾ ನೂರರಷ್ಟು ಅನುಷ್ಠಾನಗೊಳ್ಳಬೇಕು ಎಂದು ಪ್ರತಿಪಾದಿಸಿದರು.

    ಉ.ಕ. ಭಾಗಕ್ಕೆ ಅನ್ಯಾಯ: ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ, ಉತ್ತರ ಕರ್ನಾಟಕಕ್ಕೆ ಹಿಂದಿನಿಂದಲೂ ಅನ್ಯಾಯವಾಗುತ್ತಲೇ ಇದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ರಚಿಸಿದ್ದ ನಂಜುಂಡಪ್ಪ ವರದಿ ಬೇರುಮಟ್ಟದಲ್ಲಿ ಅನುಷ್ಠಾನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನು ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಉತ್ತರ ಕರ್ನಾಟಕದ ಶಾಸಕರೆಲ್ಲ ಸೇರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾದೆವು. ಆದರೆ, ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕಾದ ಪ್ರಯತ್ನವನ್ನು ಯಾವುದೇ ಸರ್ಕಾರ ಮಾಡುತ್ತಿಲ್ಲ. ಸುವರ್ಣ ವಿಧಾನಸೌಧದಲ್ಲಿ ಈ ಭಾಗದ ಸಮಸ್ಯೆಗಳ ಚರ್ಚೆಗಾಗಿಯೇ ಪ್ರತ್ಯೇಕವಾಗಿ ಒಂದು ತಿಂಗಳ ಅಧಿವೇಶನ ನಡೆಸಬೇಕೆನ್ನುವ ಬೇಡಿಕೆ ಇತ್ತು. ಅದು ಈವರೆಗೂ ಈಡೇರಿಲ್ಲ. ಗಡಿಭಾಗದ ಶಕ್ತಿಕೇಂದ್ರಕ್ಕೆ ಆಯುಕ್ತರ ಮಟ್ಟದ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆ ಇಂದಿಗೂ ನನೆಗುದಿಗೆ ಬಿದ್ದಿದೆ ಎಂದು ಡಾ. ಕೋರೆ
    ಅವರು ಕಳವಳ ವ್ಯಕ್ತಪಡಿಸಿದರು.

    ಗಡಿ ಹೋರಾಟದ ದಿನಗಳ ನೆನಪು

    ನಮ್ಮ ತಂದೆಯವರು 1957ರಲ್ಲಿ ಮೊಟ್ಟಮೊದಲ ಬಾರಿಗೆ ಎಸ್. ನಿಜಲಿಂಗಪ್ಪ, ಗುದ್ಲೆಪ್ಪ ಹಳ್ಳಿಕೇರಿ ಸೇರಿ ಹಲವು ಹಿರಿಯರ ನೇತೃತ್ವದಲ್ಲಿ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ಅಂದು ಸುತ್ತಮುತ್ತಲಿನ ಜಿಲ್ಲೆಗಳಿಂದ 25 ಸಾವಿರಕ್ಕೂ ಅಧಿಕ ಜನರು ಆಗಮಿಸಿ ಗಡಿಭಾಗದಲ್ಲಿ ಕನ್ನಡಮ್ಮನ ತೇರು ಎಳೆದಿದ್ದರು. 500 ಜೋಡೆತ್ತುಗಳ ಚಕ್ಕಡಿಗಳ ಮೆರವಣಿಗೆ ನಡೆಸಿದ್ದರು. ನಾನು ಕೂಡ 2003ರಲ್ಲಿ ಬೆಳಗಾವಿಯಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಗೂ 2011ರಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ, ಕನ್ನಡ ಹಬ್ಬಗಳನ್ನು ಯಶಸ್ವಿಗೊಳಿಸಿದ್ದೇನೆ. ಬೆಳಗಾವಿಯಲ್ಲಿ ಕನ್ನಡ ಉಳಿಯಬೇಕಾದರೆ ಕೆಎಲ್‌ಇ ಸಂಸ್ಥೆಯ ಕೊಡುಗೆಯೂ ಅಪಾರವಾಗಿದೆ ಎಂದರು. ನಾನು ವಿದ್ಯಾರ್ಥಿಯಾಗಿದ್ದಾಗಲೇ ಅರವಿಂದ ಜೋಶಿ ಮತ್ತು ಜಿ.ಎ.ಪ್ರೌಢಶಾಲೆ ಪ್ರಾಚಾರ್ಯರಾಗಿದ್ದ ಹಿರಿಯ ಸಾಹಿತಿ ದಿ.ಎಸ್.ಡಿ.ಇಂಚಲ ಅವರು ನಮಗೆ ಕನ್ನಡ ಪ್ರೇಮವನ್ನು ಬೆಳೆಸಿ, ಪ್ರೋತ್ಸಾಹ ನೀಡಿದರು. ಅವರ ಪ್ರೇರಣೆಯಿಂದಲೇ ನಾವು ಗಡಿ ಹೋರಾಟದಲ್ಲಿ ಕನ್ನಡದ ಪರವಾಗಿ ನಿಂತು ಹೋರಾಟ ಮಾಡಿದೆವು. ಕನ್ನಡ, ಮರಾಠಿ ಗಡಿ ವಿವಾದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದ ಗಲಾಟೆಗಳಲ್ಲಿ ಪೊಲೀಸರ ಲಾಠಿ ಏಟು ತಿಂದಿದ್ದೇನೆ ಎಂದು ಹಿಂದಿನ ಹೋರಾಟದ ದಿನಗಳನ್ನು ನೆನಪಿಸಿಕೊಂಡರು.

    | ರಾಯಣ್ಣ ಆರ್.ಸಿ. ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts