More

    ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ-ಹೈಕೋರ್ಟ್‌ ತಡೆ ತೆರವು

    ಕಾರವಾರ/ಕುಮಟಾ:ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ವರ್ಷಾ ಫೌಂಡೇಷನ್ ಹೂಡಿದ್ದ ದಾವೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

    ಇದರಿಂದ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಇರುವ ತಡೆಯಾಜ್ಞೆ ತೆರವಾಗಿದೆ. ಯೋಜನೆಯ ಪರ ಹೈಕೋರ್ಟ್‌ನಲ್ಲಿ ಹೋರಾಟ ನಡೆಸಿದ್ದ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಗೆ ಜಯ ಸಿಕ್ಕಿದೆ ಎಂದು ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್, ಕಾರ್ಯದರ್ಶಿ ರಾಜೀವ ಗಾಂವಕರ್ ತಿಳಿಸಿದ್ದಾರೆ.

    ಕರ್ನಾಟಕ ವನ್ಯಜೀವಿ ಮಂಡಳಿಯ 13 ನೇ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ವಿರುದ್ಧ ವರ್ಷಾ ಫೌಂಡೇಷನ್‌ನ ಅನು ಚಂಗಪ್ಪ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

    ಈ ಯೋಜನೆಗೆ ಪ್ರಸ್ತಾಪಿತ ಸ್ಥಳವು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಸಿಂಗಳಿಕ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ ಎಂದು ಆಕ್ಷೇಪಿಸಿದ್ದರು. ಹೈಕೋರ್ಟ್ ಮಂಡಳಿಯ ನಿರ್ಣಯಕ್ಕೆ ತಡೆಯಾಜ್ಞೆ ನೀಡಿತ್ತು.

    ಇದನ್ನೂ ಓದಿ:ಕಾರ್ಮಿಕರ ಕಾರ್ಡ್‌ ನವೀಕರಣಕ್ಕೆ ಹಾಜರಾತಿ ಪಟ್ಟಿ ಕಡ್ಡಾಯ ಬೇಡ
    ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯು ಈ ತಡೆಯಾಜ್ಞೆಯನ್ನು ತೆರವು ಮಾಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಸಮಿತಿಯ ಪರವಾಗಿ ಆರ್.ಜಿ.ಕೊಲ್ಲೆ ವಾದ ಮಂಡಿಸಿದ್ದರು.

    ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗವು ಹುಲಿ ಸಂರಕ್ಷಿತ ಪ್ರದೇಶ ಅಥವಾ ಸಿಂಗಳಿಕ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿಲ್ಲ ಎಂದು ಸಮಿತಿಯು ನಕ್ಷೆಯೊಂದನ್ನು ಪ್ರಸ್ತುತಪಡಿಸಿತ್ತು. ಮಾತ್ರವಲ್ಲ ಅದಕ್ಕೆ ಅರಣ್ಯ ಇಲಾಖೆಯಿಂದ ಪಡೆದ ಸೂಕ್ತ ದಾಖಲೆಗಳನ್ನು ಒದಗಿಸಿತ್ತು.

    ಈ ನಡುವೆ ನ್ಯಾಯಾಲಯವು ವಿಶೇಷ ತಜ್ಞರ ತಂಡವನ್ನು ರಚಿಸಿ ಯೋಜನೆಯ ಸ್ಥಳ ಪರಿಶೀಲನೆ ನಡೆಸಿ ಕಾಲ ಮಿತಿಯಲ್ಲಿ ವರದಿ ನೀಡುವಂತೆ ವನ್ಯಜೀವಿ ಮಂಡಳಿಗೆ ಸೂಚಿಸಿತ್ತು.

    ವನ್ಯಜೀವಿ ಮಂಡಳಿಯಿಂದ ರಚಿತವಾದ ತಜ್ಞರ ಸಮಿತಿ ಸಾರ್ವಜನಿಕ ಅಹವಾಲು ಆಲಿಸುವ ಜತೆಗೆ ಸ್ಥಳ ಪರಿಶೀಲನೆ ನಡೆಸಿತ್ತು. ತಜ್ಞರ ಸಮಿತಿ ನೀಡಿದ ವರದಿ, ನೈರುತ್ವ ರೈಲ್ವೆ ನೀಡಿದ ಅಫಿಡವಿಟ್ ಹಾಗೂ ಸೇವಾ ಸಮಿತಿಯ ವಾದ, ವಿವಾದಗಳನ್ನು ಆಲಿಸಿದ ನ್ಯಾಯಾಲಯವು, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ, ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣದ ಮಹತ್ವವನ್ನು ನ್ಯಾಯಾಲಯ ಒಪ್ಪಿ, ಸಮಿತಿಯ ಪರ ತೀರ್ಪು ನೀಡಿದೆ ಎಂದು ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಹಾಗೂ ರಾಜೀವ ಗಾಂವಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಫಿಡವಿಟ್ ಸಲ್ಲಿಸಿದ ನೈರುತ್ಯ ರೈಲ್ವೆ
    ಈ ನಡುವೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೆಲವು ಬದಲಾವಣೆಗಳೊಂದಿಗೆ ಪರಿಷ್ಕೃತ ಯೋಜನೆ ರೂಪಿಸುವಂತೆ ನೈರುತ್ಯ ರೈಲ್ವೆಗೆ ಸೂಚಿಸಿದೆ.

    ರಾಷ್ಟ್ರೀಯ ವನ್ಯಜೀವಿ ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧ ಎಂದು ಯೋಜನೆ ಜಾರಿ ಮಾಡಲಿರುವ ನೈರುತ್ಯ ರೈಲ್ವೆ ಕೂಡ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಹಾಗಾಗಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಇರುವ ಅಡೆತಡೆ ಸಂಪೂರ್ಣ ನಿವಾರಣೆಯಾದಂತಾಗಿದೆ ಎಂದು ರಾಜೀವ ಗಾಂವಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts