More

    ಮಂಡಿ, ಸೊಂಟ, ಮೈಕೈ ನೋವೇ? ಪೇನ್ ಕಿಲ್ಲರ್ ಎಲ್ಲ ಬೇಕಿಲ್ಲ, ಮನೆಯಲ್ಲೇ ಮದ್ದು ಇದೆಯಲ್ಲ…!

    ಚಳಿಗಾಲವೆಂದರೆ ನೋವಿನ ಮಾತ್ರೆಗಳು ಅತಿ ಹೆಚ್ಚಾಗಿ ಮಾರಾಟವಾಗುವ ಕಾಲ. ಏಕೆಂದರೆ ಈ ಕಾಲದಲ್ಲಿಯೇ ಮಂಡಿನೋವು, ಸೊಂಟ ನೋವು, ಮೈಕೈ ನೋವುಗಳು ಹೆಚ್ಚಾಗುತ್ತವೆ. ಬಹುತೇಕ ಜನರು ನೋವಿನ ಮಾತ್ರೆಗಳಿಂದ ದುಷ್ಪರಿಣಾಮಗಳು ಆಗುತ್ತವೆ ಎಂಬುದನ್ನು ತಿಳಿದಿದ್ದರೂ ನೋವನ್ನು ತಡೆದುಕೊಳ್ಳಲಾರದೆ ಮಾತ್ರೆಗಳಿಗೆ ಮೊರೆಹೋಗುತ್ತಾರೆ. ನೈಸರ್ಗಿಕ ಚಿಕಿತ್ಸೆ ಮತ್ತು ಔಷಧಗಳ ಮೂಲಕ ಅಂದರೆ ನೈಸರ್ಗಿಕ ನೋವು ನಿವಾರಕಗಳ ಮೂಲಕ ಅಡ್ಡ ಪರಿಣಾಮವಿಲ್ಲದೇ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ.
    ಹಿಂದೆಲ್ಲಾ ವಯೋವೃದ್ಧರಿಗೆ ಮಾತ್ರ ಮಂಡಿನೋವು, ಸೊಂಟನೋವು ಮುಂತಾದ ನೋವಿನ ಸಮಸ್ಯೆಗಳು ಕಾಡುತ್ತಿದ್ದವು. ಆದರೆ ಇತ್ತೀಚೆಗೆ ಮೂವತ್ತರ ಒಳಗೆ ಕೂಡಾ ಈ ಸಮಸ್ಯೆ ಕಾಡಲು ಪ್ರಾರಂಭವಾಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನ ಶೈಲಿ. ಪೌಷ್ಟಿಕವಲ್ಲದ ಜಂಕ್‌ಫುಡ್‌ಗಳ ಸೇವನೆ, ವ್ಯಾಯಾಮ ರಹಿತ ಜೀವನ ಶೈಲಿ, ಆಹಾರದಲ್ಲಿ ಕಲಬೆರಕೆ, ಬಿಸಿಲಿಗೆ ಮೈಯೊಡ್ಡದೇ ಇರುವುದು, ಮುಟ್ಟು ನಿಂತ ನಂತರ ಆಗುವ ಹಾರ್ಮೋನ್ ವ್ಯತ್ಯಯ ಮುಂತಾದ ಹಲವು ಕಾರಣಗಳಿಂದ ಸಂಧಿನೋವು, ಸೊಂಟನೋವುಗಳು ಕಾಣಿಸಿಕೊಳ್ಳುತ್ತವೆ.

    ಕಾರಣಗಳು ಹಲವಿದ್ದರೂ ಸಮಸ್ಯೆ ಪ್ರಾರಂಭವಾಗುತ್ತಿದ್ದಂತೆಯೇ ಕೆಲವು ಕ್ರಮಗಳನ್ನು ವಹಿಸಿದರೆ ಈ ಸಮಸ್ಯೆಯನ್ನು ಬೇಗ ಗುಣಪಡಿಸಿಕೊಳ್ಳಬಹುದು. ಸಮಸ್ಯೆ ಹೆಚ್ಚಾದ ನಂತರವೂ ಇಂದು ಹೇಳುವ ಕ್ರಮಗಳನ್ನು ಪಾಲಿಸಿದರೆ ಮತ್ತು ನೈಸರ್ಗಿಕ ನೋವು ನಿವಾರಕಗಳನ್ನು ಬಳಸಿದರೆ ನೋವನ್ನು ಹಿಡಿತದಲ್ಲಿಟ್ಟುಕೊಂಡು ಆರೋಗ್ಯಯುತವಾಗಿ ಬದುಕಬಹುದು. ಅಡ್ಡಪರಿಣಾಮಗಳಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ನೋವು ನಿವಾರಿಸುವ ಶಕ್ತಿ ಶಲ್ಲಕಿ ಎಂಬ ಮರದ ಅಂಟಿಗೆ ಇದೆ. ಇದು ನಮ್ಮ ದೇಹದ ಮೇಲೆ ಆಧುನಿಕ ನೋವು ನಿವಾರಕಗಳು ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಅಥವಾ ಅದೇ ಕ್ರಮದಲ್ಲಿ ಕೆಲಸ ಮಾಡುತ್ತದೆ. ಆದರೆ ಇದರಿಂದ ಕಿಡ್ನಿಯ ಮೇಲೆ ಅಥವಾ ಹೊಟ್ಟೆಯ ಮೇಲೆ ಅಡ್ಡಪರಿಣಾಮಗಳು ಆಗುವುದಿಲ್ಲ. ನಮ್ಮ ಎಷ್ಟೋ ಔಷಧಗಳಲ್ಲಿ ಇದನ್ನು ಬಳಸಿ ಹಲವಾರು ರೋಗಿಗಳಲ್ಲಿ ಅದ್ಭುತ ಪರಿಣಾಮವನ್ನು ಕಂಡಿದ್ದೇವೆ. ಇದನ್ನು ಮನೆಮದ್ದಾಗಿ ಬಳಸಲು ಸಾಧ್ಯವಿಲ್ಲದಿದ್ದರೂ ಮಾತ್ರೆಗಳ ರೂಪದಲ್ಲಿ ಇದು ಲಭ್ಯವಿರುವುದರಿಂದ ವೈದ್ಯರ ಸಲಹೆ ಪಡೆದು ಎಲ್ಲರೂ ಬಳಸಬಹುದು. ಮನೆಮದ್ದಾಗಿ ಬಳಸಬಹುದಾದ, ಸುಲಭವಾಗಿ ಹಳ್ಳಿಗಳಲ್ಲಿ ಮತ್ತು ಗ್ರಂಧಿಗೆ ಅಂಗಡಿಗಳಲ್ಲಿ ಸಿಗುವ ಔಷಧವೆಂದರೆ ಅದು ಬಲಮೂಲ ಎಂಬ ಗಿಡ. ಇದಕ್ಕೆ ಕನ್ನಡದಲ್ಲಿ ಕಳ್ಳಂಗಡಲೆ ಎಂದು ಕರೆಯುತ್ತಾರೆ. ಎರಡು ಚಮಚದಷ್ಟು ಬೇರಿನ ಪುಡಿ ಹಾಕಿ ಅದಕ್ಕೆ ಒಂದು ಲೋಟ ಹಾಲು ಮತ್ತು 4 ಲೋಟ ನೀರು ಹಾಕಿ ಒಂದು ಲೋಟಕ್ಕೆ ಬರುವವರೆಗೆ ಬತ್ತಿಸಿ ಸೋಸಿ ಕುಡಿದರೆ ಮಾಂಸಖಂಡಗಳ ನೋವು, ಸಂಧಿನೋವು ಮತ್ತು ಮೈಕೈ ನೋವುಗಳು ಕಡಿಮೆಯಾಗಲು ತುಂಬಾ ಸಹಾಯವಾಗುತ್ತದೆ. ಇದರಿಂದ ದೈಹಿಕ ಶಕ್ತಿಯೂ ವೃದ್ಧಿಸುತ್ತದೆ. ಒಂದರಿಂದ ಒಂದೂವರೆ ತಿಂಗಳುಗಳ ಕಾಲ ಇದನ್ನು ಬಳಸಬಹುದು.

    ವಾತ ದೋಷವನ್ನು ತುಂಬಾ ಪರಿಣಾಮಕಾರಿಯಾಗಿ ನಿಯಂತ್ರಿಸುವ ಮತ್ತು ಸಂಧಿವಾತ, ಆಮವಾತ ಮುಂತಾದ ರೋಗಗಳಿಂದ ಉಂಟಾಗಿರುವ ನೋವನ್ನು ಕಡಿಮೆ ಮಾಡುವ ಇನ್ನೊಂದು ಅತ್ಯುತ್ತಮ ನೋವು ನಿವಾರಕ ಔಷಧವೆಂದರೆ ಅದು ಔಡಲ ಮರದ ಬೇರು. ಬಹುತೇಕ ಎಲ್ಲ ಊರುಗಳಲ್ಲಿ ಮತ್ತು ನಗರಗಳಲ್ಲಿ ಕಾಣಸಿಗುವ ಔಡಲ ಗಿಡದ ಬೇರನ್ನು ಸುಲಭವಾಗಿ ಕಿತ್ತುಕೊಳ್ಳಬಹುದು. ಕೆಲವು ಗ್ರಂಧಿಗೆ ಅಂಗಡಿಗಳಲ್ಲೂ ಏರಂಡಮೂಲ ಎಂಬ ಹೆಸರಿನಲ್ಲಿ ಸಿಗುತ್ತದೆ. ಸುಮಾರು 20 ಗ್ರಾಂ ಈ ಬೇರಿನ ಚಿಕ್ಕ-ಚಿಕ್ಕ ತುಂಡುಗಳನ್ನು ನಾಲ್ಕು ಲೋಟ ನೀರಿಗೆ ಹಾಕಿ ಸಣ್ಣ ಬೆಂಕಿಯಲ್ಲಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಕುಡಿದರೆ ನೋವು ಮತ್ತು ಬಾವು ಕಡಿಮೆಯಾಗುತ್ತವೆ. ಆಗಾಗ ಸೇವಿಸುತ್ತಿದ್ದರೆ ಅಮೃತಬಳ್ಳಿ ಕೂಡ ಒಂದು ಉತ್ತಮವಾದ ನೋವುನಿವಾರಕವೇ.

    ಅಡುಗೆಮನೆಯಲ್ಲಿ ಕೂಡಾ ನಾವು ನೈಸರ್ಗಿಕ ನೋವು ನಿವಾರಕಗಳನ್ನು ಕಾಣಬಹುದು. ಶುಂಠಿ, ಅರಿಶಿನ, ಕಾಳುಮೆಣಸು, ಜಾಯಿಕಾಯಿ ಇವೆಲ್ಲ ತಕ್ಕಮಟ್ಟಿಗೆ ನೋವನ್ನು ನಿಯಂತ್ರಿಸುತ್ತವೆ. ಹಳ್ಳಿಗಳಲ್ಲಿ ಇಂದಿಗೂ ಕಾಳುಮೆಣಸನ್ನು ಅರೆದು ಅಥವಾ ಜಾಯಿಕಾಯಿಯನ್ನು ತೇಯ್ದು ನೋವು ಮತ್ತು ಬಾವು ಇರುವ ಜಾಗದಲ್ಲಿ ಲೇಪ ಮಾಡುತ್ತಾರೆ. ಇದರಿಂದ ನೋವು ಮತ್ತು ಬಾವು ಕಡಿಮೆಯಾಗುತ್ತವೆ. ಹಾಗಾಗಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಇಂತಹ ಸಾಂಬಾರ ಪದಾರ್ಥಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಿದರೆ ನಿಧಾನವಾಗಿ ನೋವು ನಿಯಂತ್ರಣಕ್ಕೆ ಬರುತ್ತದೆ. ಒಟ್ಟಿನಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕವಾಗಿಯೇ ನಾವು ನೋವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

    ನಿಮ್ಹಾನ್ಸ್​ನಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಡಿ.7 ಕೊನೇ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts