More

    ಆಸ್ಪತ್ರೆಗಳಲ್ಲಿ ಹೆಲ್ಪ್‌ಡೆಸ್ಕ್, ಕೋಟ ಶ್ರೀನಿವಾಸ ಪೂಜಾರಿ ಸೂಚನೆ

    ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆ ಪ್ರಸ್ತುತ ಕೊವಿಡ್ ಚಿಕಿತ್ಸಾ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಇತರ ರೋಗಿಗಳಿಗೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಜನತೆಗೆ ಸ್ಪಷ್ಟ ಮಾಹಿತಿ ಒದಗಿಸಲು ಎಲ್ಲ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ತಕ್ಷಣ ಹೆಲ್ಪ್‌ಡೆಸ್ಕ್ ತೆರೆಯುವಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

    ಕರೊನಾ ನಿಯಂತ್ರಣ ಹಾಗೂ ಲಾಕ್‌ಡೌನ್ ಸಂಬಂಧಿಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಆರೋಗ್ಯ ಇಲಾಖೆ ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

    ಕೆಲವು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಆಯುಷ್ಮಾನ್ ಭಾರತ್ ಕಾರ್ಡ್ ಮತ್ತು ಆರೋಗ್ಯ ಕಾರ್ಡ್ ಇದ್ದವರಿಗೂ ಸೌಲಭ್ಯ ದೊರೆಯುತ್ತಿಲ್ಲ. ಕೆಲವು ಆಸ್ಪತ್ರೆಯವರು ಚಿಕಿತ್ಸೆಗೆ ಹಣ ಪಡೆದಿದ್ದಾರೆ. ಬಡ ರೋಗಿಗಳಿಗೆ ಸೂಕ್ತ ಮಾಹಿತಿ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಶಾಸಕರು ದೂರಿದರು.
    ವೆನ್ಲಾಕ್, ಕೆಎಂಸಿಯಲ್ಲಿ ಹೆಲ್ಪ್‌ಡೆಸ್ಕ್ ತೆರೆದು ಮಾಹಿತಿ ನೀಡಲಾಗುತ್ತಿದೆ. ಆರೋಗ್ಯ ಕಾರ್ಡ್ ಇಲ್ಲದ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ನಿಧಿಯಿಂದ ಭರಿಸಲಾಗುವುದು. ಈ ಬಗ್ಗೆ ಮೆಡಿಕಲ್ ಕಾಲೇಜು ಆಸ್ಪತ್ರೆಗಳಗೆ ಮಾಹಿತಿ ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದರು.

    ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ಹರೀಶ್ ಪೂಂಜ, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಮೇಯರ್ ದಿವಾಕರ್ ಪಾಂಡೇಶ್ವರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಿಇಒ ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಡಿಸಿಪಿ ಅರುಣಾಂಶಗಿರಿ ಉಪಸ್ಥಿತರಿದ್ದರು.

    835 ಮಾದರಿ ಪರೀಕ್ಷೆ: ವೆನ್ಲಾಕ್‌ನ ಲ್ಯಾಬ್‌ನಲ್ಲಿ ಎರಡು ಅವಧಿಯಲ್ಲಿ ಕರೊನಾ ಶಂಕಿತ ರೋಗಿಗಳ ಗಂಟಲಿನ ದ್ರವ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ದಿನಕ್ಕೆ 96 ಮಾದರಿ ಪರೀಕ್ಷೆಯನ್ನು ಮಾಡಬಹುದಾಗಿದ್ದು, ಇದುವರೆಗೆ 835 ಮಾದರಿ ಪರೀಕ್ಷೆ ನಡೆಸಲಾಗಿದೆ. ಕರೊನಾ ಚಿಕಿತ್ಸೆ ಸಂಬಂಧಿಸಿ ವೆನ್ಲಾಕ್‌ನಲ್ಲಿ 21, ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ 10 ಮತ್ತು ಇನ್ಫೋಸಿಸ್ ಕೊಡುಗೆಯಾಗಿ ನೀಡಿದ 2 ವೆಂಟಿಲೇಟರ್ ಸೌಲಭ್ಯವಿದೆ. ಇನ್ನು 3 ವೆಂಟಿಲೇಟರ್ ಸೌಲಭ್ಯ ಅಳವಡಿಕೆಯಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ವಿವರ ನೀಡಿದರು.

    ಮನೆ ಮನೆ ಸರ್ವೇ: ಮಂಗಳೂರು ನಗರ ಸಹಿತ ದ.ಕ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು, ಎಎನ್‌ಎಂ ಹಾಗೂ ಎಂಪಿಡಬ್ಲುೃ ಸಿಬ್ಬಂದಿ ಮನೆ ಭೇಟಿ ನೀಡಿ ಮುಂದಿನ 10 ದಿನಗಳಲ್ಲಿ ಕೊವಿಡ್ 19 ಸರ್ವೇ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು.

    ಅಂತಾರಾಜ್ಯ ಪಾಸ್ ಇಲ್ಲ: ತಲಪಾಡಿ ಗಡಿ ಸಂಬಂಧಿಸಿ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್‌ಗಳ ಮೂಲಕ ಬರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಏ.20ರಿಂದ ಲಾಕ್‌ಡೌನ್‌ನಲ್ಲಿ ಕೊಂಚ ಸಡಿಲಿಕೆ ಆದರೂ ಅಂತಾರಾಜ್ಯ ಪಾಸ್ ನೀಡಲು ಅವಕಾಶ ಇಲ್ಲ ಎಂದರು.

    ಹೊರ ರಾಜ್ಯದ ಮೀನು ಮಾರಾಟಕ್ಕೆ ಪ್ರತ್ಯೇಕ ಸ್ಥಳ: ಹೊರ ರಾಜ್ಯಗಳಿಂದ ಲಾರಿಯಲ್ಲಿ ತರುವ ಮೀನು ಮಾರಾಟಕ್ಕೆ ಪ್ರತ್ಯೇಕ ಸ್ಥಳ ಹಾಗೂ ಸಮಯ ನಿಗದಿಪಡಿಸುವಂತೆ ಸಚಿವ ಕೋಟ ಸೂಚನೆ ನೀಡಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಬಂದ್ ಆಗಿದೆ. ಆದರೆ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ಬಂದ ಮೀನು ಮಾರಾಟವಾಗುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ದೂರಿದರು.

    ಹೊರರಾಜ್ಯಗಳಿಂದ ಪ್ರತಿದಿನ ಸುಮಾರು 20 ಲಾರಿಯಲ್ಲಿ ಮೀನು ಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಉಡುಪಿ ಕಡೆಯಿಂದ ಬರುವ ಲಾರಿಗಳಿಗೆ ಬೈಕಂಪಾಡಿ ಎಪಿಎಂಸಿ, ಸುರತ್ಕಲ್ ಮೈದಾನ ಹಾಗೂ ಜಪ್ಪಿನಮೊಗರು ಮೈದಾನವನ್ನು ಪರಿಶೀಲಿಸಿ ಅಲ್ಲಿ ಮೀನಿನ ಸಗಟು ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸಂಸದ ನಳಿನ್‌ಕುಮಾರ್ ಕಟೀಲ್ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts