More

    ಹಣ ದುಪ್ಪಟ್ಟು ಮಾಡೋದಾಗಿ ಜನರಿಂದ ಹಣ ಸಂಗ್ರಹ: ಹೆಲಿಕಾಪ್ಟರ್​ ಬ್ರದರ್ಸ್​ರಿಂದ 600 ಕೋಟಿ ರೂ. ವಂಚನೆ!

    ಚೆನ್ನೈ: “ಹೆಲಿಕಾಪ್ಟರ್​​​ ಬ್ರದರ್ಸ್​” ಎಂದೇ ಪ್ರಖ್ಯಾತಿಯಾಗಿರುವ ತಮಿಳುನಾಡಿನ ಕುಂಭಕೋಣಂನ ಬಿಜೆಪಿ ವ್ಯಾಪಾರಿ ವಿಭಾಗದ ನಾಯಕರಿಬ್ಬರ ಹಣ ವಂಚನೆ ಆರೋಪ ಕೇಳಿಬಂದಿದೆ. ಹಣವನ್ನು ದುಪ್ಪಟ್ಟು ಮಾಡುತ್ತೇನೆಂದು ನಂಬಿಸಿ ಪಟ್ಟಣದ ಜನರ ಬಳಿ ಹಣ ಪಡೆದು ವಂಚನೆ ಮಾಡಿದ್ದಾರೆನ್ನಲಾಗಿದೆ. ಬರೋಬ್ಬರಿ 600 ಕೋಟಿ ರೂ. ವಂಚನೆ ಆರೋಪ ಅವರ ವಿರುದ್ಧ ಕೇಳಿಬಂದಿದೆ.

    ಸಹೋದರರಾದ ಮರಿಯೂರ್​ ರಾಮದಾಸ್​ ಗಣೇಶ್​ ಮತ್ತು ಮರಿಯೂರ್​ ರಾಮದಾಸ್​ ಸ್ವಾಮಿನಾಥನ್​ ಸೇರಿದಂತೆ ನಾಲ್ವರು ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್​ 406, 420 ಮತ್ತು 120 (ಬಿ) ಅಡಿಯಲ್ಲಿ ತಂಜಾವೂರು ಜಿಲ್ಲೆಯ ಅಪರಾಧ ವಿಭಾಗದ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

    ಹೆಲಿಕಾಪ್ಟರ್​ ಬ್ರದರ್ಸ್​ ಗಣೇಶ್​ ಮತ್ತು ಸ್ವಾಮಿನಾಥನ್​ ತಿರುವರ್ರೂರ್​ ಮೂಲದವರಾಗಿದ್ದು, ಕುಂಭಕೋಣಂನಲ್ಲಿ ಡೈರಿ ಉದ್ಯಮ ಸ್ಥಾಪಿಸಿ ಕಳೆದ 6 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದಾರೆ. ಸಹೋದರರಿಬ್ಬರು ರಾಜವೈಭೋಗದ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. 2019ರಲ್ಲಿ ಮಗುವಿನ ಮೊದಲ ಹುಟ್ಟುಹಬ್ಬದಂದು ಗಣೇಶ್ ತನ್ನ ಹೆಲಿಕಾಪ್ಟರ್​ನಲ್ಲಿ ಮಗುವಿನ ಮೇಲೆ ಗುಲಾಬಿ ದಳಗಳನ್ನು ಸುರಿಸಿದ್ದರು.

    ವಿಕ್ಟರಿ ಫೈನಾನ್ಸ್​ ಹೆಸರಿನ ಹಣಕಾಸು ಸಂಸ್ಥೆಯನ್ನು ಸಹ ಸಹೋದರರಿಬ್ಬರು ನಡೆಸುತ್ತಿದ್ದಾರೆ. 2019ರಲ್ಲಿ ಅರ್ಜುನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ (ಒಪಿಸಿ) ಹೆಸರಿನಲ್ಲಿ​ ವಾಯುಯಾನ ಕಂಪನಿಯನ್ನು ನೋಂದಾಯಿಸಿದ್ದಾರೆ. ಸ್ವಲ್ಪ ಹಣವನ್ನು ಹೂಡಿಕೆ ಮಾಡಿದರೆ ಒಂದೇ ವರ್ಷದಲ್ಲಿ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ಜನರನ್ನು ನಂಬಿಸಿ ಕಳೆದ ಕೆಲವು ವರ್ಷಗಳಿಂದ ಅವರ ಬಳಿ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಆರಂಭದಲ್ಲಿ ಅವರಿಬ್ಬರು ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದರು. ಆದರೆ, ಕರೊನಾ ಸಾಂಕ್ರಮಿಕ ದಿನಗಳಲ್ಲಿ ವಹಿವಾಟುಗಳಿಲ್ಲದೆ ಭರವಸೆ ಕುಸಿಯುತ್ತಾ ಬಂದಿತು. ತಮ್ಮ ಹಣ ಹಿಂದಿರುಗಿಸಿ ಎಂದು ಅನೇಕ ಜನರು ಕೇಳಲು ಆರಂಭಿಸಿದರು. ಕರೊನಾದಿಂದ ತುಂಬಾ ನಷ್ಟವಾಗಿದೆ ಎಂಬ ಕಾರಣವನ್ನು ಸಹೋದರರು ನೀಡಿದ್ದರು. ಅಲ್ಲದೆ, ಹಣ ಹಿಂದಿರುಗಿಸಲು ಹೆಚ್ಚಿನ ಸಮಯಾವಕಾಶವನ್ನು ಕೇಳಿದ್ದರು.

    ಇದರ ನಡುವೆ ಸಹೋದರರ ಯೋಜನೆಗೆ ಬಂಡವಾಳ ಹೂಡಿದ್ದ ಜಫರುಲ್ಲಾ ಮತ್ತು ಫೈರಾಜ್​ ಭಾನು ತಂಜಾವೂರು ಪೊಲೀಸ್​ ವರಿಷ್ಠಾಧಿಕಾರಿ ಎಸ್​ಪಿ ದೇಶ್​ಮುಖ್​ ಶೇಖರ್​ ಸಂಜಯ್​ಗೆ ದೂರು ನೀಡಿದ್ದಾರೆ. ಹೆಲಿಕಾಪ್ಟರ್​ ಬ್ರದರ್ಸ್​ ಹಣಕಾಸು ಸಂಸ್ಥೆಗೆ 15 ಕೋಟಿ ರೂ. ಬಂಡವಾಳ ಹಾಕಿದ್ದೇವೆ. ಇಂದಿಗೂ ನಮ್ಮ ಹಣವನ್ನು ಅವರು ಹಿಂದಿರುಗಿಸಿಲ್ಲ. ಅಲ್ಲದೆ, ಗಣೇಶ್​ ಮತ್ತು ಸ್ವಾಮಿನಾಥನ್​ ನಮಗೆ ಬೆದರಿಕೆ ಹಾಕುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

    ಮತ್ತೊಬ್ಬ ಹೂಡಿಕೆದಾರ ಗೋವಿಂದರಾಜ್​ ಕೂಡ ದೂರು ನೀಡಿದ್ದಾರೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಲ ಪಡೆದು ನಾನು ಕೂಡ 25 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದೇನೆ. ಆದರೆ, ಒಂದು ವರ್ಷದ ಬಳಿಕವೂ ನಮ್ಮ ಹಣವನ್ನು ಹಿಂದಿರುಗಿಸಿಲ್ಲ. ಹಣ ಕೇಳಿದರೆ, ರೌಡಿಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆಂದು ದೂರಿದ್ದಾರೆ.

    ಹೀಗೆ ಅನೇಕರು ಹೆಲಿಕಾಪ್ಟರ್​ ಬ್ರದರ್ಸ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಜಿಲ್ಲೆಯಾದ್ಯಂತ ಬ್ರದರ್ಸ್​ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿದೆ. ಇದರ ನಡುವೆಯೇ ಬ್ರದರ್ಸ್​ ನಾಪತ್ತೆಯಾಗಿದ್ದಾರೆ. ಸದ್ಯ ಅವರ ಹಣಕಾಸು ಸಂಸ್ಥೆಯ ಮ್ಯಾನೇಜರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಜಿಲ್ಲಾ ಬಿಜೆಪಿಯ ಉನ್ನತ ಸ್ಥಾನದಲ್ಲಿದ್ದ ಗಣೇಶ್​ನನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ.

    ಡೈರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಗಣೇಶ್​ ಮತ್ತು ಸ್ವಾಮಿನಾಥನ್​ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ನಡೆಸುತ್ತಿರುವ ಬಗ್ಗೆ ದೂರು ಕೇಳಿಬಂದಿದ್ದು, ಅವರ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಹೀಗಾಗಿ ಸೂಕ್ತವಾದ ಕ್ರಮ ಕೈಗೊಂಡು ಸತ್ಯಾಂಶ ಹೊರಗೆ ತನ್ನಿ ಎಂಬ ಆಗ್ರಹವೂ ಕೇಳಿಬಂದಿದೆ. ಕಪ್ಪು ಹಣ ವ್ಯವಹಾರದ ಹೊಗೆಯು ಪ್ರಕರಣದಲ್ಲಿ ಆವರಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಅಂಕಲ್​ 5 ಕೊಲೆಯಾಗಿವೆ ಭಯವಾಗ್ತಿದೆ ಬೇಗ ಬನ್ನಿ ಎಂದು ಕರೆ ಮಾಡಿದ ಬಾಲಕಿ: ಸ್ಥಳಕ್ಕೆ ಹೋದ ಪೊಲೀಸರಿಗೆ ಶಾಕ್!​

    ಮಹಾ ಮಳೆಗೆ 130 ಮಂದಿ ಬಲಿ: ಮಹಾರಾಷ್ಟ್ರದ ರಾಯಗಢ, ರತ್ನಗಿರಿ ಜಿಲ್ಲೆಯಲ್ಲಿ ಹೆಚ್ಚು ಅನಾಹುತ, ಹೆಲಿಕಾಪ್ಟರ್ ಮೂಲಕ ಹಲವರ ರಕ್ಷಣೆ

    ಶ್ರೀಲಂಕಾ ಎದುರು ಅಂತಿಮ ಏಕದಿನ ಪಂದ್ಯದಲ್ಲಿ ಎಡವಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts