More

    ಗಾಳಿ ಸಹಿತ ಮಳೆಗೆ ಹಲವೆಡೆ ಹಾನಿ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕೋಲಾರ ನಗರ ಸೇರಿ ಜಿಲ್ಲೆಯಾದ್ಯಂತ ಬುಧವಾರ ಗುಡುಗು ಸಹಿತ ಮಳೆಯಾಗಿದ್ದು, ಶ್ರೀನಿವಾಸಪುರದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿ ಕೆಲವಡೆ ಮಾವು, ಟೊಮ್ಯಾಟೊ ಬೆಳೆ ಹಾನಿಯಾಗಿದೆ.
    ನಗರದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹನಿ ಸುರಿಯಲಾರಂಭಿಸಿ ಹತ್ತು ನಿಮಿಷ ಗಾಳಿ ಸಹಿತ ಮಳೆ ಸುರಿಯಿತು. ಅನಿರೀಕ್ಷಿತ ಮಳೆಯಿಂದಾಗಿ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು ಅಂಗಡಿಗಳ ಶೆಲ್ಟರ್‌ನಡಿ ಆಶ್ರಯ ಪಡೆಯಲು ತಡಕಾಡಿದರು.
    ನಗರದ ಶ್ರೀ ವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿಯ ಪೆಟ್ರೋಲ್‌ಬಂಕ್ ಮುಂಭಾಗದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾದರೆ, ಕೆಇಬಿ ಸಮುದಾಯ ಭವನದ ಬಳಿ ಮಳೆ ನೀರು ಚರಂಡಿ ಹಾಗೂ ಯುಜಿಡಿಯಿಂದ ಕೊಚ್ಚೆ ನೀರು ರಸ್ತೆ ಮೇಲೆಯೇ ಹರಿದು ವಾಹನ ಸವಾರರು ಪರದಾಡುವಂತಾಯಿತು.
    ತಾಲೂಕಿನ ಹೋಳೂರು, ಮುದುವಾಡಿ, ಸುಗಟೂರು, ತೊಟ್ಲಿ ಸೇರಿ ಗ್ರಾಮೀಣ ಭಾಗದಲ್ಲಿ ಸಾಧಾರಣ ಮಳೆ ಬಿದ್ದಿದೆ. ನೀರುಣಿಸುವ ತೋಟಗಳಿಗೆ ಈ ಮಳೆ ಅನುಕೂಲವಾದರೆ, ಮಾವಿನ ಕಾಯಿ ಗಾತ್ರ ಹೆಚ್ಚಳಕ್ಕೂ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.
    ಮಾಲೂರಿನಲ್ಲಿ ಸಂಜೆ 5ರಿಂದ 6ರವರೆಗೆ ಉತ್ತಮ ಮಳೆಯಾದರೆ, ಮುಳಬಾಗಲು ಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ. ನಂಗಲಿ ಭಾಗದಲ್ಲಿ ಜೋರು ಮಳೆ ಬಿದ್ದಿದೆ.
    ಸಿಡಿಲು ಬಡಿದು ಎರಡು ನಾಯಿ ಸಾವು: ಶ್ರೀನಿವಾಸಪುರ ಪಟ್ಟಣದ ಕೋಲಾರ ರಸ್ತೆಯಿಂದ ದಳಸನೂರು, ಪಾಳ್ಯ ಗೇಟ್, ಯಲ್ದೂರು ಸೇರಿ ಗ್ರಾಮೀಣ ಭಾಗದಲ್ಲಿ ಕೆಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.
    ಕೋಲಾರ ರಸ್ತೆಯ ಹೊಸಹಳ್ಳಿಯ ರಸ್ತೆಯಲ್ಲಿ ಮರವೊಂದು ರಸ್ತೆಗೆ ಬಿದ್ದಿದೆ. ಆಲಿಕಲ್ಲು, ಗಾಳಿಗೆ ಕೊಯ್ಲಿಗೆ ಸಿದ್ಧವಾಗಿದ್ದ ಮಾವು ಉದುರಿದೆ. ಯಲವಳ್ಳಿ ಗ್ರಾಮದ ವೆಂಕಟಾಚಲಪತಿ ಎಂಬುವರ ಟೊಮ್ಯಾಟೊ ತೋಟಕ್ಕೆ ಕಾಲುವೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಲವು ವರ್ಷಗಳಿಂದ ನೀರೇ ಹರಿಯದಿದ್ದ ರಾಜಕಾಲುವೆಯಲ್ಲಿ ನೀರು ಹರಿದಿದೆ.
    ಲಕ್ಷ್ಮೀಸಾಗರ ಗ್ರಾಪಂ ವ್ಯಾಪ್ತಿಯ ಬೀರಗಾನಗಳ್ಳಿಯಲ್ಲಿ ಸಂಜೆ ಬಿರುಗಾಳಿ, ಗುಡುಗು-ಮಿಂಚು ಸಹಿತ ಮಳೆ ಬಿದ್ದಿದ್ದು, ಗ್ರಾಮದ ಸುರೇಶ್ ಎಂಬುವರು ಮರದ ಕೆಳಗೆ ಶೆಡ್ ನಿರ್ಮಿಸಿ ಕಾರು ನಿಲ್ಲಿಸಿದ್ದರು. ಈ ಶೇಡ್ ಪಕ್ಕದಲ್ಲೇ ಸಿಡಿಲು ಬಡಿದ ಪರಿಣಾಮ ಅಲ್ಲೇ ಮಲಗಿದ್ದ ಎರಡು ನಾಯಿಗಳು ಮೃತಪಟ್ಟಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts