More

    ಚನ್ನಪಟ್ಟಣ ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ?

    ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ಸಿಬ್ಬಂದಿ ಮೊಬೈಲ್, ಕಡತ ವಶ


    ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

    ನಗರಸಭೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಕಂಡು ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆಯೇ..? ಇಂತಹದೊಂದು ಚರ್ಚೆ ನಗರಸಭಾ ಆವರಣದಲ್ಲಿ ಕೇಳಿ ಬರುತ್ತಿದೆ.

    ಚನ್ನಪಟ್ಟಣ ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ದೂರು ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳ ತಂಡ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಲೋಕಾಯುಕ್ತ ಡಿವೈಎಸ್‌ಪಿಗಳಾದ ಗೌತಮ್, ಸುಧೀರ್ ನೇತೃತ್ವದಲ್ಲಿ ಸಿಪಿಐಗಳಾದ ಸತೀಶ್, ಅನಂತರಾಂ ಸೇರಿ ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿ ನಗರಸಭೆಯ ಪ್ರತಿವಿಭಾಗಗಳನ್ನು ಮಧ್ಯಾಹ್ನದಿಂದ ರಾತ್ರಿವರೆಗೂ ನಿರಂತರವಾಗಿ ಜಾಲಾಡಿದರು.

    ಇದರೊಂದಿಗೆ, ಕೆಲ ದೂರುದಾರರ ಸಮ್ಮುಖದಲ್ಲೇ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿದರು. ಕೆಲಸ ಕಾರ್ಯಗಳಿಗೆ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ವಿಚಾರಿಸಿದರು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳ ಸಮ್ಮುಖದಲ್ಲೇ ಹಲವು ಮಂದಿ ಪೌರಾಯುಕ್ತ ಹಾಗೂ ಕಂದಾಯ ಸಿಬ್ಬಂದಿ ವಿರುದ್ಧ ದೂರಿನ ಸುರಿಮಳೆಗೈದಿದ್ದು, ಲೋಕಾಯುಕ್ತ ಅಧಿಕಾರಿಗಳಿಗೆ ನಗರಸಭೆಯ ಭ್ರಷ್ಟಾಚಾರದ ದರ್ಶನವಾಯಿತು ಎನ್ನಲಾಗಿದೆ.

    ಮೊಬೈಲ್, ದಾಖಲೆ ವಶ!


    ನಗರಸಭೆಯಲ್ಲಿನ ಅಕ್ರಮ ಖಾತೆಗಳ ವಿಚಾರಕ್ಕೆ ಸಂಬಂಧಿಸಿದ ಹಾಗೂ ಖಾತೆಗಾಗಿ ಕಾಸು ವಿಚಾರವಾಗಿ ಹಲವು ಮಾಹಿತಿಗಳನ್ನು ಲೋಕಾಯುಕ್ತ ಅಧಿಕಾರಿಗಳ ತಂಡ ಸಂಗ್ರಹಿಸಿದ್ದು, ಅದರ ಪೂರಕ ದಾಖಲೆ, ಕಚೇರಿಯ ಕೆಲ ಕಡತಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳ ತಂಡ ಇನ್ನಷ್ಟು ಖಾತೆಗಳಿಗೆ ಸಂಬಂಧಿಸಿದ ಕಡತಗಳನ್ನು ನೀಡುವಂತೆ ತಾಕೀತು ಮಾಡಿದ್ದಾರೆ. ಇದರೊಂದಿಗೆ, ಬಹುಮುಖ್ಯವಾಗಿ ಪೌರಾಯಕ್ತ ಪುಟ್ಟಸ್ವಾಮಿ ಹಾಗೂ ನಗರಸಭೆಯ ಹೊರಗುತ್ತಿಗೆ ನೌಕರನೊಬ್ಬನ ಮೊಬೈಲ್ ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.

    ಹಣ ವರ್ಗಾವಣೆಯ ಸುಳಿವು?

    ಲೋಕಾಯುಕ್ತ ಅಧಿಕಾರಿಗಳ ವಶವಾಗಿರುವ ಮೊಬೈಲ್ನಿಂದ ಪೌರಾಯುಕ್ತರಿಗೆ ಉರುಳಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಖಾತೆಗಾಗಿ ಸಾರ್ವಜನಿಕರಿಂದ ಹಣ ಪಡೆದಿರುವ ಮಾಹಿತಿ, ಖಾತೆ ಮಾಡಲು ಅಧೀನ ಸಿಬ್ಬಂದಿಗೆ ಸೂಚಿಸಿರುವ ಸಂದೇಶಗಳು, ಸಂಬಂಧಿಕರ ಖಾತೆಗೂ ಹಣ ಹಾಕಿಸಿಕೊಂಡಿದ್ದಾರೆ ಎನ್ನುವ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದ್ದು, ಇವರೊಂದಿಗೆ, ಹೊರಗುತ್ತಿಗೆ ನೌಕರನ ಖಾತೆಯಿಂದಲೂ ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ.

    ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ವೇಳೆ ಅಕ್ರಮ ಖಾತೆ, ಸರಹದ್ದು ಮೀರಿ ಖಾತೆ ಮಾಡಿರುವುದು ಹಾಗೂ ನಿಯಮಾವಳಿ ಮೀರಿ ಖಾತೆ ಮಾಡಿರುವುದು ಕಂಡುಬಂದಿದೆ. ಲಭ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ದಿನದ ಒಳಗೆ ಸಮಜಾಯಿಷಿ ನೀಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ತನಿಖೆಯ ಕಥೆ ಏನು?

    ನಗರಸಭೆ ಪೌರಾಯುಕ್ತ ಪುಟ್ಟಸ್ವಾಮಿ ಹಾಗೂ ಕಂದಾಯ ಸಿಬ್ಬಂದಿ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಜಿಲ್ಲಾಧಿಕಾರಿಗಳು ತಂಡವೊಂದನ್ನು ನೇಮಿಸಿ ತನಿಖೆ ಸಹ ನಡೆಸಿದರು. ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವನಂಕರಿಗೌಡ ನೇತೃತ್ವದ ತಂಡ ದಿನ ಪೂರ್ತಿ ಕಚೇರಿಯಲ್ಲಿ ಬೀಡುಬಿಟ್ಟು ನಾನಾ ಮಾಹಿತಿ ಸಂಗ್ರಹಿಸಿದರು. ತದನಂತರ, ಆ ತಂಡ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. 

    ಜಿಲ್ಲಾಧಿಕಾರಿಗಳು ಈ ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ರವಾನಿಸಿದ್ದರು. ಆದರೆ, ಆ ತನಿಖೆಯ ಪ್ರಗತಿಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಳ್ಳಲಿಲ್ಲ. ಲಭ್ಯ ಮಾಹಿತಿ ಪ್ರಕಾರ ತನಿಖಾ ತಂಡ ದಾಖಲೆಗಳ ಸಮೇತ ಬರೋಬ್ಬರಿ 2,749 ಪುಟದ ವರದಿ ನೀಡಿದೆ ಎಂದು ತಿಳಿದುಬಂದಿದೆ. ಈ ವರದಿಯಲ್ಲೂ ನಗರಸಭೆಯಲ್ಲಿನ ಅಕ್ರಮಗಳ ಬಗ್ಗೆ ಸಾಕಷ್ಟು ಮಾಹಿತಿಗಳಿವೆ ಎನ್ನಲಾಗಿದೆ. ಈಗ, ಅದೇ ಮಾದರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಹ ತನಿಖೆ ನಡೆಸಿದ್ದು, ನಗರಸಭೆಯಲ್ಲಿನ ಕರ್ಮಕಾಂಡ ಬಯಲಾಗುವುದೇ ಎಂಬ ಪ್ರಶ್ನೆ ಮೂಡಿದೆ.


    ಲೋಕ ಗಮನಸೆಳೆದಿದ್ದ ವಿಜಯವಾಣಿ!

    ನಗರಸಭೆಯಲ್ಲಿನ ಅಕ್ರಮ ಖಾತೆ ಹಾಗೂ ಭ್ರಷ್ಟಾಚಾರದ ಬಗ್ಗೆ ವಿಜಯವಾಣಿ ಹಲವು ವರದಿಗಳನ್ನು ಪ್ರಕಟಿಸಿದೆ. ನಗರಸಭೆ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು, ನಗರಸಭೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಸಲುವಾಗಿ ಉಪಲೋಕಾಯುಕ್ತರ ಗಮನಕ್ಕೆ ವರದಿಯೊಂದನ್ನು ಸಲ್ಲಿಸಿದರು. ಈ ವರದಿಯ ಆಧಾರದ ಮೇಲೆ ಉಪಲೋಕಾಯುಕ್ತರು ಶೋಧನಾ ಆದೇಶ (ಸರ್ಚ್ ವಾರಂಟ್) ಹೊರಡಿಸಿದರು. ಅದರಂತೆ ಸೋಮವಾರ ನಗರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.



    ನಗರಸಭೆಯಲ್ಲಿ ಪರಿಶೀಲನೆ ವೇಳೆ ಅಕ್ರಮ ಖಾತೆ, ಸರಹದ್ದು ಮೀರಿ ಖಾತೆ ಮಾಡಿರುವುದು ಹಾಗೂ ನಿಯಮ ಉಲ್ಲಂಘಿಸಿ ಖಾತೆ ಮಾಡಿರುವುದು ಸೇರಿ ಹಲವು ಲೋಪದೋಷ ಕಂಡುಬಂದಿವೆ. ನಮಗೆ ಲಭ್ಯವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಾಜಾಯಿಷಿ ನೀಡುವಂತೆ ಪೌರಾಯುಕ್ತರಿಗೆ ಸ್ಥಳದಲ್ಲೇ ಆದೇಶ ನೀಡಿದ್ದೇವೆ. ತನಿಖೆ ವೇಳೆ ಕಂಡುಬಂದಿರುವ ವಿಚಾರಗಳ ಬಗ್ಗೆ ಉಪ ಲೋಕಾಯುಕ್ತರಿಗೆ ವರದಿ ನೀಡುತ್ತೇವೆ.
    ಗೌತಮ್, ಲೋಕಾಯುಕ್ತ ಡಿವೈಎಸ್ಪಿ ರಾಮನಗರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts