ಬಾಗಲಕೋಟೆ: ರಾಜ್ಯಾದ್ಯಂತ ಕರೊನಾ ಸೋಂಕಿತರನೇಕರು ಬೆಡ್ ಸಿಗುತ್ತಿಲ್ಲ, ಐಸಿಯು ಖಾಲಿ ಇಲ್ಲ, ಕಡೇಪಕ್ಷ ಅಗತ್ಯ ತುರ್ತು ಚಿಕಿತ್ಸೆಯೂ ಸಿಗುತ್ತಿಲ್ಲ ಎಂದು ಆಸ್ಪತ್ರೆಗಳಲ್ಲಿ ನರಳಾಡುತ್ತಿದ್ದಾರೆ, ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಆದರೆ ಆರೋಗ್ಯ ಇಲಾಖೆಯ ಕ್ಲರ್ಕ್ ಒಬ್ಬರು ಇಂಥ ಸಂದರ್ಭದಲ್ಲೂ ಲಂಚ ಸಂಗ್ರಹದಲ್ಲಿ ತೊಡಗಿದ್ದ ಅಮಾನವೀಯ ಪ್ರಕರಣ ಕಂಡುಬಂದಿದೆ.
ಕರೊನಾ ಸಂಕಷ್ಟದ ಸಂದರ್ಭದಲ್ಲಿ ಲಂಚದ ಹಣ ಸಂಗ್ರಹಿಸುತ್ತಿದ್ದ ಆರೋಗ್ಯ ಇಲಾಖೆಯ ಎಫ್ಡಿಎ ಕೊನೆಗೂ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ್ ನಿಡಸನೂರ ಬಂಧಿತ ಅಧಿಕಾರಿ. ಇವರು ಲಂಚ ಸಂಗ್ರಹದಲ್ಲಿ ತೊಡಗಿದ್ದ ಕುರಿತು ಖಚಿತ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು, ದಾಳಿ ನಡೆಸಿ ಬಂಧಿಸಿದ್ದಾರೆ.
ಇವರು ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆಯ ವಿವಿಧ ಕಚೇರಿಗಳಿಂದ ಪರ್ಸೆಂಟೇಜ್ ಆಧಾರದಲ್ಲಿ ಲಂಚದ ಹಣ ಸಂಗ್ರಹಿಸುತ್ತಿದ್ದರು. ಪ್ರಯಾಣ ಭತ್ಯೆ ಮಂಜೂರು ಸಂಬಂಧ ಈ ಲಂಚ ಸ್ವೀಕರಿಸಲಾಗುತ್ತಿದ್ದು, ಆ ಹಣವನ್ನು ಕಾರಿನಲ್ಲಿ ತರುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆ ನವನಗರ ಬಳಿ ಎಸಿಬಿ ಅಧಿಕಾರಿಗಳು ಕಾರನ್ನು ತಡೆದು ಪರಿಶೀಲಿಸಿದಾಗ, ಕಾರಿನಲ್ಲಿ 5 ಲಕ್ಷದ 8 ಸಾವಿರ ರೂಪಾಯಿ ಪತ್ತೆ ಆಗಿತ್ತು. ಅಲ್ಲದೆ ಪ್ರಯಾಣ ಭತ್ಯೆ ಬಿಲ್ಗಳೂ ಪತ್ತೆಯಾಗಿವೆ. ಎಸಿಬಿ ಇನ್ಸ್ಪೆಕ್ಟರ್ ಸಮೀರ್ ಮುಲ್ಲಾ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬಾಗಲಕೋಟೆ ಎಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!