More

    ಕೊಡಲಿಪೆಟ್ಟು ಕೊಟ್ಟು ಮರೆತುಬಿಟ್ಟರು, ಮರಗಿಡಗಳಿಲ್ಲದೆ ಕೈಗಾರಿಕಾ ಪ್ರದೇಶ ಭಣಭಣ

    ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    ನೂರಾರು ಎಕರೆ ಸ್ವಾಧೀನ ನೆಪದಲ್ಲಿ ಸಾವಿರಾರು ಮರಗಳಿಗೆ ಕೊಡಲಿಪೆಟ್ಟು ಹಾಕಿದ ಕೆಐಡಿಬಿ ಮತ್ತೆ ಸಸಿಗಳನ್ನು ನೆಟ್ಟು ಪರಿಸರಕ್ಕೆ ಮರುಜೀವನ ನೀಡುವ ವಾಗ್ದಾನವನ್ನೇ ಮರೆತುಬಿಟ್ಟಿದೆ…!

    ಹೌದು.. ಸೋಂಪುರ ಕೈಗಾರಿಕಾ ಪ್ರದೇಶದ ಅವ್ವೇರಹಳ್ಳಿಯ 4 ಮತ್ತು 5 ನೇ ಹಂತದಲ್ಲಿ ಸುಮಾರು 874 ಎಕರೆ ಪ್ರದೇಶವನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ವೇಳೆ ಹಲಸು, ಮಾವು, ಜಂಬುನೇರಳೆ, ತೆಂಗು ಸೇರಿ ಹಲವು ಜಾತಿಗಳ ಮರಗಳನ್ನು ಕಡಿದುರುಳಿಸಲಾಯಿತು. ಬಳಿಕ ಈ ಪ್ರದೇಶದ ಅಭಿವೃದ್ಧಿ ಜತೆಜತೆಗೆ ಅದೇ ಭಾಗಗಳಲ್ಲಿ ಸಸಿಗಳನ್ನು ನೆಡುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಎಲ್ಲಿಯೂ ಒಂದು ಸಸಿ ನೆಟ್ಟಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೈಗಾರಿಕಾ ಪ್ರದೇಶದ ಮುಖ್ಯಸ್ಥರು ಉತ್ತಮವಾದ ರಸ್ತೆ, ಬೀದಿದೀಪ ಅಳವಡಿಸಿದ್ದಾರೆ. ಆದರೆ ಸಸಿ ನೆಡುವ ಪ್ರಮುಖ ಕಾಯಕವನ್ನೇ ಕೈಬಿಟ್ಟಿದ್ದಾರೆ ಎಂಬುದು ಸ್ಥಳೀಯರ ದೂರು.

    ಈ ಮೊದಲು ಇಲ್ಲಿನ ಸಾಲು ಸಾಲು ಮರಗಳಲ್ಲಿ ವಿವಿಧ ಜಾತಿಯ ನೂರಾರು ಪಕ್ಷಿಗಳು ಗೂಡು ಕಟ್ಟಿಕೊಂಡಿದ್ದವು. ಗುಬ್ಬಿ ಸೇರಿ ವಿವಿಧ ಜಾತಿಯ ಪಕ್ಷಿಗಳ ಕಲರವ ಕೇಳುತ್ತಿದ್ದ ಜನತೆಗೆ ಕೇವಲ ಕಾರ್ಖಾನೆಗಳ ಕರ್ಕಶ ಶಬ್ದವಷ್ಟೇ ಕೇಳುವಂತಾಗಿದೆ. ಹಸಿರುಮಯವಾಗಿದ್ದ ಪ್ರದೇಶ ಕಾಂಕ್ರಿಟ್ ಕಾಡಿನಂತಾಗಿದೆ ಎಂದು ಸ್ಥಳೀಯ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

    ಪರಿಸರ ದಿನಾಚರಣೆಗಾದರೂ ಮುಂದಾಗಲಿ: ನಾಳೆ(ಜೂ.5) ಪರಿಸರ ದಿನಾಚರಣೆ, ಆ ದಿನವಾದರೂ ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆಗೆ ಸಂಬಂಧಿಸಿದವರು ಮುಂದಾಗಬೇಕು ಎಂಬುದು ಸ್ಥಳೀಯ ರೈತರ ಒಕ್ಕೊರಲ ಮನವಿಯಾಗಿದೆ.

    ಅವೇರಹಳ್ಳಿ ಕ್ಯೆಗಾರಿಕಾ ಪ್ರದೇಶದಲ್ಲಿ ಹಸಿರು ತುಂಬಿ ತುಳುಕುತ್ತಿತ್ತು. ಅನೇಕ ರೈತರು ಜಮೀನಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದರು. ತರಹೇವಾರಿ ಪಕ್ಷಿಗಳು ಬಂದು ಹೋಗುತ್ತಿದ್ದವು. ಇಂಥ ಪರಿಸರವೇ ಇಲ್ಲದಂತಾಗಿದೆ. ಮರ ಕಡಿದವರು ಬೆಳೆಸುವ ವಾಗ್ದಾನ ಮರೆತಿದ್ದಾರೆ.
    ಸುರೇಶ್, ಹೊನ್ನೆನಹಳ್ಳಿ ರೈತ

    ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವಾಗ ಕೆಐಡಿಬಿಯವರು ಮತ್ತೆ ಸಸಿಗಳನ್ನು ನೆಟ್ಟು ಮರಬೆಳೆಸುವ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸಲಿಲ್ಲ. ಇದರಿಂದ ಪರಿಸರ ಹಾಳಾಗಿದೆ.
    ಪ್ರಕಾಶ್, ಅವ್ವೇರಹಳ್ಳಿ ರೈತ

    ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡಲು ಅನುಮತಿ ಕೋರಿದ್ದಾರೆ. ಹಾಗೂ ಈ ಭಾಗದಲ್ಲಿ ಉದ್ಯಾನಗಳ ನಿರ್ಮಾಣದ ಪ್ರಸ್ತಾವನೆಯೂ ಇದೆ. ಇದಕ್ಕೆ ನಮ್ಮ ಕಡೆಯಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ.
    ಕೆ.ಇ.ಬಸವರಾಜು, ಕೆ.ಐ.ಡಿ.ಬಿ.ಅಭಿವೃದ್ಧಿ ಅಧಿಕಾರಿ

    ಅರಣ್ಯ ಇಲಾಖೆಯಿಂದ ಸಸಿ ನೀಡಲು ಸಿದ್ಧರಿದ್ದೇವೆ. ಕೆಐಡಿಬಿ ಸ್ವಾಧೀನಪಡಿಸಿಕೊಂಡಿರುವ ಸುಮಾರು 15 ಕಿಮೀ ಉದ್ದಕ್ಕೂ 4500 ಸಸಿಗಳನ್ನು ನೆಡಲು ಸಿದ್ಧತೆ ನಡೆಸಿದ್ದು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ.
    ಭಾಸ್ಕರ್, ಸಾಮಾಜಿಕ ಅರಣ್ಯಾಧಿಕಾರಿ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts