More

    ಹಂಪ್ಸ್ ತೆರವಾದ ಜಾಗದಲ್ಲಿ ಗುಂಡಿ, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ, ಅಪಘಾತದ ಭೀತಿಯಲ್ಲೇ ವಾಹನ ಸಂಚಾರ

    ದಾಬಸ್‌ಪೇಟೆ: ದಾಬಸ್‌ಪೇಟೆಯಿಂದ ರಾಮನಗರ, ಮಾಗಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ 3ರಲ್ಲಿ ಪ್ರತಿಯೊಂದು ಗ್ರಾಮದ ಬಳಿಯೂ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ರಸ್ತೆ ಉಬ್ಬುಗಳನ್ನು ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ತೆರವುಗೊಳಿಸಲಾಗಿದೆ. ಆದರೆ, ಹಂಪ್ಸ್ ತೆರವುಗೊಳಿಸಿದ ಬಳಿಕ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದ ಕಾರಣ ಅನಾಹುತಗಳಿಗೆ ಆಹ್ವಾನ ನೀಡಿದಂತಾಗಿದೆ.

    ರಸ್ತೆ ಉಬ್ಬು ತೆರವುಗೊಳಿಸಿದ ಜಾಗದಲ್ಲಿ ಒಂದರಿಂದ ಎರಡು ಅಡಿ ಅಗಲ ಗುಂಡಿಗಳು ಬಿದ್ದಿವೆ. ರಾತ್ರಿ ವೇಳೆ ಇದನ್ನು ಗಮನಿಸದೆ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೀಡಾಗಿ ಜೀವಹಾನಿಯಾಗುತ್ತಿದೆ. ಶಿವಗಂಗೆ ರಸ್ತೆಯ ಶಿವಶ್ರೀ ಕಲ್ಯಾಣ ಮಂಟಪದ ಎದುರು, ಹೊನ್ನೇನಹಳ್ಳಿ ತಾಂಡಾ, ಬರಗೇನಹಳ್ಳಿ, ಹೊನ್ನೇಹಳ್ಳಿ ಗ್ರಾಪಂ ಕಾರ್ಯಾಲಯದ ಎದುರು ಹಾಗೂ ಶಾರದಾ ಕ್ರಾಸ್‌ನಲ್ಲಿ ಈ ಸಮಸ್ಯೆ ತೀವ್ರವಾಗಿದೆ.

    ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ಕಾರು, ಬೈಕ್ ಸವಾರರು ಗುಂಡಿಯನ್ನು ಗಮನಿಸಿ ಹಠಾತ್ತನೆ ಬ್ರೇಕ್ ಹಾಕುವುದರಿಂದ, ಹಿಂದಿನಿಂದ ಬರುತ್ತಿರುವ ವಾಹನ ಚಾಲಕರಿಗೆ ಗೊತ್ತಾಗದೇ ಅಪಘಾತಗಳು ಸಂಭವಿಸುತ್ತಿವೆ. ಬೈಕ್ ಸ್ಕಿಡ್ ಆಗಿ ಬೀಳುವುದರಿಂದ, ಸವಾರರು ಗಾಯಗೊಳ್ಳುವುದು ಸಾಮಾನ್ಯವಾಗುತ್ತಿದೆ. ರಾತ್ರಿ ವೇಳೆಯಲ್ಲಿ ಅಪಘಾತಗಳು ಆಗುವುದು ಹೆಚ್ಚಾಗಿದೆ.

    ಟೋಲ್ ಸಂಗ್ರಹಕ್ಕೆ ಸೀಮಿತ: ಸರ್ಕಾರವು ಕೆಶಿಪ್ ಯೋಜನೆಯಡಿ ರಾಜ್ಯ ಹೆದ್ದಾರಿಯನ್ನು ನಿರ್ಮಿಸಿದೆ. ಗುತ್ತಿಗೆದಾರರು ಟೋಲ್ ಸಂಗ್ರಹಿಸಿಕೊಳ್ಳುತ್ತಾರೆ. ಇದಕ್ಕಾಗಿ ಗುಡೇಮಾರನಹಳ್ಳಿ ಬಳಿ ಟೋಲ್ ಸಂಗ್ರಹ ಕೇಂದ್ರ ಕೂಡ ಇದೆ. ಟೋಲ್ ಸಂಗ್ರಹಿಸಲಷ್ಟೇ ಸೀಮಿತರಾಗಿರುವ ಗುತ್ತಿಗೆದಾರರು ರಸ್ತೆಯ ನಿರ್ವಹಣೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ. ಗುಂಡಿಗಳನ್ನು ಮುಚ್ಚಲು ನಿರ್ಲಕ್ಷ್ಯ ತೋರುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.

    ಶಿವಗಂಗೆಯಿಂದ ದಾಬಸ್‌ಪೇಟೆ ತಲುಪುವ ಮಾರ್ಗದಲ್ಲಿ ಅತಿಹೆಚ್ಚು ಗುಂಡಿಗಳಾಗಿವೆ. ಇದರಿಂದ ವಾಹನ ಚಾಲನೆ ಪ್ರಾಯಾಸದಾಯಕವಾಗಿದೆ. ಅಧಿಕಾರಿಗಳು ಕೂಡಲೇ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಂಡು, ಜೀವಗಳನ್ನು ರಕ್ಷಿಸಬೇಕು.
    ರುದ್ರಾರಾಧ್ಯ, ಹೋನ್ನೆನಹಳ್ಳಿ ನಿವಾಸಿ

    ಅವೈಜ್ಞಾನಿಕವಾದವು ಎಂದು ಹೇಳಲಾಗುತ್ತಿದ್ದ ಹಂಪ್ಸ್‌ಗಳನ್ನು ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ತೆರವುಗೊಳಿಸಿದ್ದೇವೆ. ಆ ಸ್ಥಳದಲ್ಲಿ ಗುಂಡಿಗಳಾಗಿವೆ. ಮಳೆ ನಿಂತ ಬಳಿಕ ಗುಂಡಿಗಳನ್ನು ಮುಚ್ಚಲಾಗುವುದು.
    ನಟರಾಜು, ಲೋಕೋಪಯೋಗಿ ಇಲಾಖೆ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts