More

    ಅಶ್ಲೀಲ ದೃಶ್ಯಾವಳಿ ಹಂಚಿಕೆ ಹಾಗೂ ತಡೆಗೆ ಪೊಲೀಸ್ ವಿಫಲ:ಎಸ್ಪಿ ಮತ್ತು ಎಎಸ್ಪಿ ಅಮಾನತು ಆಗ್ರಹ

    ಹಾಸನ: ಪೆನ್‌ಡ್ರೈವ್ ಹಗರಣದಲ್ಲಿ ಜಿಲ್ಲೆಯ ಹೆಣ್ಣು ಮಕ್ಕಳ ಅಶ್ಲೀಲ ದೃಶ್ಯಾವಳಿ ಹಂಚಿಕೆ ಹಾಗೂ ತಡೆಗೆ ಯಾವುದೇ ಕ್ರಮ ಕೈಗೊಳ್ಳದ ಹಾಸನ ಎಸ್ಪಿ ಮತ್ತು ಎಎಸ್ಪಿ ಅವರನ್ನು ಕೊಡಲೇ ಅಮಾನತು ಮಾಡಬೇಕು ಎಂದು ಜಿಲ್ಲಾಧ್ಯಕ್ಷ ಧರ್ಮೇಶ್ ಆಗ್ರಹಿಸಿದರು.
    ಮಹಿಳೆಯ ಲೈಂಗಿಕ ದೌರ್ಜನ್ಯ ಸಂಬಂಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿಭೇಕು.
    ಹಾಗೆಯೇ ಪೆನ್‌ಡ್ರೈವ್ ಹಂಚಿದವರನ್ನೂ ಕೂಡಲೇ ಬಂಧಿಸಿ ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡುವುದರ ಜೊತೆಗೆ ಅಶ್ಲೀಲ ದೃಶ್ಯಾವಳಿ ಹರಿದಾಡದಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಸಂತ್ರಸ್ತೆ ಮಹಿಳೆ ಅಪಹರಣ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕಿತ್ತು. ಆದರೆ ಸರ್ಕಾರದ ನಡೆ ನೋಡಿದರೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಶಂಕೆ ವ್ಯಕ್ತಪಡಿಸಿದರು.ಕೂಡಲೇ ತಂದೆ-ಮಗನನ್ನು ಬಂಧಿಸದೇ ಇದ್ದರೆ ಗಂಭೀರ ಪ್ರಕರಣದ ಸಾಕ್ಷ್ಯ ನಾಶಪಡಿಸುವ ಆತಂಕ ಇದೆ. ಅಲ್ಲದೆ ಸಂತ್ರಸ್ತೆಯರ ಮೇಲೆ ಒತ್ತಡ ಮತ್ತು ಪ್ರಭಾವ ಬೀರಲು ಸರ್ಕಾರವೇ ಅವಕಾಶ ನೀಡಿದಂತಾಗಿದೆ ಎಂದು ದೂರಿದರು. ಹಾಗಾಗಿ ತಕ್ಷಣವೇ ರೇವಣ್ಣ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
    ಹಾಗೆಯೇ ಸಂತ್ರಸ್ತೆಯರ ಗುರುತು, ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಹಾಗೂ ಗೌಪ್ಯತೆ ಕಾಪಾಡಲು ಸರ್ಕಾರ ಮತ್ತು ಎಸ್‌ಐಟಿ ನಿಗಾವಹಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳದೆ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
    ಎಸ್‌ಐಟಿ ತನಿಖೆ ನಡೆಸುತ್ತಿದ್ದರೂ, ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ಫೋಟೊ, ವಿಡಿಯೋಗಳು ನಿತ್ಯವೂ ಹೊರ ಬರುತ್ತಲೇ ಇದ್ದು, ಇದನ್ನು ತಡೆಯಲು ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದ್ದು, ಇದಕ್ಕೆ ಕಾರಣರಾಗಿರುವ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಮತ್ತು ಕಾರು ಚಾಲಕ ಕಾರ್ತಿಕ್ ಅವರನ್ನು ಏಕೆ ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ ಎಂದು ಪ್ರಶ್ನಿಸಿದರು. ಇಲ್ಲಿ ಸಂಬಂಧಪಟ್ಟವರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದರು.
    ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶ್‌ಮೂರ್ತಿ ಮಾತನಾಡಿ, ಪೊಲೀಸ್ ಇಲಾಖೆ ಮೊದಲೇ ಎಚ್ಚೆತ್ತುಕೊಂಡಿದ್ದರೆ ಪೆನ್‌ಡ್ರೈವ್ ಹಗರಣದ ವಿಡಿಯೋ ಇಷ್ಟೊಂದು ಹರಿದಾಡುತ್ತಿರಲಿಲ್ಲ. ಇದರಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆ. ತಾವು ಕರೆ ಮಾಡಿ ಹೇಳಿದರೂ, ಪೊಲೀಸರು ಗಮನ ಹರಿಸಲಿಲ್ಲ ಎಂದು ದೂರಿದರು. ಇದಕ್ಕೆಲ್ಲಾ ಕಾರಣರಾಗಿರುವವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್, ಎದ್ದೇಳು ಕರ್ನಾಟಕದ ಸಮಿತಿಯ ಇರ್ಷಾದ್ ಅಹಮದ್, ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts