More

    ಆರೋಗ್ಯ ಕೇಂದ್ರದಲ್ಲಿ ಜನ್ಮದಿನಾಚರಣೆ ಅವಾಂತರ, ಪಟಾಕಿ ಗದ್ದಲಕ್ಕೆ ಸಾರ್ವಜನಿಕರ ಕಿಡಿ, ಆಂಬುಲೆನ್ಸ್ ಸಂಚಾರಕ್ಕೂ ಸಂಚಕಾರ

    ದಾಬಸ್‌ಪೇಟೆ: ಇಲ್ಲಿನ ಸರ್ಕಾರಿ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ನಡೆದ ತಾಲೂಕು ಬಿಜೆಪಿ ಉಪಾಧ್ಯಕ್ಷರ ಹುಟ್ಟುಹಬ್ಬ ಆಚರಣೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

    ಆರೋಗ್ಯ ಕೇಂದ್ರದ ಆವರಣದಲ್ಲೇ ಪಟಾಕಿ ಸಿಡಿಸಿ ಹುಟ್ಟುಹಬ್ಬ ಆಚರಿಸಿದ್ದು ಸ್ಥಳೀಯರ ಕಣ್ಣು ಕೆಂಪಾಗಿಸಿದೆ. ಆರೋಗ್ಯ ಕೇಂದ್ರದಲ್ಲಿ ಕಾಪಾಡಬೇಕಾದ ಶಾಂತಿ ವಾತಾವರಣಕ್ಕೆ ಧಕ್ಕೆ ತಂದು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಹುಟ್ಟುಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾವಿರಾರು ಜನ ಜಮಾಯಿಸಿದ್ದರಿಂದ ಇಡೀ ಆವರಣದಲ್ಲಿ ಜನದಟ್ಟಣೆ ಏರ್ಪಟ್ಟಿತ್ತು. ಇದು ಇಲ್ಲಿನ ಆಂಬುಲೆನ್ಸ್ ವಾಹನಗಳ ಸಂಚಾರಕ್ಕೂ ಅಡೆತಡೆಯುಂಟಾಯಿತು. ಜನದಟ್ಟಣೆ ನಡುವೆ ಸಿಕ್ಕಿಹಾಕಿಕೊಂಡ ಆಂಬುಲೆನ್ಸ್‌ಗಳು ಹೊರಹೋಗಲು, ಒಳಬರಲು ಹರಸಾಹಸ ನಡೆಸಬೇಕಾಯಿತು.

    ಅಡ್ಡಾದಿಡ್ಡಿ ಪಾರ್ಕಿಂಗ್: ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸಾವಿರಾರು ಬೆಂಬಲಿಗರು, ಅಭಿಮಾನಿಗಳು ಆಗಮಿಸಿದ್ದರಿಂದ ಆಸ್ಪತ್ರೆ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗಿತ್ತು. ಇದರಿಂದ ಇತರ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣುಹಂಪಲು ಆಚರಿಸುವುದು ಸಾಮಾನ್ಯ. ಆದರೆ ಆಸ್ಪತ್ರೆ ಆವರಣದಲ್ಲಿ ಪಟಾಕಿ ಸಿಡಿಸಿ ಗದ್ದಲ ಮಾಡುವುದು ನಿಯಮಬಾಹಿರ. ಬಿಜೆಪಿ ಮುಖಂಡರು ಇಂಥ ಸಂಸ್ಕೃತಿಗೆ ನಾಂದಿ ಹಾಡುತ್ತಿದ್ದಾರೆ.
    ಡಾ.ಕೆ.ಶ್ರೀನಿವಾಸಮೂರ್ತಿ, ನೆಲಮಂಗಲ ಶಾಸಕ

    ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸುವ ಸಂಬಂಧ ಅನುಮತಿ ಪಡೆಯಲಾಗಿದೆ. ಆದರೆ ಆಸ್ಪತ್ರೆ ಆವರಣದಲ್ಲಿ ಜನ್ಮದಿನ ಆಚರಿಸುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ.
    ಹರೀಶ್, ನೆಲಮಂಗಲ ಟಿಎಚ್‌ಒ

    ಆಸ್ಪತ್ರೆ ಆವರಣದಲ್ಲಿ ಪಟಾಕಿ ಸಿಡಿಸಿ ಗದ್ದಲ ಉಂಟು ಮಾಡಿರುವುದು ಅಕ್ಷಮ್ಯ, ಸಾವಿರಾರು ಜನರ ಜಮಾವಣೆಯಿಂದ ಆಸ್ಪತ್ರೆ ಆವರಣ ಜಾತ್ರೆಯಂತಾಗಿದ್ದು, ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಆಂಬುಲೆನ್ಸ್ ಹಾಗೂ ಇನ್ನಿತರ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದ್ದು ಇವೆಲ್ಲವೂ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತೆ.
    ರಂಗನಾಥ, ದಾಬಸ್‌ಪೇಟೆ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts