More

    ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪತಿ, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೃತ್ಯ, ಪೊಲೀಸರಿಗೆ ಶರಣಾದ ಆರೋಪಿ

    ದಾಬಸ್‌ಪೇಟೆ: ದಾಬಸ್‌ಪೇಟೆಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಕೌಟುಂಬಿಕ ಕಲಹದಿಂದ ಪತಿಯೇ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವನಿತಾ (25) ಮೃತೆ. ರಾಮು (28) ಆರೋಪಿ.

    ಸೋಂಪುರ ಹೋಬಳಿಯ ಆಲೇನಹಳ್ಳಿಯ ನಿವಾಸಿಯಾದ ರಾಮು ವರ್ಷದ ಹಿಂದಷ್ಟೇ ತುಮಕೂರು ತಾಲೂಕಿನ ಸಿ.ನಂದಿಹಳ್ಳಿ ವನಿತಾ ಅವರನ್ನು ಮದುವೆಯಾಗಿದ್ದ. ಇಬ್ಬರೂ ಎಂಬಿಎ ಪದವೀಧರರಾಗಿದ್ದು, ದಾಬಸ್‌ಪೇಟೆಯ ಸ್ವಂತ ಮನೆಯಲ್ಲಿ ವಾಸವಾಗಿದ್ದರು.
    ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದರಿಂದ ವನಿತಾ ತವರು ಮನೆ ಸೇರಿದ್ದರು. ಇತ್ತೀಚೆಗೆ ರಾಮು ಸಂಬಂಧಿ ಜತೆ ತೆರಳಿ ಪತ್ನಿ ಮನವೊಲಿಸಿ ಮನೆಗೆ ಕರೆ ತಂದಿದ್ದ. ಬುಧವಾರ ರಾತ್ರಿ ಪುನಃ ಜಗಳ ವಿಕೋಪಕ್ಕೆ ಹೋಗಿದ್ದು, ಪತಿಯೇ ಪತ್ನಿಯನ್ನು ಕೊಂದು, ಪೊಲೀಸರಿಗೆ ಶರಣಾಗಿದ್ದಾನೆ.

    ಪಾಲಕರ ಬಂಧನಕ್ಕೆ ಪಟ್ಟು: ಮಗಳು ಕೊಲೆಯಾಗಿರುವ ವಿಷಯ ತಿಳಿದು ಗುರುವಾರ ದಾಬಸ್‌ಪೇಟೆಗೆ ಆಗಮಿಸಿದ ವನಿತಾ ಪಾಲಕರು, ಆರೋಪಿ ರಾಮು ಪಾಲಕರು ಹಾಗೂ ಅಕ್ಕ, ಭಾವನನ್ನು ಬಂಧಿಸುವಂತೆ ಪಟ್ಟು ಹಿಡಿದರು. ತಪ್ಪಿತಸ್ಥರ ಬಂಧನವಾಗುವವರೆಗೂ ಶವವನ್ನು ಆಸ್ಪತ್ರೆಗೆ ಸಾಗಿಸಲು ಬಿಡುವುದಿಲ್ಲ ಎಂದು ಆಂಬುಲೆನ್ಸ್‌ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಸಿಗದಿದ್ದರೆ ಆರೋಪಿ ಮನೆ ಮುಂದೆಯೇ ಶವಸಂಸ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪೊಲೀಸರು ಎಲ್ಲರ ಮನವೊಲಿಸಿದರು. ಈ ನಡುವೆ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಮುಂದಾದವರ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರೂ ಗ್ರಾಮವನ್ನು ತೊರೆದಿದ್ದಾರೆ.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ತಹಸೀಲ್ದಾರ್ ಕೆ.ಮಂಜುನಾಥ್, ಡಿವೈಎಸ್‌ಪಿ ಗೌತಮ್, ವೃತ್ತ ನಿರೀಕ್ಷಕ ರಾಜೀವ್, ದಾಬಸ್‌ಪೇಟೆ ಆರಕ್ಷಕ ಉಪ ನಿರೀಕ್ಷಕ ಎಂ.ಎನ್.ಮುರಳಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳ ಪರಿಶೀಲನೆ ನಡೆಸಿದರು.

    ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ:  ಮದುವೆಯಾಗಿ ಒಂದು ವರ್ಷವಾಗಿತ್ತು. ಮದುವೆಯಾದಾಗಿನಿಂದಲೂ ಪತಿ-ಪತ್ನಿ ನಡುವೆ ಹೊಂದಾಣಿಕೆ ಇರಲಿಲ್ಲ. ಆದ್ದರಿಂದ ವನಿತಾ ನಮ್ಮ ಮನೆಯಲ್ಲೇ ಇದ್ದಳು. ಇತ್ತೀಚೆಗೆ ರಾಮು ಮತ್ತು ಸಂಬಂಧಿಗಳು ಬಂದು, ಕ್ಷಮಾಪಣೆ ಕೇಳಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಮಗಳನ್ನು ಕರೆತಂದಿದ್ದರು. ಈಗ ಕೊಲೆ ಮಾಡಿದ್ದಾನೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಣ್ಣೀರಿಟ್ಟರು ವನಿತಾ ತಾಯಿ ಮಹದೇವಮ್ಮ.
    ನಿವೃತ್ತ ಪೊಲೀಸನ ಮಗನಾದ ರಾಮು ಎಂಎನ್‌ಸಿ ಕಂಪನಿಯ ನೌಕರನೆಂದು ನಂಬಿಸಿ ಮದುವೆ ಮಾಡಿಕೊಂಡ. ಮದುವೆ ನಂತರ ಒಂದು ದಿನವೂ ಕೆಲಸಕ್ಕೆ ಹೋಗಲಿಲ್ಲ. ದಂಪತಿ ನಡುವೆ ಗಲಾಟೆಯಾಗಿದ್ದರಿಂದ ಸಂಧಾನ ಮಾಡಿಕೊಂಡು ಮಗಳನ್ನು ಕರೆತಂದ ಅಳಿಯ ಈಗ ಕೊಲೆ ಮಾಡಿಬಿಟ್ಟ ಎಂದು ಮೃತಳ ತಂದೆ ಪುಟ್ಟಸಿದ್ದಪ್ಪ ದುಃಖಿತರಾದರು.

    ಘಟನೆಗೆ ಸಂಬಂಧಿಸಿದಂತೆ ಪತಿ ರಾಮು, ತಾಯಿ ಅನ್ನಪೂರ್ಣಮ್ಮ, ತಂದೆ ಪುಟ್ಟರುದ್ರಯ್ಯ, ಅಕ್ಕ ಸೌಮ್ಯ, ಭಾವ ವಸಂತ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಮು ಪೊಲೀಸರಿಗೆ ಶರಣಾಗಿದ್ದು, ತಲೆ ಮರೆಸಿಕೊಂಡಿರುವವರ ಬಂಧನಕ್ಕೆ ತನಿಖೆ ನಡೆಸಲಾಗುತ್ತಿದೆ.

    ಕೋನವಂಶಿಕೃಷ್ಣ
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts