More

    ರಾಷ್ಟ್ರಧ್ವಜಕ್ಕೆ ಪಾಲಿಕೆಯಿಂದ ಅವಮಾನ; ಹರ್​ ಘರ್ ತಿರಂಗಾ ಅಭಿಯಾನ ಆರಂಭದಲ್ಲೇ ಯಡವಟ್ಟು

    ಕೇಶವಮೂತಿ೯ ವಿ.ಬಿ. ಹುಬ್ಬಳ್ಳಿ
    ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬೆನ್ನಲ್ಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯೂ ಅಂತಹದ್ದೇ ಯಡವಟ್ಟು ಮಾಡಿಕೊಂಡಿದೆ. ಬೇಕಾಬಿಟ್ಟಿಯಾಗಿ ತ್ರಿವರ್ಣ ಧ್ವಜ ಮುದ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ “ಹರ್​ ಘರ್ ತಿರಂಗಾ’ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಆರಂಭದಲ್ಲೇ ಯಡವಟ್ಟು ಮಾಡಿಕೊಂಡಿದೆ.
    ರಾಜ್ಯ ಸರ್ಕಾರದ ಸೂಚನೆಯಂತೆ “ಹರ್​ ಘರ್ ತಿರಂಗಾ’ ಅಭಿಯಾನಕ್ಕಾಗಿ ಈ ಬಾರಿ 1 ಲಕ್ಷ ತ್ರಿವರ್ಣ ಧ್ವಜ ಖರೀದಿಸಿದೆ. ಆದರೆ, ಇದರಲ್ಲಿ ಹಲವು ಧ್ವಜಗಳು ದೋಷಪೂರಿತವಾಗಿವೆ. ಬೇಕಾಬಿಟ್ಟಿಯಾಗಿ ಧ್ವಜ ತಯಾರಿಸಲಾಗಿದೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ಅಳತೆ ಹೆಚ್ಚು ಕಡಿಮೆಯಾಗಿದೆ. ಉದ್ದ ಮತ್ತು ಅಗಲ ನಿಯಮಾನುಸಾರ ಇಲ್ಲ. ಅಶೋಕ ಚಕ್ರ ಮಧ್ಯದಲ್ಲಿ ಇರದೇ ಎಡಕ್ಕೆ ಹಾಗೂ ಬಲಕ್ಕೆ ಮುದ್ರಿಸಲಾಗಿದೆ. ಅನೇಕ ಧ್ವಜಗಳ ಹೊಲಿಗೆ ಸಡಲಗೊಂಡಿವೆ. ಮತ್ತೆ ಕೆಲ ಧ್ವಜಗಳು ಹರಿದಿವೆ.
    ಹೀಗೆ ಹರಿದ, ದೋಷಪೂರಿತ ಧ್ವಜಗಳನ್ನು ಖರೀದಿಸಿರುವ ಮಹಾನಗರ ಪಾಲಿಕೆ ಅವುಗಳನ್ನು ಪಾಲಿಕೆ ಸದಸ್ಯರ ಮೂಲಕ ಸಾರ್ವಜನಿಕರಿಗೆ ಹಂಚಲು ಮುಂದಾಗಿದೆ. ಶೇ.70ಕ್ಕಿಂತ ಹೆಚ್ಚು ದೋಷಪೂರಿತ ಧ್ವಜಗಳು ವಲಯ 9ರ ಕೆಲ ವಾರ್ಡ್​ಗಳಲ್ಲಿ ಕಂಡುಬಂದಿವೆ. ಖರೀದಿಸಿದ ಧ್ವಜಗಳು ಸರಿಯಾಗಿ ಇವೆಯೇ ಎಂಬುದನ್ನೂ ಗಮನಿಸದೇ ವಲಯಾಧಿಕಾರಿಗಳು ಪಾಲಿಕೆ ಸದಸ್ಯರಿಗೆ ಹಂಚಿಕೆ ಮಾಡಿದ್ದಾರೆ. ಇಂತಹ ದೋಷಪೂರಿತ ಧ್ವಜಗಳನ್ನು ಜನರಿಗೆ ಹಂಚಿಕೆ ಮಾಡಲೂ ಆಗದೇ ಸುಮ್ಮನೆ ಕೂರಲೂ ಆಗದೇ ಪಾಲಿಕೆ ಸದಸ್ಯರು ಕಂಗಾಲಾಗಿದ್ದಾರೆ. ಇಂತಹ ಧ್ವಜಗಳನ್ನು ಹಂಚಿದರೆ ಖಂಡಿತ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಸದಸ್ಯರೊಬ್ಬರು “ವಿಜಯವಾಣಿ’ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
    1 ಲಕ್ಷ ಧ್ವಜ ಖರೀದಿ
    ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಇದರನ್ವಯ ಈಗಾಗಲೇ 1 ಲಕ್ಷ ಧ್ವಜ ಖರೀದಿಸಿದ್ದೇವೆ. ಸ್ವಸಹಾಯ ಸಂಗಳಿಂದ ನಿಮಿರ್ಸಿರುವ 25 ಸಾವಿರ ಧ್ವಜಗಳನ್ನು ಧಾರವಾಡ ಜಿಪಂನಿಂದ ಖರೀದಿಸಲಾಗಿದೆ. 25 ಸಾವಿರ ಧ್ವಜಗಳನ್ನು ಮಹಾರಾಷ್ಟ್ರದಿಂದ ಹಾಗೂ 50 ಸಾವಿರ ಧ್ವಜಗಳನ್ನು ಬೆಂಗಳೂರಿನಿಂದ ಖರೀದಿಸಲಾಗಿದೆ. ಇನ್ನೂ 35 ಸಾವಿರ ಧ್ವಜ ಖರೀದಿಸಲಿದ್ದೇವೆ. ಇದರಲ್ಲಿ ಅರ್ಧದಷ್ಟು ಧ್ವಜಗಳನ್ನು ಪಾಲಿಕೆ ಸದಸ್ಯರ ಮೂಲಕ ಸಾರ್ವಜನಿಕರಿಗೆ ಹಂಚಲಾಗುವುದು. ಉಳಿದ ಧ್ವಜಗಳನ್ನು ನಮ್ಮ ವಲಯಾಧಿಕಾರಿ ಕಚೇರಿ, ಬಸ್​ ನಿಲ್ದಾಣ, ರೈಲು ನಿಲ್ದಾಣ ಸೇರಿ ಜನನಿಬಿಡ ಪ್ರದೇಶಗಳಲ್ಲಿ 25 ರೂ.ಗೆ ಒಂದರಂತೆ ಮಾರಾಟ ಮಾಡಲಾಗುವುದು. ಯಾವುದೇ ರೀತಿ ಲೋಪಗಳು ಬರದಂತೆ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ..

    ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಖರೀದಿಸಿದ ಧ್ವಜಗಳಲ್ಲಿ ಶೇ.10ರಿಂದ 20ರಷ್ಟು ಧ್ವಜಗಳು ಹಾನಿಯಾಗಿವೆ. ಈ ಕುರಿತು ಈಗಾಗಲೇ ಧ್ವಜ ತಯಾರಿಸಿದವರಿಗೆ ತಿಳಿಸಿದ್ದೇವೆ. ಅಂತಹ ಧ್ವಜಗಳನ್ನು ವಾಪಸ್​ ಪಡೆದು ಉತ್ತಮವಾದ ಧ್ವಜಗಳ್ನು ಕಳುಹಿಸಲು ವಲಯಾಧಿಕಾರಿಗಳಿಗೆ ಸೂಚಿಸಲಾಗಿದೆ. > >ಡಾ.ಗೋಪಾಲಕೃಷ್ಣ ಬಿ., ಹು-ಧಾ ಪಾಲಿಕೆ ಆಯುಕ್ತ

    ರಾಷ್ಟ್ರಧ್ವಜ ತಯಾರಿಸಲು ತನ್ನದೇ ಆದ ನಿಯಮಗಳಿವೆ. ಹೀಗೆ ನಿಯಮಬದ್ಧವಾಗಿ ತಯಾರಿಸಿದ ಧ್ವಜಗಳನ್ನು ಮಾತ್ರ ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ವಿತರಿಸಬೇಕು. ದೋಷಪೂರಿತ ಧ್ವಜಗಳನ್ನು ಯಾವುದೇ ಕಾರಣಕ್ಕೂ ವಿತರಿಸಬಾರದು. ಇಲ್ಲದಿದ್ದರೆ ದೇಶಕ್ಕೆ ಅಪಮಾನ ಮಾಡಿದಂತಾಗುತ್ತದೆ.

    > ಮೋಹನ ಚಿತ್ತಲೆ, ನಿವೃತ್ತ ವಾಯುಸೇನಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts