More

    ಮೀಸಲಾತಿಗೆ ಹೋರಾಟಗಳು ಆತಂಕಕಾರಿ ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ ; ಸೀಗೇಹಳ್ಳಿ ಲಕ್ಷ್ಮೀದೇವಿ ದೇವಸ್ಥಾನ ಉದ್ಘಾಟನೆ

    ತುರುವೇಕೆರೆ: ಶೋಷಿತ ವರ್ಗಗಳಿಗೆ ಶೈಕ್ಷಣಿಕ, ಆರ್ಥಿಕ ಸಮಾನತೆ ನೀಡಲು ಮೀಸಲಾತಿ ಜಾರಿಗೆ ತಂದಿದ್ದು, ಇತ್ತೀಚಿನ ದಿನಗಳಲ್ಲಿ ಇದರ ಮಾನದಂಡ ಬದಲಾಗಿ ರಾಜಕೀಯ ಸ್ಥಾನಮಾನಗಳಿಗೂ ಮೀಸಲಾತಿ ಹೋರಾಟಗಳು ಆರಂಭಗೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

    ಮಾಯಸಂದ್ರ ಹೋಬಳಿ ಸೀಗೇಹಳ್ಳಿ ಲಕ್ಷ್ಮೀದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಶೆಟ್ಟಗೊಂಡನಹಳ್ಳಿಯಲ್ಲಿ ಹಳ್ಳಿಕಾರ್ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಚಮಸಾಲಿಗಳು 2ಎ ಮೀಸಲಾತಿಗೆ ಹೋರಾಟ ಮಾಡುತ್ತಿದ್ದು, ಕುರುಬ ಸಮುದಾಯದವರು ಎಸ್‌ಟಿ ಮೀಸಲಾತಿಗೆ ಸೇರಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಶೇ.15 ಮೀಸಲಾತಿ 2ಎ ವರ್ಗದಿಂದ ಬಿಟ್ಟು ಶೇ.3 ಇರುವ ಎಸ್‌ಟಿ ಮೀಸಲಾತಿಯನ್ನು ರಾಜಕೀಯ ಸ್ಥಾನಮಾನಕ್ಕಾಗಿ ಆಗ್ರಹಿಸುವುದು ಎಷ್ಟರ ಮಟ್ಟಿಗೆ ಸರಿ. ಜವಾಬ್ದಾರಿ ಸ್ಥಾನದಲ್ಲಿರುವವರು ಸಂವಿಧಾನದಲ್ಲಿರುವ ವಿಷಯಗಳನ್ನು ತಿಳಿಸಿ ಹೋರಾಟಗಾರರನ್ನು ಮನವೊಲಿಸಿ ಇಂತಹ ಹೋರಾಟಗಳನ್ನು ಸಣ್ಣದರಲ್ಲಿಯೇ ಬಗೆಹರಿಸಬೇಕು ಎಂದರು.

    ಶಾಸಕ ಮಸಾಲ ಜಯರಾಂ ಮಾತನಾಡಿ, ಶಾಸಕರ ಅನುದಾನ ಹಾಗೂ ವೈಯಕ್ತಿಕವಾಗಿ ಮಠದ ಸ್ಥಾಪನೆಗೆ ಉದಾರ ದೇಣಿಗೆ ನೀಡುತ್ತೇನೆ. ಇದರೊಂದಿಗೆ ಮಠಕ್ಕೆ ಹೊಂದಿಕೊಂಡಿರುವಂತೆ ಮತ್ತಷ್ಟು ಸ್ಥಳವನ್ನು ಬಗರ್ ಹುಕುಂ ಮೂಲಕ ದೊರಕಿಸಿಕೊಡಲಾಗುವುದು. ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಒಂದು ವಿದ್ಯುತ್ ಸ್ಥಾವರವನ್ನು ದೊರಕಿಸುತ್ತೇನೆಂದು ತಿಳಿಸಿದರು.
    ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ತಂದೆ-ತಾಯಿಗಳು ಮಕ್ಕಳನ್ನು ಹತೋಟಿಯಲ್ಲಿಟ್ಟು ಸಂಸ್ಕಾರದೊಂದಿಗೆ ಬೆಳೆಸಿ, ದುಶ್ಚಟಗಳಿಂದ ದೂರವಿರಿ ಹಾಗೂ ಎಲ್ಲರ ಅಭಿವೃದ್ದಿ ಬಯಸಿ ದ್ವೇಷ ಅಸೂಯೆಗಳನ್ನು ತ್ಯಜಿಸಿ ಎಂದರು.

    ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಎಂ.ಟಿ.ಕೃಷ್ಣಪ್ಪ, ಡಾ.ಹೇಮಚಂದ್ರ ಸಾಗರ್, ದೊಡ್ಡಾಘಟ್ಟ ಚಂದ್ರೇಶ್, ಹಿರಿಯ ವಕೀಲರಾದ ಸಿ.ನಾಗಯ್ಯ, ತಾಪಂ ಸದಸ್ಯ ಮಹಲಿಂಗಯ್ಯ, ರಂಗನಟ ರಂಗಶ್ರೀ ಟ್ರಸ್ಟಿನ ಪದಾಧಿಕಾರಿಗಳು ಇದ್ದರು.

    ಅಲ್ಪಸಂಖ್ಯಾತರೆಂಬ ಭಾವನೆ ಬೇಡ: ಐತಿಹಾಸಿಕ ಪರಂಪರೆಯುಳ್ಳ ಹಳ್ಳಿಕಾರ್ ಸಮುದಾಯ ಇದೇ ಮೊದಲ ಬಾರಿಗೆ ಸಂಘಟನೆಗೊಂಡು ಮಠದ ಸ್ಥಾಪನೆಯೊಂದಿಗೆ ಸಾಮಾಜಿಕ ನ್ಯಾಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಅಲ್ಪ ಸಂಖ್ಯಾತರೆಂಬ ಭಾವನೆಗಳು ನಿಮ್ಮಲ್ಲಿ ಬೇಡ. ಈ ಭಾಗದ ನಟ ವಜ್ರಮುನಿ ಇದೇ ಸಮುದಾಯದ ಮಾಜಿ ಶಾಸಕರು, ಉಪಕುಲಪತಿಗಳೂ ಆದ ಡಾ.ಹೇಮಚಂದ್ರ ಸಾಗರ್ ಅವರು ಸಮಾಜ ನೆನಪಿಸುವಂಥ ಕೊಡುಗೆಗಳನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಹಳ್ಳಿಕಾರ್ ಸಮುದಾಯ ಬಯಸುವ ಎಲ್ಲ ಸಹಕಾರ ನೀಡುವುದರೊಂದಿಗೆ ನಿಮ್ಮ ನೈತಿಕ ಬೆಂಬಲಿಕ್ಕೆ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶುಭ ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts