More

    ಗಜಾರಣ್ಯದ ಮುನಿಬಾರೆ: ಪರಮೇಶ್ವರನು ಮುನೀಶ್ವರನಾಗಿ ತಪಗೈದ ಪುಣ್ಯ ನೆಲೆ

    ತುರುವೇಕೆರೆ: ಸಾಕ್ಷಾತ್ ಪರಮೇಶ್ವರನು ಮಹಾಮಹಿಮ ಮುನೀಶ್ವರನಾಗಿ ತಪಗೈದ ಪುಣ್ಯ ನೆಲೆ ತುರುವೇಕೆರೆ ತಾಲೂಕಿನ ತಿಮ್ಮನಹಳ್ಳಿಯ ಮುನೀಶ್ವರ ನಗರ ಸುಕ್ಷೇತ್ರ.

    ಧರ್ಮ ಸಂರಕ್ಷಣಾರ್ಥವಾಗಿ ಮಹೇಶ್ವರನು ಬ್ರಹ್ಮ, ವಿಷ್ಣು ಸಹಿತವಾಗಿ ಲೋಕಸಂಚಾರ ಕೈಗೊಳ್ಳುತ್ತಾನೆ. ಗಜಾರಣ್ಯದಲ್ಲಿ ಸಂಚರಿಸುತ್ತಾ ಈ ದಿವ್ಯಕ್ಷೇತ್ರದ ಬಾರೆ ಪ್ರದೇಶಕ್ಕೆ ಬಂದು ಇಲ್ಲಿನ ಧರ್ಮಕಂಟಕರಾದ ದುಷ್ಟರನ್ನು ನಿಗ್ರಹ ಮಾಡಿ ಇಲ್ಲಿನ ನಿಸರ್ಗ ರಮಣೀಯ ಪ್ರಶಾಂತ ಪರಿಸರಕ್ಕೆ ಮನಸೋತು ಇಲ್ಲಿಯೇ ಬೆಳೆದಿದ್ದ ಒಂದು ವಿಶಾಲ ಬಿಳಿ ಎಕ್ಕದ ಬುಡದಲ್ಲಿ ನೆಲೆಸಿ ತಪೋನಿರತನಾಗುತ್ತಾನೆ. ವಿಘ್ನ ನಿವಾರಕನಾದ ವಿನಾಯಕನೂ ಇದೇ ವೃಕ್ಷದ ಬುಡದಲ್ಲಿ ಸ್ವಯಂ ಭೂ ಆರ್ಕ ಗಣಪತಿಯಾಗಿ ನೆಲೆ ನಿಲ್ಲುತ್ತಾನೆ. ಪಾರ್ವತಿದೇವಿ ತನ್ನ ಇನ್ನೊಬ್ಬ ಕುವರ ಸುಬ್ರಹ್ಮಣ್ಯನ ಜತೆ ಪತಿ, ಪುತ್ರರನ್ನು ಹುಡುಕಿ ಬರುತ್ತಾಳೆ.

    ಗಂಡನ ತಪಸ್ಸಿಗೆ ಭಂಗ ಬಾರದಂತೆ ತಾನೂ ನಿರಾಹಾರ ವ್ರತಭೂಷಿತಳಾಗಿ ಭಕ್ತರ ಅಭಯಪ್ರದೆ ಅಪರ್ಣದೇವಿಯಾಗಿ ನೆಲೆಸುತ್ತಾಳೆ. ಸುಬ್ರಹ್ಮಣ್ಯನೂ ಸಹ ಸರ್ಪರೂಪ ತಾಳಿ ಈ ಪ್ರದೇಶದಲ್ಲಿ ಸ್ವಚ್ಛಂದವಾಗಿ ಸಂಚರಿಸುತ್ತಾ ಕೃಷಿಕರ ಬೆಳೆಗಳನ್ನು ರಕ್ಷಿಸುತ್ತಾ, ಕಳ್ಳಕಾಕರಿಂದ ರಕ್ಷಣೆ ನೀಡುತ್ತಾ ಈ ಕ್ಷೇತ್ರದಲ್ಲೇ ನೆಲೆಸುತ್ತಾನೆ. ಹಾಗಾಗಿ ಈ ಕ್ಷೇತ್ರವು ಗಜಾರಣ್ಯದ ಮುನಿಬಾರೆ ಎಂದೇ ಪ್ರಸಿದ್ಧವಾಗಿದೆ.

    ಗಜಾರಣ್ಯದ ಮುನಿಬಾರೆ: ಪರಮೇಶ್ವರನು ಮುನೀಶ್ವರನಾಗಿ ತಪಗೈದ ಪುಣ್ಯ ನೆಲೆ
    ಆರ್ಕ ಗಣಪತಿ

    ಅನ್ನ ಮತ್ತು ಜ್ಞಾನ ದಾಸೋಹ ನಿರಂತರ: ಕ್ಷೇತ್ರ ಮುನೀಶ್ವರ ಮಠದಲ್ಲಿ ಕಳೆದೊಂದು ದಶಕದಿಂದ ಮರಕೊಂದು ಕಾಯಿ: ಮನೆಗೊಂದು ಪಡಿ : ಹಿಡಿ ಹುಲ್ಲು ಗೋಕುಲಕೆ ಯೋಜನೆಯ ಮೂಲಕ ಅನ್ನ ಮತ್ತು ಜ್ಞಾನ ದಾಸೋಹ ನಿರಂತರ ನಡೆದಿದೆ. ಎಲ್.ಕೆ.ಜಿಯಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಗುರುಕುಲ ವಿದ್ಯಾಮಂದಿರ ಎಂಬ ಹೆಸರಿಗೆ ಅನ್ವರ್ಥವಾಗುವಂತೆ ಇಲ್ಲಿನ ವಿದ್ಯಾರ್ಥಿಗಳಿಗೆ ಗುರುಕುಲ ಮಾದರಿಯಲ್ಲಿ ಪ್ರತಿವರ್ಷ ರಾಜ್ಯಮಟ್ಟದ ಸಂಸ್ಕಾರ ಜಾಗೃತಿ ಶಿಬಿರ ಏರ್ಪಡಿಸುವ ಮೂಲಕ ಭಾರತೀಯ ಮೌಲ್ಯ ಮತ್ತು ಪರಂಪರೆಯ ಜ್ಞಾನದ ದರ್ಶನ ಮಾಡಿಸಲಾಗುತ್ತಿದೆ. ಪ್ರಾಚೀನ ಪರಂಪರೆಯ ಮೌಲ್ಯ ಶಿಕ್ಷಣದ ಜತೆಗೆ ಅತ್ಯಾಧುನಿಕ ಶಿಕ್ಷಣ ಪ್ರದಾನ ಮಾಡುವಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಅನುವಾಗುವಂತೆ ಜ್ಞಾನದ ವಿವಿಧ ಶಾಖೆಗಳನ್ನು ಪರಿಶೋಧಿಸಲು ಗಣಕಯಂತ್ರ ಮತ್ತು ಅಂತರ್ಜಾಲದ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಪ್ರಯೋಗಶಾಲೆ, ಯೋಗಮಂದಿರ, ಗ್ರಂಥಾಲಯಗಳೂ ಇವೆ.

    ಕ್ಷೇತ್ರಕ್ಕೆ ಬರುವುದು ಹೇಗೆ?: ಬೆಂಗಳೂರಿನಿಂದ ಕುಣಿಗಲ್, ಯಡಿಯೂರು ಮಾರ್ಗವಾಗಿ ಅಥವಾ ತುಮಕೂರು, ಕಿಬ್ಬನಹಳ್ಳಿ ಮಾರ್ಗವಾಗಿ ತುರುವೇಕೆರೆ ಪಟ್ಟಣಕ್ಕೆ ಬಂದು ಅಲ್ಲಿಂದ ಕಲ್ಲೂರು ಕ್ರಾಸಿಗೆ ಹೋಗುವ ಮಾರ್ಗವಾಗಿ ಚಿಕ್ಕಗೋರಾಘಟ್ಟ, ಆಲದೇವರಹಟ್ಟಿ ಮೂಲಕ ಸುಕ್ಷೇತ್ರ ಮನೀಶ್ವರನಗರ ತಲುಪಬಹುದು. ಕಲ್ಲೂರು ಕ್ರಾಸ್‌ನಿಂದ ವಹಾಸಂದ್ರದ ಬಳಿ ಬಲ ಭಾಗಕ್ಕೆ ತಿರುವು ಪಡೆದು ದೊಡ್ಡಗೋರಾಘಟ್ಟ, ಚಿಮ್ಮನಹಳ್ಳಿ ಮಾರ್ಗವಾಗಿಯೂ ಸುಕ್ಷೇತ್ರಕ್ಕೆ ಬರಬಹುದು. ಮಾಯಸಂದ್ರದಿಂದ ವರಹಾಸಂದ್ರದ ಮಾರ್ಗವಾಗಿ ತಿಮ್ಮನಹಳ್ಳಿ ಸುಕ್ಷೇತ್ರಕ್ಕೆ ಬರಬಹುದು.

    9 ರಿಂದ ಕುಂಭಾಭಿಷೇಕ ಮಹೋತ್ಸವ: ಕ್ಷೇತ್ರದಲ್ಲಿ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೂಲದೈವ ಮಹಾಮಹಿಮ ಮುನೀಶ್ವರಸ್ವಾಮಿ, ಚಕ್ರಧಾರಿಣಿ, ಅಪರ್ಣಾದೇವಿ, ದ್ವಾದಶ ಜ್ಯೋತಿರ್ಲಿಂಗಗಳು, ಶಾಂತ ಶನೈಶ್ವರ ಸ್ವಾಮಿ, ಕಾಲಭೈರವೇಶ್ವರ, ಚಂಡಿಕೇಶ್ವರ, ಪಂಚಲಿಂಗೇಶ್ವರ, ನಂದೀಶ್ವರ, ನವಗ್ರಹ ಹೀಗೆ ಸಕಲ ಪರಿವಾರ ದೇವತೆಗಳ ಪ್ರತಿಷ್ಠಾಪನಾ ಕಾರ್ಯ, ಕಳಶಾರೋಹಣ ಮತ್ತು ಕುಂಭಾಭಿಷೇಕ ಮಹೋತ್ಸವವು ಫೆ.9, 10, 11ರಂದು ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುತ್ತೂರಿನ ಶ್ರೀ ಶಿವದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶಿಕೇಂದ್ರ ಸ್ವಾಮೀಜಿ ಸೇರಿ ಹಲವು ಸಾಧು ಸಂತರು ಹಾಗೂ ಶಾಸಕ ಮಸಾಲಾ ಜಯರಾಂ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಎಂ.ಕಾರಜೋಳ, ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

    ಯಾವುದಕ್ಕೆ ಶಂಕುಸ್ಥಾಪನೆ ?: ದೇವಾಲಯ ಸಮುಚ್ಚಯದ ಉದ್ಘಾಟನೆ ಜತೆಗೆ ದಾಸೋಹ ಮಠದ ಪಾಕಶಾಲೆ, ಗೋಶಾಲೆ, ಯಾತ್ರಿನಿವಾಸ, ವಿದ್ಯಾರ್ಥಿನಿಲಯ, ವೃದ್ಧಾಶ್ರಮ ಮತ್ತು ಅನಾಥಾಶ್ರಮ, ಶಿಕ್ಷಕರ ವಸತಿ ನಿಲಯ, ಕಲ್ಯಾಣಮಂಟಪ, ನವಗ್ರಹವನ, ಪುಷ್ಕರಣಿ, ಬಯಲು ರಂಗಮಂದಿರಗಳ ಶಂಕುಸ್ಥಾಪನೆ ನೆರವೇರಲಿದೆ. ಈ ಎಲ್ಲ ಮಹತ್ಕಾರ್ಯಗಳ ರೂವಾರಿಗಳು ಕ್ಷೇತ್ರ ಸಂಸ್ಥಾಪಕ ಸಿ.ಎ.ಶಿವಪ್ಪ ಮತ್ತು ಅವರ ಧರ್ಮಪತ್ನಿ ಮುನೀಶ್ವರ ದಾಸೋಹ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಎಚ್.ಆರ್.ಧನಲಕ್ಷ್ಮೀಯಾಗಿದ್ದು, ತಮಿಳುನಾಡಿನ ಕಾರೈಕುಡಿಯ ಶಿಲ್ಪಿ ಸ್ಥಪತಿ ಬಾಲಸುಬ್ರಹ್ಮಣಿಯನ್ ನೇತೃತ್ವದಲ್ಲಿ ದೇಗುಲ ನಿರ್ಮಾಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts