More

    ಸ್ವಂತ ವಾಹನಕ್ಕೆ ಜೈ ಎಂದ ಜನತೆ, ಕೋವಿಡ್ ನಂತರ ಖರೀದಿದಾರರ ಸಂಖ್ಯೆ ಹೆಚ್ಚಳ

    ಮಂಗಳೂರು/ಪುತ್ತೂರು: ದ.ಕ.ಜಿಲ್ಲೆಯಲ್ಲಿ ಕೋವಿಡ್ ಹೊರತಾಗಿಯೂ ಮೋಟಾರ್ ವಾಹನ ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ವರ್ಷ ಇದ್ದ ಟ್ರೆಂಡ್ ಈ ಬಾರಿ ಮತ್ತಷ್ಟು ಚುರುಕು ಪಡೆದಿದೆ.

    ಅದರಲ್ಲೂ ಕೋವಿಡ್ ಎರಡನೇ ಅಲೆಯ ಬಳಿಕ ಎಂದರೆ ಈ ವರ್ಷದ ಜೂನ್ ನಂತರ ಕಾರು, ದ್ವಿಚಕ್ರ ವಾಹನ ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
    ಮಂಗಳೂರು ಆರ್‌ಟಿಒ ಕಚೇರಿ ಮಾಹಿತಿ ಪ್ರಕಾರ, ಜೂನ್‌ನಿಂದ ಈವರೆಗೆ ಮಂಗಳೂರು ನಗರದಲ್ಲೇ 10,552 ದ್ವಿಚಕ್ರ ವಾಹನ, 3,577 ಕಾರುಗಳು ನೋಂದಣಿಯಾಗಿವೆ. 2019ರ ಜೂನ್‌ನಿಂದ 2020ರ ಮೇ ವರೆಗೆ 22,659 ದ್ವಿಚಕ್ರ ವಾಹನ ಮತ್ತು 6,574 ಸಹಿತ 32,159 ವಾಹನಗಳು ನೋಂದಣಿಯಾಗಿದ್ದವು. ಮರು ವರ್ಷ ಎಂದರೆ 2020ರ ಜೂನ್‌ನಿಂದ 2021ರ ಮೇ ತನಕ ವಾಹನ ಮಾರಾಟದಲ್ಲಿ ಸಾಮಾನ್ಯ ವೃದ್ಧಿಯಾಗಿ 25,702 ದ್ವಿಚಕ್ರ ವಾಹನ ಮತ್ತು 7,957 ಕಾರುಗಳು ನೋಂದಣಿಯಾಗಿವೆ. ಆ ಬಳಿಕದ ಅವಧಿಯಲ್ಲಿ ವಾಹನ ಮಾರಾಟ ಮತ್ತಷ್ಟು ಚುರುಕಾಗಿದೆ.

    ಪೀಕ್ ಟೈಮಲ್ಲಷ್ಟೇ ಬಸ್‌ಗಳಲ್ಲಿ ರಶ್: ಜನರು ಸಾರ್ವಜನಿಕ ಸಾರಿಗೆಗಳಿಂದ ವಿಮುಖರಾಗಿರುವುದು ಕಂಡು ಬರುತ್ತಿದೆ. ಬಸ್ ಮಾಲೀಕರು ಸಿಬ್ಬಂದಿ ಪೀಕ್ ಅವರ್ ಬಿಟ್ಟು ಉಳಿದಂತೆ ಜನರು ತಮ್ಮತ್ತ ಸುಳಿಯುತ್ತಿಲ್ಲ ಎನ್ನುವ ಬೇಸರದಲ್ಲಿದ್ದಾರೆ. ಕೋವಿಡ್ ಮೊದಲ ಲಾಕ್‌ಡೌನ್ ವೇಳೆಯೇ ಕೆಲವು ತಿಂಗಳ ಕಾಲ ಬಸ್ ಇರಲಿಲ್ಲ, ಹಾಗಾಗಿ ಮಧ್ಯಮ ವರ್ಗದ ನೌಕರ ವೃಂದದವರು ಅನಿವಾರ್ಯವಾಗಿ ದ್ವಿಚಕ್ರ ವಾಹನದತ್ತ ಮುಖ ಮಾಡಬೇಕಾ ಯಿತು. ಅದರೊಂದಿಗೆ ಪೆಟ್ರೋಲ್‌ಗೆ ದರ ಏರಿಕೆಯೂ ಇದ್ದ ಕಾರಣ ಹಲವರು ‘ಇವಿ’ ದ್ವಿಚಕ್ರ ವಾಹನದತ್ತ ಹೊರಳಿದರು ಎನ್ನುತ್ತಾರೆ ಮಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್.

    ಪುತ್ತೂರು, ಬಂಟ್ವಾಳದಲ್ಲಿಯೂ ಏರಿಕೆ: ಪುತ್ತೂರು ಆರ್‌ಟಿಒ ಕಚೇರಿಯಲ್ಲಿ 2020 ಜ.1ರಿಂದ 30 ಡಿಸೆಂಬರ್ 2020ರವರೆಗೆ ಪುತ್ತೂರು ಆರ್‌ಟಿಒ ಕಚೇರಿಯಲ್ಲಿ 19,494 ವಾಹನಗಳು, 2021ರ ಜ1ರಿಂದ 2012ರ ನ.16ರವರೆಗೆ 21,792 ವಾಹನಗಳು ನೋಂದಣಿಯಾಗಿವೆ. ಬಂಟ್ವಾಳ ಆರ್‌ಟಿಒ ಕಚೇರಿಯಲ್ಲಿ 2020 ಜ.1ರಿಂದ 30 ಡಿಸೆಂಬರ್ 2020ರವರೆಗೆ ಬಂಟ್ವಾಳ ಆರ್‌ಟಿಒ ಕಚೇರಿಯಲ್ಲಿ 18,602 ವಾಹನಗಳು 2021ರ ಜ1ರಿಂದ 2012ರ ನ.16ರವರೆಗೆ 19,697 ವಾಹನಗಳು ನೋಂದಣಿಯಾಗಿವೆ.

    ಉಡುಪಿಯಲ್ಲಿ ನೋಂದಣಿ ಕೊಂಚ ಇಳಿಕೆ: ಉಡುಪಿ: ಜಿಲ್ಲೆಯಲ್ಲಿ ವಾಹನ ನೋಂದಣಿ ಇಳಿಕೆಯಾಗಿದೆ. 2020ರಲ್ಲಿ ಒಟ್ಟು 23,213 ವಾಹನಗಳು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿದ್ದರೆ, 2021ರಲ್ಲಿ ಅಕ್ಟೋಬರ್‌ವರೆಗೆ 21,001 ವಾಹನಗಳು ನೋಂದಣಿಯಾಗಿವೆ. 2020ರಲ್ಲಿ 38 ಬಸ್, 17,089 ಬೈಕ್ ನೋಂದಣಿ ಮಾಡಲಾಗಿತ್ತು. 2021ರಲ್ಲಿ ಈ ಸಂಖ್ಯೆ ಇಳಿಕೆಯಾಗಿದ್ದು, 13 ಬಸ್, 14520 ಬೈಕ್‌ಗಳು ನೋಂದಾಯಿಸಲಾಗಿದೆ. ಕಾರ್, ರಿಕ್ಷಾ, ಆಂಬುಲೆನ್ಸ್ ನೋಂದಣಿ ಏರಿಕೆಯಾಗಿದ್ದು, 2020ರಲ್ಲಿ 4176 ಕಾರು, 784 ರಿಕ್ಷಾ, 7 ಆಂಬುಲೆನ್ಸ್ ಹಾಗೂ 2021ರಲ್ಲಿ 4551 ಕಾರು, 889 ರಿಕ್ಷಾ, 12 ಆಂಬುಲೆನ್ಸ್ ಖರೀದಿಸಲಾಗಿದೆ. ಉಳಿದಂತೆ, 2020ರಲ್ಲಿ 43 ಟ್ರಾೃಕ್ಟರ್, 734 ಸರಕು ಸಾಗಾಟ ವಾಹನ, 17 ಮ್ಯಾಕ್ಸಿಕ್ಯಾಬ್ ಹಾಗೂ 2021ರಲ್ಲಿ ಟ್ರಾೃಕ್ಟರ್ 32, 693 ಸರಕು ಸಾಗಾಟ ವಾಹನ, 12 ಮ್ಯಾಕ್ಸಿಕ್ಯಾಬ್ ನೋಂದಣಿಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts