More

    ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಕಲೆ ಪರಿಚಯಿಸಿ; ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ಜಿಪಂ ಸಿಇಒ ಅಕ್ಷಯ ಶ್ರೀಧರ ಹೇಳಿಕೆ

    ಹಾವೇರಿ: ಆಧುನಿಕ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಯುವ ಸಮೂಹ ನಮ್ಮ ಸಾಂಸ್ಕೃತಿಕ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ. ವಿವಿಧ ವೇದಿಕೆಗಳ ಮೂಲಕ ಈ ನೆಲದ ಸಂಸ್ಕೃತಿ ಬಿಂಬಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಸಲಹೆ ನೀಡಿದರು.
    ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದಿನ ಯುವ ಜನತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮಾತನಾಡಿದರು.
    ಯುವಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಭಾಷಣ, ಪೋಸ್ಟರ್ ಮೇಕಿಂಗ್ ಹಾಗೂ ಛಾಯಾಗ್ರಹಣ (ಫೋಟೋಗ್ರಫಿ) ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ವಿದ್ಯಾರ್ಥಿಗಳು ಸೇರಿದಂತೆ ಯುವ ಪ್ರತಿಭೆಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
    ತೀರ್ಪುಗಾರರಾಗಿ ಗುಡ್ಡರಾಜ ಹಲಗೇರಿ, ಅನಿತಾ ಉಗುರಗೋಳ, ಶಶಿಕಲಾ ಅಕ್ಕಿ ಭಾಗವಹಿಸಿದ್ದರು. ಜಾನಪದ ತಜ್ಞ ಡಾ.ಕೆ.ಸಿ ನಾಗರಜ್ಜಿ, ಕಲಾವಿದ ಪರಶುರಾಮ ಬಣಕಾರ, ಮತ್ತಿತರರು ಉಪಸ್ಥಿತರಿದ್ದರು.
    ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಲತಾ.ಬಿ.ಎಚ್. ಸ್ವಾಗತಿಸಿದರು. ಶಮಂತ ಕುಮಾರ ಕೆ. ಎಸ್. ನಿರೂಪಿಸಿದರು. ನೆಹರು ಯುವ ಕೇಂದ್ರದ ಅಧಿಕಾರಿ ಸಂಜೀವ ಭುಕ್ಯಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts