More

    ಹಾವೇರಿಯಲ್ಲಿ ವೀರ ಸಾವರ್ಕರ್ ಸಂಸ್ಮರಣೆ ನಾಳೆ; ಸಾತ್ಯಕಿ ಸಾವರ್ಕರ್, ಕಿರಣ ರಾಮ್, ಇತರರು ಭಾಗಿ

    ಹಾವೇರಿ: ರಾಷ್ಟ್ರಭಕ್ತರ ಬಳಗದ ವತಿಯಿಂದ ಡಿ.17ರಂದು ಸಂಜೆ 5.30ಕ್ಕೆ ವೀರ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮವನ್ನು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಕಾರ್ಯದರ್ಶಿ ಬಸವರಾಜ ಹಾಲಪ್ಪನವರ ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಕಂಡ ಅಪ್ರಮತಿಮ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ವಿನಾಯಕ ದಾಮೋದರ ಸಾವರ್ಕರ್ ಅವರ ಹೋರಾಟಮಯ ಬದುಕು ಹಾಗೂ ಅವರು ಪ್ರತಿಪಾದಿಸಿದ ಅಪ್ಪಟ ಭಾರತೀಯ ಸಿದ್ಧಾಂತಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಅತಿಥಿಯಾಗಿ ವೀರ ಸಾವರ್ಕರ್ ಮೊಮ್ಮಗ, ಪುಣೆಯ ಸಾತ್ಯಕಿ ಸಾರ್ವಕರ್ ಭಾಗವಹಿಸಲಿದ್ದಾರೆ ಎಂದರು.
    ಸಾವರ್ಕರ್ ಚಿಂತನೆ ಕುರಿತು ವಾಗ್ಮಿ ಕಿರಣ ರಾಮ್ ಮಾತನಾಡಲಿದ್ದಾರೆ. ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ರಾಷ್ಟ್ರಭಕ್ತರ ಬಳಗದ ಗೌರವಾಧ್ಯಕ್ಷ ಕೆ.ಈ.ಕಾಂತೇಶ, ಇತರರು ಪಾಲ್ಗೊಳ್ಳುವರು ಎಂದರು.
    ಹಾವೇರಿ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಸಾತ್ಯಕಿ ಸಾವರ್ಕರ್ ಅವರನ್ನು ಕುಂಭ ಹೊತ್ತ ನೂರಾರು ಮಾತೆಯರು ಸ್ವಾಗತಿಸಲಿದ್ದಾರೆ. ನಗರದ ಹುಕ್ಕೇರಿಮಠದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ಕರೆ ತರಲಾಗುವುದು ಎಂದರು.
    ಇದೇ ಸಂದರ್ಭದಲ್ಲಿ ಹಾವೇರಿಯ ಹಿರಿಯ ಸ್ವಾತಂತ್ರ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಾವೇರಿಯ ನೂರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಮೂಹ ಗಾಯನದಲ್ಲಿ ಸಾವರ್ಕರ್ ವಿರಚಿತ ‘ಜಯೋಸ್ತುತೆ..’ ಸೇರಿದಂತೆ ದೇಶಭಕ್ತಿ ಗೀತೆಗಳನ್ನು ಹಾಡಲಿದ್ದಾರೆ. ಸುಮಾರು 10 ಸಾವಿರ ಜನರು ಪಾಲ್ಗೊಳ್ಳುವ ನೀರಿಕ್ಷೆಯಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ರಾಜಶೇಖರ ಬಳ್ಳಾರಿ, ಮಾಲತೇಶ ಗಾಜಿ, ಬಸವರಾಜ ಮತ್ತೂರ, ಜ್ಯೋತಿ ಸಾತೇನಹಳ್ಳಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts