More

    ಶಿವಧ್ಯಾನದಲ್ಲಿ ಮಿಂದೆದ್ದ ಶಿವಭಕ್ತರು; ಎಲ್ಲೆಲ್ಲೂ ಮೊಳಗಿದ ‘ಓಂ ನಮಃ ಶಿವಾಯ’ ಮಂತ್ರ

    ಹಾವೇರಿ: ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಶಿವ ದೇಗುಲಗಳು, ಭಕ್ತರ ಮನೆ, ಮನಗಳಲ್ಲಿ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರಘೋಷ ಎಲ್ಲೆಲ್ಲೂ ಮೊಳಗಿತು. ಭಕ್ತರು ಶಿವ ದೇಗುಲಗಳಿಗೆ ತೆರಳಿ ಶಿವನಿಗೆ ಬಿಲ್ವಪತ್ರೆ, ಹೂವು ಸಮರ್ಪಿಸಿ ಶಿವಧ್ಯಾನದಲ್ಲಿ ಮಿಂದೆದ್ದರು.
    ನಗರದ ಪುರಸಿದ್ದೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಹುಕ್ಕೇರಿಮಠ, ಈಶ್ವರಿ ವಿಶ್ವವಿದ್ಯಾಲಯ, ವೀರಭದ್ರೇಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶಿವಮೂರ್ತಿಗೆ ಜನತೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.
    ಶಿವರಾತ್ರಿ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ವೇತ ವಸ್ತ್ರಧಾರಿಗಳು ಸಾಲು ಸಾಲಾಗಿ ಶಿವನ ದೇವಾಲಯಗಳಿಗೆ ಆಗಮಿಸಿ ಶಿವನ ದರ್ಶನ ಪಡೆದರು. ಮಹಿಳೆಯರು, ಮಕ್ಕಳು ವಿಶೇಷ ಪೂಜೆಯ ಮೂಲಕ ಶಿವ ನಾಮ ಸ್ಮರಣೆ ಮಾಡಿದರು. ದೇಗುಲದ ಆವರಣಗಳಲ್ಲಿ ಬನ್ನಿಗಿಡ, ಬಿಲ್ವಪತ್ರೆ ಗಿಡಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲಿ ಬಿಲ್ವಾರ್ಚನೆ, ಲಕ್ಷಬಿಲ್ವಾರ್ಚನೆ, ಎಲೆಪೂಜೆ, ಕಂಕಣಪೂಜೆ, ಅಭಿಷೇಕ, ಕ್ಷೀರಾಭಿಷೇಕದಲ್ಲಿ ಭಕ್ತರು ನಿರತರಾಗಿದ್ದು ಕಂಡು ಬಂತು.
    ಬೆಳಗ್ಗೆಯಿಂದಲೇ ಶಿವ ದೇವಾಲಯಗಳತ್ತ ಭಕ್ತರ ದಂಡು ಆಗಮಿಸುತ್ತಿತ್ತು. ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ಸುಡು ಬಿಸಿಲಿಗೆ ಕೊಂಚ ವಿರಳ ಎನ್ನಿಸಿದರೂ ಮೂರು ಗಂಟೆ ಬಳಿಕ ಮತ್ತೆ ಜಾಗರಣೆ, ಭಜನೆ ಹಾಗೂ ಸಂಜೆಯ ವಿಶೇಷ ಪೂಜೆಗೆ ಸಿದ್ಧತೆ ನಡೆದಿತ್ತು. ಶಿವನಿಗೆ ಪಂಚಾಮೃತ, ಹಾಲು, ತುಪ್ಪ, ಹಣ್ಣುಗಳು, ವಿವಿಧ ಖಾದ್ಯಗಳ ನೈವೇದ್ಯ ಮಾಡಿ ಭಕ್ತರು ಪುನೀತರಾದರು.
    ದ್ವಾದಶ ಜೋತಿರ್ಲಿಂಗಗಳ ದರ್ಶನ
    ಹಾವೇರಿಯ ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಶ್ರೀ ಗಜಾನನ ಹಾಗೂ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದ್ವಾದಶ ಜೋತಿರ್ಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವು, ಬಿಲ್ವಪತ್ರೆಯಿಂದ ದ್ವಾದಶ ಜೋತಿರ್ಲಿಂಗಗಳನ್ನು ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದ್ವಾದಶ ಜೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ 12 ಗಂಟೆಗೆ ಹರಸೂರ ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ದ್ವಾದಶ ಜೋತಿರ್ಲಿಂಗಗಳಿಗೆ ಮಹಾ ಮಂಗಳಾರತಿ ಹಾಗೂ ಆಶೀರ್ವಚನ ಜರುಗಿತು.
    ಉಪವಾಸ, ಜಾಗರಣೆ
    ನಗರದ ಸಿಂದಗಿ ಮಠ ಹಾಗೂ ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾಗರಣೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಶಿವರಾತ್ರಿ ಹಿನ್ನೆಲೆಯಲ್ಲಿ ಹಲವು ಭಕ್ತರು ಇಡೀ ದಿನ ಉಪವಾಸ ವ್ರತ ಆಚರಿಸಿದರು. ಮತ್ತೆ ಕೆಲವರು ಹಣ್ಣು, ಹಾಲು, ಕರ್ಜೂರ ಸೇವನೆ ಮೂಲಕ ಉಪವಾಸ ಕೈಗೊಂಡಿದ್ದರು. ಜಪಮಾಲೆ ಹಿಡಿದು ಧ್ಯಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts