More

    ಗಾಂಧಿ ಗುರುಕುಲ ಶಾಲೆ ಪ್ರವೇಶಾತಿ ಆರಂಭ

    ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ 5ನೇ ತರಗತಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್.ಪಾಟೀಲ ತಿಳಿಸಿದರು.
    ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5ನೇ ತರಗತಿಗೆ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಇದರಲ್ಲಿ 10 ಸ್ಥಾನಗಳು ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲು. ಪ್ರವೇಶ ಬಯಸುವ ವಿದ್ಯಾರ್ಥಿಗಳು 4ನೇ ತರಗತಿಯನ್ನು ಪ್ರಥಮ ಯತ್ನದಲ್ಲಿ ಕನ್ನಡ ಮಾಧ್ಯಮದಲ್ಲಿ ಗ್ರಾಮೀಣ ಭಾಗದಲ್ಲಿ ತೇರ್ಗಡೆಯಾಗಿರಬೇಕು. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಬಾಲಕರು ಫೆ.16ರೊಳಗೆ ನೇರವಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು ಎಂದರು.
    ಲಿಖಿತ ಪರೀಕ್ಷೆಯು ಫೆ.19ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಆಯ್ಕೆಯಾದ 80 ವಿದ್ಯಾರ್ಥಿಗಳಿಗೆ ಮೌಖಿಕ ಸಂದರ್ಶನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದರು.
    ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಧರ್ಮದರ್ಶಿ ಮಂಡಳಿಯ ಸದಸ್ಯ ಕಾರ್ಯದರ್ಶಿ ಗಿರೀಶ ಅಂಕಲಕೋಟಿ ಮಾತನಾಡಿ, ಗಾಂಧಿ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಅವರ ದೂರದೃಷ್ಟಿಯ ಫಲವಾಗಿ ಹೊಸರಿತ್ತಿಯಲ್ಲಿ 1984 ಅ.2ರ ಮಹಾತ್ಮ ಗಾಂಧಿ ಜಯಂತಿಯಂದು ಗಾಂಧಿ ಗ್ರಾಮೀಣ ಗುರುಕುಲ ಪ್ರಾರಂಭವಾಯಿತು. ಈ ಗುರುಕುಲವು ವಿಶಾಲವಾದ 32 ಎಕರೆ ಪ್ರದೇಶ ಹೊಂದಿದೆ. 5ರಿಂದ 10ನೇ ತರಗತಿವರೆಗೆ ಉಚಿತ ಶೀಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿ ಶಂಭುಲಿಂಗಪ್ಪ ಅರಳಿ, ಶಾಲೆಯ ಮುಖ್ಯಶಿಕ್ಷಕ ಎಂ.ಪಿ.ಗೌಡಣ್ಣನವರ, ಶಂಕರಪ್ಪಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts