More

    ಹಾವೇರಿ ಜತೆಗೆ ಡಾ.ಗುರುಲಿಂಗ ಕಾಪಸೆ ನಂಟು

    ಹಾವೇರಿ: ಧಾರವಾಡದಲ್ಲಿ ಮಂಗಳವಾರ ನಿಧನ ಹೊಂದಿದ ನಾಡಿನ ಹಿರಿಯ ಲೇಖಕ 96 ವರ್ಷದ ಡಾ.ಗುರುಲಿಂಗ ಕಾಪಸೆ ಅವರಿಗೆ ಹಾವೇರಿಯೊಂದಿಗೆ ವಿಶೇಷವಾದ ನಂಟು ಇತ್ತು.
    2000ದಿಂದ 2003ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ 2002ರಲ್ಲಿ ಮೊದಲ ಬಾರಿಗೆ ಹಾವೇರಿಯಲ್ಲಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಿಕೊಟ್ಟಿದ್ದರು. ಮತ್ತೊಬ್ಬ ಖ್ಯಾತ ಸಾಹಿತಿ ಡಾ.ಕೀರ್ತಿನಾಥ ಕುರ್ತಕೋಟಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಆಗ ಇಲ್ಲಿನ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅಕಾಡೆಮಿಯ ಸದಸ್ಯರಾಗಿದ್ದರು.
    ವಿಶೇಷವೆಂದರೆ ಇಲ್ಲಿಯ ತಾರಾ ಪ್ಲಾಜಾದಲ್ಲಿ ಪ್ರಶಸ್ತಿ ಪುರಸ್ಕೃತರ ಕುರಿತು ವಿಚಾರ ಸಂಕಿರಣ ಮತ್ತು ಅಕಾಡೆಮಿಯ ಸರ್ವಸದಸ್ಯರ ಸಭೆ ಕೆ.ಇ.ಬಿ.ಯ ಸೊಸೈಟಿಯಲ್ಲಿ ಜರುಗಿತ್ತು. ಕಾಪಸೆ ಅವರು ತಮ್ಮ ಅವಧಿಯ ಮೊದಲ ಕಾರ್ಯಕ್ರಮವನ್ನು ಕಾವ್ಯ ಕಟ್ಟುವ ಬಗೆ ಎಂಬ ಕಾವ್ಯ ಕಮ್ಮಟವನ್ನು ಶರೀಫರ ಶಿಶುವಿನಾಳದಲ್ಲಿ ನಡೆಸಿದ್ದರು. ಆಗ ನಾಡಿನ 30ಕ್ಕೂ ಹೆಚ್ಚು ಯುವ ಬರಹಗಾರರು ತರಬೇತಿ ಪಡೆದಿದ್ದರು. ಬಿ.ಎ.ಸನದಿ, ಡಾ.ಸುಮತೀಂದ್ರ ನಾಡಿಗ, ಜಯಂತ ಕಾಯ್ಕಿಣಿ, ಶ್ಯಾಮಸುಂದರ ಬಿದರಕುಂದಿ ಹಾಗೂ ಸತೀಶ ಕುಲಕಲರ್ಣಿ ಕಮ್ಮಟ ನಡೆಸಿದ್ದರು.
    ಕರ್ನಾಟಕ ಸಾಹಿತ್ಯ ಆಕಾಡೆಮಿ, ವಾರಂಬಳ್ಳಿ ಪ್ರತಿಷ್ಠಾನ ಹಾಗೂ ಹಾವನೂರು ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಬರಗೂರು ರಾಮಚಂದ್ರಪ್ಪನವರ ಬದುಕು ಬರಹ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆದಾಗಲೂ ಡಾ.ಗುರುಲಿಂಗ ಕಾಪಸೆ ಮತ್ತು ವಿವೇಕ ರೈ ಹಾವೇರಿಗೆ ಬಂದಿದ್ದರು. ಬರಗೂರವರು ಲೇಖಕರೊಂದಿಗೆ ಸಂವಾದವನ್ನು ನಡೆಸಿದ್ದು ಅವಿಸ್ಮರಣೀಯ.
    ಖ್ಯಾತ ಲಲಿತ ಪ್ರಬಂಧಕಾರ ಹಾವೇರಿ ರಾ.ಕು. (ರಾಮಚಂದ್ರ ವೆಂಕಟೇಶ ಕುಲಕರ್ಣಿ) ಅವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ಒಲಿದುಬಂದಿತ್ತು. ಆದರೆ, ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಲು ಆಗಿರಲಿಲ್ಲ. ಹಾಗಾಗಿ, ಕಾಪಸೆ ಅವರು 2003ರಲ್ಲಿ ಹಾವೇರಿಗೇ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದರು.
    ಸಜ್ಜನಿಕೆಯ ಸ್ವರೂಪವಾಗಿದ್ದ ಕಾಪಸೆ ಗುರುಗಳು ನನ್ನಂತಹ ಅನೇಕ ಲೇಖಕರಿಗೆ ಕೈ ಹಿಡಿದು ಮುನ್ನಡೆಸಿದ ಸಹೃದಯಿ ದೊಡ್ಡ ಲೇಖಕ ಎಂದು ಸತೀಶ ಕುಲಕರ್ಣಿ ಸ್ಮರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts