More

    ಹಾವೇರಿ ಜಿಲ್ಲಾಸ್ಪತ್ರೆ 26 ಹೊರಗುತ್ತಿಗೆ ಸಿಬ್ಬಂದಿಗೆ ಕತ್ತರಿ

    ಕೇಶವಮೂರ್ತಿ ವಿ.ಬಿ. ಹಾವೇರಿ

    ಜಿಲ್ಲಾಸ್ಪತ್ರೆಯಲ್ಲಿ ಎಂಟು, ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 26 ಹೊರಗುತ್ತಿಗೆ ಸಿಬ್ಬಂದಿಯನ್ನು ಏಕಾಏಕಿ ತೆಗೆದು ಹಾಕಲಾಗಿದ್ದು, ಅವಲಂಬಿತರ ಕುಟುಂಬವೀಗ ಬೀದಿಗೆ ಬಂದಂತಾಗಿದೆ.

    ರಾಘವೇಂದ್ರ ಅಸೋಸಿಯೇಟ್ಸ್ ಏಜೆನ್ಸಿ ಅಡಿಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ 81 ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ಈ ಸಿಬ್ಬಂದಿಯ ಸಂಬಳವನ್ನು ಸರ್ಕಾರ ಬಿಡುಗಡೆಗೊಳಿಸಿಲ್ಲ. ಆದರೂ ಗುತ್ತಿಗೆದಾರರು ಅಕ್ಟೋಬರ್​ವರೆಗೆ ಸಂಬಳ ಕೊಟ್ಟಿದ್ದಾರೆ. ಬಾಕಿ ಸಂಬಳ 1.25 ಕೋಟಿ ರೂ. ಬಿಡುಗಡೆಗಾಗಿ ಬೆಂಗಳೂರಿನ ಆರೋಗ್ಯ ಇಲಾಖೆ ಕಚೇರಿಗೆ ಗುತ್ತಿಗೆದಾರ ರತ್ನಾಕರ ಕುಂದಾಪುರ ತೆರಳಿದ್ದರು. ಆಗ ಅಧಿಕಾರಿಗಳು, ‘ನಿಮ್ಮ ಬಳಿ ಹೆಚ್ಚುವರಿ ಸಿಬ್ಬಂದಿ ಇದ್ದಾರೆ. ಶೇ. 75ರಷ್ಟು ಸಿಬ್ಬಂದಿಗೆ ಮಾತ್ರ ಸಂಬಳ ನೀಡಲಾಗುವುದು’ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ 26 ಹೆಚ್ಚುವರಿ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ.

    ಸದ್ಯಕ್ಕೆ ಎಂಸಿಎಚ್, ಲ್ಯಾಬ್ ಟೆಕ್ನಿಷಿಯನ್, ಗ್ರೂಪ್ ಡಿ, ಜೆಎನ್​ಎಂ, ಕಿಚನ್ ಸಿಬ್ಬಂದಿಗೆ ಇದರ ಬಿಸಿ ತಟ್ಟಿದೆ. ನಿಯಮದ ಪ್ರಕಾರ 81 ಗುತ್ತಿಗೆ ಸಿಬ್ಬಂದಿಯಲ್ಲಿ ಶೇ. 75ರಷ್ಟು ಮಾತ್ರ ಇರಬೇಕು ಎನ್ನುತ್ತಿದೆ ಆರೋಗ್ಯ ಇಲಾಖೆ. ಹೀಗಾಗಿ ಕನಿಷ್ಠ 35ಕ್ಕೂ ಅಧಿಕ ಸಿಬ್ಬಂದಿಯ ಕೆಲಸಕ್ಕೆ ಕೊಕ್ಕೆ ಬೀಳು ಸಂಭವವಿದೆ ಎನ್ನಲಾಗಿದೆ.

    ಜಿಲ್ಲಾಸ್ಪತ್ರೆಗೆ ನಿತ್ಯವೂ ಸಾವಿರಕ್ಕೂ ಅಧಿಕ ಒಳ, ಹೊರ ರೋಗಿಗಳು ಬರುತ್ತಾರೆ. ಹೆರಿಗೆ ಆಸ್ಪತ್ರೆ, ಶಸ್ತ್ರಚಿಕಿತ್ಸೆ ವಿಭಾಗ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಸದ್ಯಕ್ಕೆ 251 ಕಾಯಂ, ಗುತ್ತಿಗೆ ನೌಕರರು ಆಸ್ಪತ್ರೆಯಲ್ಲಿದ್ದಾರೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಇರುವ ಸಿಬ್ಬಂದಿಗೆ ಕತ್ತರಿ ಹಾಕಿದ್ದರಿಂದ ರೋಗಿಗಳು, ಸಂಬಂಧಿಕರು ಪರದಾಡುವಂತಾಗಿದೆ.

    ಏಳೆಂಟು ವರ್ಷಗಳಿಂದ ಸಂಬಳ ಕೊಟ್ಟಿರುವ ಆರೋಗ್ಯ ಇಲಾಖೆ, ಇದೀಗ ಹೆಚ್ಚುವರಿ ಸಿಬ್ಬಂದಿ ಎಂದರೆ ಹೇಗೆ ? ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆದು ಹಾಕಿದರೆ ನಾವು ಎಲ್ಲಿಗೆ ಹೋಗಬೇಕು ? ಕೋವಿಡ್ ಸಂದರ್ಭದಲ್ಲಿ ಹಗಲು, ರಾತ್ರಿ ಎನ್ನದೇ ದುಡಿದಿದ್ದೇವೆ. ಕೂಡಲೇ ನಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ನೌಕರರು ಎಚ್ಚರಿಸಿದ್ದಾರೆ.

    ಕಳೆದ ಆರು ತಿಂಗಳ ಬಾಕಿ 1.25 ಕೋಟಿ ರೂ. ಸಂಬಳ ಬರಬೇಕಿದೆ. ಇದನ್ನು ಕೇಳಲು ಹೋದಾಗ ನಿಮ್ಮಲ್ಲಿ ಹೆಚ್ಚುವರಿ ಸಿಬ್ಬಂದಿ ಇದ್ದಾರೆ. ಅವರಿಗೆ ಸಂಬಳ ಕೊಡುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಹಾಗಾಗಿ, ಅನಿವಾರ್ಯವಾಗಿ ಕೆಲ ಸಿಬ್ಬಂದಿಯನ್ನು ಕೆಲಸದಿಂದ ಕೈಬಿಡಲಾಗಿದೆ.

    | ರತ್ನಾಕರ ಕುಂದಾಪುರ, ಗುತ್ತಿಗೆದಾರ

    ಹೆಚ್ಚುವರಿ ಎಂಬ ಕಾರಣಕ್ಕೆ 26 ಸಿಬ್ಬಂದಿಗೆ ಸಮಸ್ಯೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸಲಾಗಿದೆ. ಹಾವೇರಿ ಮೆಡಿಕಲ್ ಕಾಲೇಜ್​ನಲ್ಲಿ ಕನಿಷ್ಠ 10 ಸಿಬ್ಬಂದಿ ಸೇರಿದಂತೆ ಉಳಿದವರನ್ನು ಬೇರೆಡೆ ಹೊಂದಾಣಿಕೆ ಮಾಡಲು ಯತ್ನಿಸಲಾಗುತ್ತಿದೆ.

    | ಡಾ.ಪಿ.ಆರ್.ಹಾವನೂರ, ಜಿಲ್ಲಾ ಶಸ್ತ್ರಚಿಕಿತ್ಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts