More

    ಚರ್ಮಗಂಟು ರೋಗಕ್ಕೆ 130 ಜಾನುವಾರು ಸಾವು

    ಪಶುಪಾಲಕರಲ್ಲಿ ಆತಂಕ | ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯ

    ಹರಪನಹಳ್ಳಿ: ಮಾರಣಾಂತಿಕ ಚರ್ಮಗಂಟು ರೋಗಕ್ಕೆ ತುತ್ತಾದ ಜಾನುವಾರುಗಳು ಚಿಕಿತ್ಸೆ ಫಲಿಸದೆ ಸಾವಿಗೀಡಾಗುತ್ತಿರುವುದು ತಾಲೂಕಿನ ರೈತರಲ್ಲಿ ಆತಂಕ ಸೃಷ್ಟಿಸಿದೆ.

    ಜಮೀನು ಉಳುಮೆ ವೇಳೆಯೇ ಕುಸಿದು ಬೀಳುತ್ತಿರುವ ಎತ್ತುಗಳನ್ನು ಕಂಡು ತಾಲೂಕಿನ ಬಾಪೂಜಿ ನಗರ, (ಉದ್ದಗಟ್ಟಿ ದೊಡ್ಡ ತಾಂಡಾ) ಗೋವೆರಹಳ್ಳಿ, ಮಾಡಲಗೇರಿ, ಅಲ್ಮರಸೀಕೆರೆ, ಕಣಿವಿಹಳ್ಳಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಕಣಿವಿಹಳ್ಳಿಯಲ್ಲಿ ಚರ್ಮಗಂಟು ರೋಗಕ್ಕೆ ಅಲಮರಸೀಕೆರಿ ಅಜ್ಜಪ್ಪ, ಚಿಕ್ಕಣ್ಣನವರ ಗೋಣೆಪ್ಪ ಹಾಗೂ ಇಟ್ಟಿಗುಡಿ ರಾಮಪ್ಪನವರ ಮೂರು ಎತ್ತುಗಳು ಬಲಿಯಾಗಿವೆ. ಬಾಪೂಜಿನಗರದ ರೈತ ಎಚ್.ಕೆ. ಯಂಕ್ಯನಾಯ್ಕ ಅವರ ಎತ್ತು ಜಮೀನಿನಲ್ಲೇ ಮೃತಪಟ್ಟಿದೆ. ಇದೇ ರೀತಿ ವಿವಿಧ ಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಕಾಯಿಲೆಗೊಳಗಾದ ಹಸು, ಎತ್ತುಗಳಿಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರೂ ಹಲವು ಜಾನುವಾರು ಸಾವು ಬದುಕಿನ ನಡುವೆ ಹೋರಾಡುತ್ತಿವೆ.

    ಪಶು ವೈದ್ಯಾಧಿಕಾರಿಗಳು ಕೂಡಲೇ ಚರ್ಮಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸಾವಿಗೀಡಾಗುತ್ತಿರುವ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಮೃತಪಟ್ಟಿರುವ ಎತ್ತು, ಹಸುಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಮ್ಮಗಳ ಬದುಕು ನಶಿಸಿ ಹೋಗುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.


    ಚರ್ಮ ಕಂಡು ರೋಗದಿಂದ ತಾಲೂಕಿನಲ್ಲಿ ಈವರೆಗೆ 130 ಜಾನುವಾರು ಮೃತಪಟ್ಟಿವೆ. ಸರ್ಕಾರ ಎತ್ತುಗಳಿಗೆ 30 ಸಾವಿರ, ಆಕಳಿಗೆ 20 ಸಾವಿರ ಪರಿಹಾರ ಘೋಷಿಸಿದ್ದು, ಇದಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಪೂರೈಕೆಯಾಗಿದ್ದ 11 ಸಾವಿರ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗಿದೆ. ಸರ್ಕಾರಕ್ಕೆ ಇನ್ನೂ 50 ಸಾವಿರ ಲಸಿಕೆ ಬೇಡಿಕೆ ಸಲ್ಲಿಸಿದ್ದು ಈವರೆಗೆ ಬಂದಿಲ್ಲ.

    | ಡಾ.ಶಿವಕುಮಾರ ಪಶು ವೈದ್ಯಾಧಿಕಾರಿ, ಹರಪನಹಳ್ಳಿ

    ತಾಲೂಕಿನ ಬಹುತೇಕ ರೈತರು ಜಾನುವಾರುಗಳನ್ನು ಜತನದಿಂದ ನೋಡಿಕೊಳ್ಳುತ್ತಿದ್ದರೂ ಚರ್ಮ ಗಂಡು ರೋಗದಿಂದ ಆಗುತ್ತಿರುವ ಸಾವು ತಡೆಯಲಾಗುತ್ತಿಲ್ಲ. ಸರ್ಕಾರ ಕೂಡಲೇ ಮೃತ ಜಾನುವಾರುಗಳಿಗೆ 30ರ ಬದಲು 50 ಸಾವಿರ ರೂ. ಪರಿಹಾರ ಕೊಡಬೇಕು.
    | ಲಕ್ಷ್ಮೀ ಚಂದ್ರಶೇಖರ, ನಂದಿಬೇವೂರು ಗ್ರಾಪಂ ಉಪಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts