More

    ಗಣೇಶನ ಮೂರ್ತಿಗೆ 3ಡಿ ಸ್ಪರ್ಶ; ಬಲಮುರಿ, ಮಣ್ಣಿನ ವಿಗ್ರಹಕ್ಕೆ ಭಾರಿ ಬೇಡಿಕೆ

    ತಯಾರಿಯಲ್ಲಿ ತೊಡಗಿವೆ ಎಂಟು ಕುಟುಂಬಗಳು

    ವಿಜಯವಾಣಿ ವಿಶೇಷ

    ಹರಪನಹಳ್ಳಿ: ಈ ಸಲ ಗಣೇಶ ಚತುರ್ಥಿ ಆಚರಣೆಗೆ ಜೋರಾಗಲಿದ್ದು, ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿರುವುದರ ಜತೆಗೆ ವಿನಾಯಕನ ಮೂರ್ತಿಗೆ 3ಡಿ ಬಣ್ಣ ಲೇಪನದ ಪ್ರಯೋಗ ನಡೆಯುತ್ತಿದೆ.

    ರಾಣೆಬೆನ್ನೂರು ಮಣ್ಣು, ಕೊಲ್ಲಾಪುರದ ಬಣ್ಣ ಎರಡನ್ನೂ ಒಟ್ಟುಗೂಡಿಸಿ 1ರಿಂದ 12 ಅಡಿ ವರೆಗೂ ಸುಂದರ ಗಣಪತಿ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ. ಈ ಬಾರಿ ಸಿದ್ಧಿ ಮತ್ತು ಬಲಮುರಿ ಗಣಪತಿಗೆ ಬೇಡಿಕೆ ಹೆಚ್ಚಿದ್ದು, ಅದರಂತೆ ತಯಾರಿಸಲಾಗುತ್ತಿದೆ. ಎಡಮುರಿ ಗಣೇಶ, ಕೃಷ್ಣ ನಾಟ್ಯ, ಲಾಲ್‌ಬಾಗ್ ಮಹಾರಾಜ, ಕೃಷ್ಣ, ನವೀಲು, ದರ್ಬಾರ್, ಮಹಾರಾಜ ಮೊದಲಾದ ಆಕರ್ಷಕ ಮೂರ್ತಿಗಳು ಈಗಾಗಲೇ ಸಿದ್ಧಗೊಂಡಿವೆ.

    ಪಟ್ಟಣದ ತಾಯಮ್ಮ ಹುಣಸೆಮರದ ಹತ್ತಿರದ ಬಣಗಾರಪೇಟೆಯ ಚಿತ್ರಗಾರ ಕುಟುಂಬ ವಿಶೇಷ ಗಣೇಶನ ವಿಗ್ರಹ ಮೂರ್ತಿಗಳನ್ನು ತಯಾರಿಸುತ್ತಿದೆ. ಈ ಕುಟುಂಬವೂ ಸೇರಿ 8 ಕುಟುಂಬಗಳು ಗಣಪತಿ ತಯಾರಿಕೆಯಲ್ಲಿ ತೊಡಗಿವೆ. ಇದು ಅವರ ವಂಶಪಾರಂಪರ‌್ಯ ಕಲೆ ಮತ್ತು ಕಸುಬು ಆಗಿದೆ. 2 ವರ್ಷ ಕೋವಿಡ್‌ದಿಂದಾಗಿ ಸಂಕಷ್ಟಕ್ಕೀಡಾಗಿದ್ದ ಕುಟುಂಬಗಳು, ಈ ಬಾರಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಕೊಲ್ಲಾಪುರ ಮತ್ತಿತರ ಕಡೆಗಳಲ್ಲಿ ಸಿದ್ಧಗೊಂಡಿರುವ ಮೂರ್ತಿಗಳನ್ನು ತಂದು ಮಾರುವ ಯತ್ನವೂ ನಡೆಯುತ್ತಿದೆ.

    ನಮಗೆ ಸರ್ಕಾರದಿಂದ ಯಾವುದೇ ಸಹಾಯವಿಲ್ಲ, ವಂಶಪಾರಂಪರ‌್ಯವಾಗಿ ವೃತ್ತಿಯನ್ನು ಮಾಡುತ್ತಿದ್ದೇವೆ. ಮನೆಯಲ್ಲಿ ಮೂವರು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿಭಿನ್ನ ಶೈಲಿಯಲ್ಲಿ ಮೂರ್ತಿ ತಯಾರಿಸುತ್ತಿದ್ದೇವೆ. ಈ ಬಾರಿ ಉತ್ತಮ ಬೆಲೆ ಸಿಗುವ ನೀರಿಕ್ಷೆ ಇದೆ.
    | ಮಹೇಶ ಚಿತ್ರಗಾರ ಬಣಗಾರಪೇಟೆ, ಹರಪನಹಳ್ಳಿ

    ಗಣೇಶನ ಮೂರ್ತಿಗೆ 3ಡಿ ಸ್ಪರ್ಶ; ಬಲಮುರಿ, ಮಣ್ಣಿನ ವಿಗ್ರಹಕ್ಕೆ ಭಾರಿ ಬೇಡಿಕೆ

    ನಿಯಮ ಉಲ್ಲಂಘಿಸಿದರೆ ಕ್ರಮದ ಎಚ್ಚರಿಕೆ : ಸರ್ಕಾರದ ಆದೇಶದಂತೆ ಗಣಪತಿ ಹಬ್ಬದಲ್ಲಿ ಸೌರ್ಹಾದದಿಂದ ಆಚರಿಸಬೇಕು. ಪೋಲಿಸ್ ಠಾಣೆಯಿಂದ ಧ್ವನಿವರ್ಧಕ ಹಾಗೂ ಪ್ರತಿಷ್ಠಾಪನೆಗೆ ಅನುಮತಿ ಪಡೆಯಬೇಕು. ಹೈಕೋರ್ಟ್ ಆದೇಶದಂತೆ ಡಿ.ಜೆ.ಸೌಂಡ್ಸ್ ಬಳಕೆ ನಿಷೇಧಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹರಪನಹಳ್ಳಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕಮ್ಮಾರ ನಾಗರಾಜ ತಾಕೀತು ಮಾಡಿದ್ದಾರೆ. ಗ್ರಾಮಕ್ಕೆ ಒಂದೇ ಗಣಪತಿ ಪ್ರತಿಷ್ಠಾಪನೆ ಮಾಡುವುದು ಸೂಕ್ತವಾಗಿದ್ದು, ನಾವೂ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸುತ್ತೇವೆ ಎನ್ನುತ್ತಾರೆ ದೇವರ ತಿಮ್ಲಾಪುರದ ಯುವಕರಾದ ಅಮಿತ್, ನಿಂಗರಾಜ, ರಂಗನಾಥರವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts