ತೀರ್ಥಹಳ್ಳಿ: ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಯಿದ್ದು ಈಗಾಗಲೇ ಕೊಳವೆಬಾವಿಗಳು ವಿಫಲವಾಗುತ್ತಿವೆ. ಹೀಗಾಗಿ ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಕುಡಿಯುವ ನೀರಿನ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡಚಣೆ ಮಾಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ತಾಕೀತು ಮಾಡಿದರು.
ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ತ್ರೈಮಾಸಿಕ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ವೇಳೆ ಅರಣ್ಯ ಇಲಾಖೆ ಮೇಲಿನ ಚರ್ಚೆಯಲ್ಲಿ ಹೆದ್ದೂರಿನ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸಂಬಂಧ ಮಾತನಾಡಿ, ಕಾಡಿನಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರು ಸಿಗದ ಕಾರಣ ಊರುಗಳ ಮೇಲೆ ದಾಳಿ ಇಡುವ ಸಾಧ್ಯತೆಯಿದೆ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಶಾಲಾ ಆವರಣದಲ್ಲಿ ಬೆಳೆದು ನಿಂತಿರುವ ಮರಗಳ ಕಡಿತಲೆಗೆ ಅಡಚಣೆ ಮಾಡಿದಲ್ಲಿ ಸಂಭವಿಸುವ ಅವಘಡಗಳಿಗೆ ಅರಣ್ಯಾಧಿಕಾರಿಗಳೇ ಹೊಣೆಗಾರರಾಗ ಬೇಕಾದೀತು ಎಂದು ಎಚ್ಚರಿಸಿದ ಶಾಸಕರು, ಗಾಳಿ-ಮಳೆಗೆ ಮನೆಗಳ ಮೇಲೆ ಮರಗಳು ಬೀಳುವಂತಿದ್ದರೂ ಕಾನೂನಿನ ನೆವದಲ್ಲಿ ನೀವುಗಳು ಕ್ರಮ ತೆಗೆದುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಭವಿಸಬಹುದಾದ ಘಟನೆಗಳ ಗಂಭೀರತೆಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
9.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೋಣಂದೂರಿನ ಸರ್ಕಾರಿ ಆಸ್ಪತ್ರೆ ಕಟ್ಟಡದ ಕಾಮಗಾರಿ ಮಾಹಿತಿ ಪಡೆದ ಶಾಸಕರು, ಈ ಮೊದಲು ನಿರ್ಮಿಸಿದ್ದ ಜೆಸಿ ಆಸ್ಪತ್ರೆ ಕಾಮಗಾರಿ ಕಳಪೆಯಾಗಿದೆ. ಕೋಣಂದೂರಿನ ಸರ್ಕಾರಿ ಆಸ್ಪತ್ರೆ ಕಾಮಗಾರಿಯಲ್ಲಿ ಸಣ್ಣ ದೋಷ ಕಂಡು ಬಂದರೂ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಈವರೆಗೆ 13 ಮಂಗನ ಕಾಯಿಲೆ ಪ್ರಕರಣ ದಾಖಲಾಗಿದೆ. ಇವರಲ್ಲಿ 8 ಮಂದಿ ಮಣಿಪಾಲದಲ್ಲಿ ಹಾಗೂ 5 ಜನರು ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ದೂರದ ಊರಿನಿಂದ ಬಂದಿರುವ ಕಾರ್ಮಿಕರು ನಮ್ಮ ನಿಯಂತ್ರಣಕ್ಕೆ ಬರುತ್ತಿಲ್ಲ. ಅಂತಹವರಲ್ಲೇ ಹೆಚ್ಚು ಪಾಸಿಟಿವ್ ಬಂದಿದೆ. ಕರೊನಾದ ಐದು ಪ್ರಕರಣಗಳು ಡಿಸೆಂಬರ್‌ನಲ್ಲಿ ದಾಖಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನಟರಾಜ್ ಸಭೆಗೆ ಮಾಹಿತಿ ನೀಡಿದರು.
ಸಭೆಗೆ ಬಾರದಿರುವ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಗೈರಾದವರಿಗೆ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಮಹತ್ವದ ಸಭೆಯನ್ನು ಗೌಣವಾಗಿ ಕಾಣುವವರನ್ನೂ ಗೌಣವಾಗಿಯೇ ಕಾಣಬೇಕಾದೀತು ಎಂದು ಎಚ್ಚರಿಸಿದರು.
ಬೇರೆ ಆಯಾಮದ ಸಂಶೋಧನೆ ಅಗತ್ಯ
ಕೆಎಫ್‌ಡಿ ಕುರಿತಂತೆ ಮಾತನಾಡಿದ ಪಶುವೈದ್ಯ ಇಲಾಖೆಯ ಡಾ. ಮುರಳೀಧರ್, ದಶಕಗಳಿಂದ ತಾಲೂಕನ್ನು ಬಿಡದೆ ಕಾಡುತ್ತಿರುವ ಮಂಗನ ಕಾಯಿಲೆ ಬಗ್ಗೆ ಗಂಭೀರವಾಗಿ ಸಂಶೋಧನೆ ನಡೆಸುವ ಅಗತ್ಯವಿದೆ. ಈವರೆಗೆ ಕೇವಲ ಮಂಗಗಳ ಸುತ್ತಲೇ ಈ ಬಗ್ಗೆ ಚಿಂತನೆ ನಡೆದಿದೆ. ಪಟ್ಟಣ ವ್ಯಾಪ್ತಿಯಲ್ಲಿ ಭಾರಿ ಸಂಖ್ಯೆಯ ಮಂಗಗಳಿದ್ದರೂ ಈ ಸೋಂಕು ಈವರೆಗೆ ಪಟ್ಟಣದಲ್ಲಿ ಕಾಣಿಸಿಕೊಂಡಿಲ್ಲ. ರೋಗಾಣು ಹರಡುತ್ತಿರುವ ಟಿಕ್ಸ್ ಬೇರೆ ರೂಪ ತಾಳುತ್ತಿರುವಂತಿದೆ. ಈ ಬಗ್ಗೆ ಬೇರೆ ಆಯಾಮಗಳಿಂದಲೂ ರೀಸರ್ಚ್ ಮಾಡುವ ಅಗತ್ಯವಿದೆ ಎಂದು ಸಭೆಯ ಗಮನ ಸೆಳೆದರು. ಈ ಸೋಂಕಿನ ಬಗ್ಗೆ ಆರೋಗ್ಯ ಇಲಾಖೆ ಗಂಭೀರ ಎಚ್ಚರ ವಹಿಸಬೇಕಿದೆ. ಈ ವರ್ಷ ಲಸಿಕೆ ಕೂಡ ಇಲ್ಲದ ಕಾರಣ ರೋಗ ಯಾವುದೇ ಕ್ಷಣದಲ್ಲಿ ಉಲ್ಬಣಿಸುವ ಆತಂಕವಿದೆ. ಖಾಸಗಿ ಆಸ್ಪತ್ರೆ ಸೇರಿ ಮಾಹಿತಿ ಕೊರತೆಯಾಗಬಾರದು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರೋಗಿಗಳು ಶುಲ್ಕ ನೀಡಬೇಕಿಲ್ಲ ಎಂದು ಹೇಳಿದರು.