More

    ಕಗ್ಗಂಟಾದ ಹರಿಹರದ ಸೇತುವೆ ರಸ್ತೆ ದುರಸ್ತಿ

    ಕೀರ್ತಿಕುಮಾರ್ ಎಚ್.ಸಿ. ಹರಿಹರ: ಉತ್ತರ- ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಹರಿಹರದ ಸೇತುವೆಗೆ ಕೂಡುವ ರಸ್ತೆ ಕಳೆದ ನಾಲ್ಕು ವರ್ಷದಿಂದ ದುರಸ್ತಿ ಭಾಗ್ಯ ಕಂಡಿಲ್ಲ. ರಾಜಕೀಯ ಪಕ್ಷಗಳ ಸಮನ್ವಯದ ಕೊರತೆಯಿಂದಾಗಿ ಈ ಸಮಸ್ಯೆ ಕಗ್ಗಂಟಾಗಿ ಉಳಿದಿದೆ. ನಗರದ ರಾಘವೇಂದ್ರ ಮಠ ಮತ್ತು ದರ್ಗಾ ಮುಂಭಾಗದ ಎರಡು ನೂರು ಮೀಟರ್ ವ್ಯಾಪ್ತಿಯ, ಹಳೇ ಪಿ.ಬಿ. (ಬೀರೂರು-ಸಮ್ಮಸಗಿ) ರಸ್ತೆ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕಿತ್ತು. ಆದರೆ, ರಾಜಕಾರಣಿಗಳ ಅಸಹಕಾರದಿಂದಾಗಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಬಾರದಿರುವ ಬಗ್ಗೆಯೂ ಸಾರ್ವಜನಿಕರಲ್ಲಿ ಬೇಸರವಿದೆ.

    ಅಭಿವೃದ್ಧಿ ಸಂಬಂಧ ಈ ಹಿಂದೆ ಯೋಜನೆ ಸಿದ್ಧಪಡಿಸಲಾಗಿತ್ತು. ರಸ್ತೆ ವಿಸ್ತರಣೆ ವೇಳೆ ಸರಿಯಾದ ಅಳತೆ ಮಾಡಲಾಗಿಲ್ಲ ಎಂಬ ನೆಪವೊಡ್ಡಿ ರಸ್ತೆಯ ಕಾಮಗಾರಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಿಡಬ್ಲುೃಡಿ ಮತ್ತು ನಗರಸಭೆ ಅಧಿಕಾರಿಗಳು ಈ ಸಮಸ್ಯೆ ನಿವಾರಣೆಗಾಗಿ ಒಂದು ಹಂತದ ಸಮೀಕ್ಷೆ ನಡೆಸಿದ್ದಾರೆ. ಸಂಸದ ಜಿ.ಎಂ ಸಿದ್ದೇಶ್ವರ, ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ ಹರೀಶ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಖುದ್ದು ಸ್ಥಳ ಪರಿಶೀಲನೆ ಮಾಡಿದ್ದರು.

    ಪಿಡಬ್ಲುೃಡಿ ಇಲಾಖೆಯ ನಿಯಮ ಮತ್ತು ಕಾನೂನು ಪ್ರಕಾರ ಸರ್ವೇ ಮಾಡಿ ಅದರಂತೆ ರಸ್ತೆ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಸದರು ಹಾಗೂ ಶಾಸಕರು ಒಪ್ಪಿದ್ದಾರೆ ಎನ್ನಲಾಗಿದೆ. ಆದರೂ ರಸ್ತೆಯ ದುರಸ್ತಿಗೆ ಹಿನ್ನಡೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ. ರಾಜಕೀಯ ಮುಖಂಡರು ರಾಜಕಾರಣ ಬಿಟ್ಟು, ಜನಹಿತ ದೃಷ್ಟಿಯಿಂದ ರಸ್ತೆ ಅಭಿವೃದ್ಧಿಗೆ ಮುಮದಾಗಲಿ. ಜನರು ಮತ್ತು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವತ್ತ ಗಮನ ಹರಿಸಲಿ ಎಂಬುದು ನಾಗರಿಕರ ಆಗ್ರಹವಾಗಿದೆ.

    ಪ್ರಯಾಣಿಕರಿಗೆ ನಿತ್ಯ ಸಂಕಟ: ಕಾಂಗ್ರೆಸ್- ಬಿಜೆಪಿ ಪಕ್ಷಗಳು ರಸ್ತೆ ಸಮಸ್ಯೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ. ನಗರಸಭೆ ಆಡಳಿತಾರೂಢ ಜೆಡಿಎಸ್ ಸದಸ್ಯರು ಜಿಲ್ಲಾಧಿಕಾರಿ ಮೇಲೆ ಒತ್ತಡ ತಂದು ಸಮಸ್ಯೆಗೆ ಮುಕ್ತಿ ನೀಡಬಹುದಿತ್ತು. ಆದರೆ, ಈ ಕೆಲಸಕ್ಕೆ ಕೈ ಹಾಕದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ. ಮೂರು ಪಕ್ಷಗಳ ನಿರ್ಲಿಪ್ತ ನಡೆಯಿಂದಾಗಿ ಇಲ್ಲಿ ನಿತ್ಯವೂ ಸಂಚರಿಸುವ ಸಾವಿರಾರು ವಾಹನಗಳ ಸವಾರರು ಮತ್ತು ಪ್ರಯಾಣಿಕರು ಯಾತನೆ ಅನುಭವಿಸುತ್ತಿದ್ದಾರೆ. ಕೆಲವು ಸಲ ಬೈಕ್ ಸವಾರರು ಬಿದ್ದು ಆಸ್ಪತ್ರೆ ಸೇರಿದ ನಿದರ್ಶನಗಳಿವೆ. ಒಎಚ್‌ಟಿಗೆ ಉಳಿವಿನ ಪ್ರಶ್ನೆ: ವಿಸ್ತರಣೆ ಕಾರ್ಯದ ವೇಳೆ ದರ್ಗಾ ಮುಂಭಾಗ ಓವರ್‌ಹೆಡ್ ಟ್ಯಾಂಕ್ ಇದೆ ಎನ್ನುವ ಅರಿವಿಲ್ಲದೆ ಅದರ ಪಕ್ಕದಲ್ಲೇ ರಸ್ತೆ ಅಗೆಯಲಾಗಿದೆ. ಇದರಿಂದ ಅದಕ್ಕೆ ಉಳಿವಿನ ಪ್ರಶ್ನೆ ಎದುರಾಗಿದೆ. ಯಾವಾಗ ಬೀಳುತ್ತದೆ ಎಂಬ ಭಯದಲ್ಲಿಯೇ ಸಾರ್ವಜನಿಕರು ಓಡಾಡುವುದು ತಪ್ಪಿಲ್ಲ.

    ಬಿಜೆಪಿ ಪಕ್ಷದವರು ವಿನಾಕಾರಣ ಪ್ರಗತಿ ಕಾರ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ರಸ್ತೆ ಅಭಿವೃದ್ಧಿಯಾಗಿಲ್ಲ. ಶೀಘ್ರವೇ ನಗರೋತ್ಥಾನ ಅನುದಾನ ಬಳಸಿ ರಸ್ತೆ ಅಭಿವೃದ್ಧಿಪಡಿಸಲಾಗುವುದು.
    ಎಸ್.ರಾಮಪ್ಪ, ಶಾಸಕ.

    ದರ್ಗಾ ಮುಂಭಾಗದ ರಸ್ತೆಯು ಸಂಪೂರ್ಣ ತಗ್ಗು-ಗುಂಡಿಗಳಿಂದ ಕೂಡಿದೆ. ವಾಹನ ಚಾಲನೆಗೆ ಹರಸಾಹಸ ಪಡುವಂತಾಗಿದೆ. ಈ ರಸ್ತೆಯ ಧೂಳಿನಿಂದಾಗಿ ಎದುರು ಬರುವ ವಾಹನಗಳು ಕಣ್ಣಿಗೆ ಕಾಣುವುದಿಲ್ಲ. ಅಪಘಾತಕ್ಕೆ ಕಾರಣವಾಗುತ್ತವೆ. ಇದಕ್ಕೆ ಯಾರು ಹೊಣೆ. ಸಂಬಂಧಿತರು ರಸ್ತೆ ದುರಸ್ತಿ ಮಾಡಲಿ.
    ಮಹೇಶ್, ವೀರಪ್ಪ, ವಾಹನ ಸವಾರರು, ಹರಿಹರ.

    ರಸ್ತೆ ದುರಸ್ತಿಗೆ ಒತ್ತಾಯಿಸಿ ಉಪವಾಸ, ಪ್ರತಿಭಟನೆ, ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ಮಾಡಲಾಗಿದೆ. ಭರವಸೆ ಬಿಟ್ಟರೆ ಪ್ರಗತಿ ಕಂಡಿಲ್ಲ. ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಮರುಹೋರಾಟ ಮಾಡಲಾಗುವುದು.
    ಎಸ್.ಗೋವಿಂದ್, ತಾಲೂಕು ಅಧ್ಯಕ್ಷ, ಜಯಕರ್ನಾಟಕ ಸಂಘಟನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts