More

    ಅಂದು ಬೆಳಗಿತ್ತು ‘ಕಳಸ’ ಇಂದು ಬರೀ ಹೊಲಸು

    ಬಸವರಾಜ ಎಸ್. ದೀಪಾವಳಿ ಸಂಶಿ

    ಗುರು ಗೋವಿಂದ ಭಟ್ಟರು ಜನಿಸಿದ ಕಳಸ ಗ್ರಾಮ 19ನೇ ಶತಮಾನದಲ್ಲಿ ತತ್ವಪದಗಳಿಂದ ಅಪಾರ ಜನಮನ್ನಣೆ ಗಳಿಸಿತ್ತು. ಆದರೆ, ಈಗ ಅದೇ ಗ್ರಾಮದಲ್ಲಿ ಏಳು ದಿನಕ್ಕೊಮ್ಮೆ ಕುಡಿಯುವ ನೀರು, ಎಲ್ಲೆಂದರಲ್ಲಿ ಗಬ್ಬು ನಾರುವ ಚರಂಡಿ ನೀರು, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬದಲ್ಲಿನ ವೈಯರ್ ಬೋರ್ಡ್​ಗಳಿಂದ ಅಪಕೀರ್ತಿಗೆ ಪಾತ್ರವಾಗುತ್ತಿದೆ.

    ಕುಂದಗೋಳ ತಾಲೂಕಿನ ಕಳಸ ಗ್ರಾಮ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರ ಪ್ರಿಯವಾದ ಸ್ಥಳ. ಈ ಗ್ರಾಮದಲ್ಲಿ 11 ಸಾವಿರ ಜನಸಂಖ್ಯೆ ಇದ್ದು, 7 ವಾರ್ಡ್​ಗೆ 19 ಜನಪ್ರತಿನಿಧಿಗಳಿದ್ದಾರೆ. ಒಟ್ಟು 7 ಕೊಳವೆ ಬಾವಿಗಳಿದ್ದು, ಅವುಗಳಲ್ಲಿ 3 ಯೋಗ್ಯವಾಗಿವೆ. 3 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಕಾಮಗಾರಿ ಪ್ರಗತಿಯಲ್ಲಿರುವ ಜೆಜೆಎಂ ಇನ್ನೂ ಸೇವೆ ಆರಂಭಿಸಿಲ್ಲ. ಗ್ರಾಮಾಡಳಿತ ಈಗ 8 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದೆ. ಡ್ರಮ್ ಸಿಂಟೆಕ್ಸ್ ಇಲ್ಲದ ಬಡ ಕುಟುಂಬಗಳು ನೀರಿಲ್ಲದೇ ಗೋಳಾಡುವಂತಾಗಿದೆ.

    ಗ್ರಾಮದಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ. ದುರ್ವಾಸನೆಗೆ ಜನರು ಬೇಸತ್ತಿದ್ದಾರೆ. ಇದರಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಿದ್ದು, ರೋಗ ಭೀತಿ ಎದುರಾಗಿದೆ. ಗ್ರಾಮದ ಹೊಸಪೇಟೆ ಓಣಿಯಲ್ಲಿ ತಿಂಗಳ ಹಿಂದೆ ಗಟಾರ್ ನಿರ್ವಣಕ್ಕೆಂದು ತಗ್ಗು ತೆಗೆದು ಹಾಗೇ ಬಿಡಲಾಗಿದೆ. ಅಲ್ಲಿ ಮಲಿನ ನೀರು ನಿಂತು ಕೊಳಚೆಯಾಗಿ ಮಾರ್ಪಡಾಗಿದೆ. ಈ ಬಗ್ಗೆ ಪಿಡಿಒ ಸುರೇಶ ಚಟ್ಲಿ ಅವರನ್ನು ಪ್ರಶ್ನಿಸಿದರೆ, ‘ವಿದ್ಯುತ್ ಬೋರ್ಡ್ ತೆರೆದು ತಂತಿಗಳು ಹೊರ ಬಂದ ಹಾಗೂ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ಮಾಹಿತಿ ಇಲ್ಲ. ಈ ಬಗ್ಗೆ ಸಿಬ್ಬಂದಿಯನ್ನು ಕೇಳಿ ಮಾಹಿತಿ ನೀಡುತ್ತೇನೆ’ ಎನ್ನುತ್ತಾರೆ.

    ನಮ್ಮ ಓಣಿಯಲ್ಲಿ ಗಟಾರ್ ನಿರ್ವಣಕ್ಕೆಂದು ತಗ್ಗು ತೆಗೆದು ತಿಂಗಳೇ ಕಳೆದಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಅಲ್ಲಿ ಚರಂಡಿ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ಶೀಘ್ರ ಕಾಮಗಾರಿ ಆರಂಭಿಸಿ ಅನುಕೂಲ ಮಾಡಿಕೊಡಬೇಕು. | ಬಾಷಾಸಾಬ್ ಲಾಡಸಾಬನವರ ಕಳಸ ಗ್ರಾಮಸ್ಥ

    ಕೆಲ ಕಾಮಗಾರಿಗಳ ಮಾಹಿತಿ ನನಗೆ ಇಲ್ಲ. ಕಾರ್ಯದರ್ಶಿ ಹಾಗೂ ಉಳಿದ ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಕಾಲಾವಕಾಶ ಕೊಡಿ, ಮಾಹಿತಿ ಪಡೆದು ವಿವರ ನೀಡುವೆ. | ಸುರೇಶ ಚಟ್ಲಿ ಪಿಡಿಒ ಕಳಸ

    ಕನಿಷ್ಠ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಬೇಕು. ವರ್ಷ ಗತಿಸಿದರೂ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಗ್ರಾ.ಪಂ. ಆಡಳಿತ ಕುಡಿಯುವ ನೀರಿನ ಬಗ್ಗೆ ಗಮನಹರಿಸಲಿ. ಮಂಜುನಾಥ ಪ್ಯಾಟಿ ಕಳಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts