More

    ಹರೇಕಳ- ಅಡ್ಯಾರ್ ಸೇತುವೆ ಬಹುತೇಕ ಪೂರ್ಣ: ಪಾದಚಾರಿಗಳ ಸಂಚಾರಕ್ಕೆ ಮುಕ್ತ

    ಅನ್ಸಾರ್ ಇನೋಳಿ ಉಳ್ಳಾಲ
    ಹರೇಕಳ- ಅಡ್ಯಾರ್ ಸಂಪರ್ಕಿಸುವ ಡ್ಯಾಂ ಸಹಿತ ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬ್ರಿಡ್ಜ್‌ನಲ್ಲಿ ಸಾರ್ವಜನಿಕರಿಗೆ ನಡೆದಾಡಲು ಅವಕಾಶ ಕಲ್ಪಿಸಲಾಗಿದೆ.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ 200 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಹರೇಕಳ ನೇತ್ರಾವತಿ ನದಿಯಲ್ಲಿ ಹರಿಯುವ ಸಿಹಿನೀರು ತಡೆದು ಉಳ್ಳಾಲ ಭಾಗಕ್ಕೆ ನಿರಂತರ ನೀರು ಸರಬರಾಜು ಮಾಡುವುದು, ಹರೇಕಳ-ಅಡ್ಯಾರ್ ರಾಷ್ಟ್ರೀಯ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುವುದು ಯೋಜನೆಯ ಉದ್ದೇಶ.

    2019ರ ಮಾರ್ಚ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅದಕ್ಕಿಂತ ಮೊದಲೇ ಕೆಲಸವೂ ಆರಂಭಗೊಂಡಿತ್ತು. ‘ಟರ್ನ್ ಕೀ ಬೇಸಿಸ್’ ಯೋಜನೆಯಡಿ ಕಾಮಗಾರಿ ಗುತ್ತಿಗೆ ಪಡೆದರೆ ನಂತರ ನಷ್ಟದ ನೆಪ ಹೇಳದೆ ಅದೇ ಮೊತ್ತದಲ್ಲಿ ಕೆಲಸ ಮುಗಿಸಬೇಕು. ಹೀಗಾಗಿ ಕಾಮಗಾರಿ ಬೇಗ ಮುಗಿಸಲು ಯೋಚಿಸಿದ ಗುತ್ತಿಗೆ ಸಂಸ್ಥೆ 2019ರ ಜನವರಿಯಲ್ಲೇ ಆರಂಭಿಕ ಹಂತದ ಕಾಮಗಾರಿ ಮುಗಿಸಿತ್ತು. ಬಳಿಕ ಕೋವಿಡ್, ಲಾಕ್‌ಡೌನ್ ಪರಿಣಾಮ ಸೇತುವೆ ಕಾಮಗಾರಿಯೂ ನಿಂತಿತು. ಆರೇಳು ತಿಂಗಳ ಬಳಿಕ ಮತ್ತೆ ಕಾಮಗಾರಿ ಆರಂಭಗೊಂಡು ಶರವೇಗ ಪಡೆಯಿತು. ಆದರೆ ಅನಿರೀಕ್ಷಿತವಾಗಿ ಬಂದ ಮಳೆ, ತುಂಬೆಯಲ್ಲಿ ಮುನ್ಸೂಚನೆ ಇಲ್ಲದೆ ಡ್ಯಾಂ ತೆರೆದ ಕಾರಣ ರಭಸವಾಗಿ ಬಂದ ನೀರು ಹರೇಕಳ ಸೇತುವೆ ಕಾಮಗಾರಿಗೆ ಬಳಸಿದ ತಾತ್ಕಾಲಿಕ ರಸ್ತೆ ಸಹಿತ ಲಕ್ಷಾಂತರ ಮೌಲ್ಯದ ಯಂತ್ರಗಳು, ಪರಿಕರಗಳನ್ನೂ ಎಳೆದುಕೊಂಡು ಹೋಯಿತು. ಮಳೆಗಾಲ ಮುಗಿದ ಬಳಿಕ ಮತ್ತೆ ಕಾಮಗಾರಿ ಆರಂಭಗೊಂಡು ಈ ವರ್ಷ ಪೂರ್ಣಗೊಳ್ಳುವ ಹಂತದಲ್ಲಿದೆ.

    ಜನರಿಗೆ ಸಮಯ ಮಿತಿಯಲ್ಲಿ ಸೇತುವೆ ಮೇಲಿಂದ ನಡೆದಾಡಲು ಅವಕಾಶ ಕಲ್ಪಿಸಲಾಗಿದ್ದು, ಹರೇಕಳ ಮತ್ತು ಅಡ್ಯಾರ್ ಭಾಗದಲ್ಲಿ ಗೇಟ್ ನಿರ್ಮಿಸಲಾಗಿದೆ. ಸೇತುವೆ ಮೇಲೆ ಓಡಾಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ ಕಾರಣ ಇಲ್ಲಿ ಪ್ರಯಾಣಿಕರ ದೋಣಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಏಳು ಮೀಟರ್ ಅಗಲದ ರಸ್ತೆಯೊಂದಿಗೆ ಇಕ್ಕೆಲಗಳಲ್ಲಿ ಫುಟ್‌ಪಾತ್ ನಿರ್ಮಾಣವಾಗಿದೆ. ಕಿಂಡಿ ಅಣೆಕಟ್ಟಿಗೆ ವಿದ್ಯುತ್ ಸಂಬಂಧಿತ ಕೆಲಸ ಆರಂಭಗೊಂಡಿದ್ದು ಮುಂದಿನ ತಿಂಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಮಂಗಳೂರು ಪ್ರಯಾಣ ಹತ್ತಿರ: ಪಶ್ಚಿಮ ವಾಹಿನಿ ಯೋಜನೆಯಡಿ ನೀರಾವರಿ ಇಲಾಖೆಯಡಿ ನಡೆದ ಅತಿದೊಡ್ಡ ಯೋಜನೆ ಎನ್ನುವ ಖ್ಯಾತಿ ಹರೇಕಳ- ಅಡ್ಯಾರ್ ಸೇತುವೆ ಮತ್ತು ಅಣೆಕಟ್ಟು ಪಾಲಾಗಿದೆ. ಡ್ಯಾಂನಿಂದ 18.7 ಮಿಲಿಯನ್ ಕ್ಯೂಸಿಕ್ ಮೀಟರ್ ಸಿಹಿನೀರು ಪೂರೈಕೆಯಾಗಲಿದೆ. ಉಳ್ಳಾಲ ಭಾಗದ ಪ್ರತೀ ಮನೆ, ವ್ಯವಹಾರ ಕೇಂದ್ರಗಳಿಗೆ 24 ಗಂಟೆಯೂ ನೀರಿನ ವ್ಯವಸ್ಥೆ ಆಗಲಿದೆ. ಅದಕ್ಕಿಂತಲೂ ಮುಖ್ಯವಾಗಿ ಹಲವು ಗ್ರಾಮದ ಜನರಿಗೆ ಮಂಗಳೂರು ಪ್ರಯಾಣ ಅತ್ಯಂತ ಸಮೀಪವಾಗಲಿದೆ.

    ಇದು ಸೇತುವೆ ಮಾತ್ರ ಆಗಿರದೆ ಕಿಂಡಿ ಅಣೆಕಟ್ಟನ್ನು ಹೊಂದಿದೆ. ಗೇಟುಗಳು ವಿದ್ಯುತ್ ಚಾಲಿತವಾಗಿರುವುದರಿಂದ ಸಿವಿಲ್ ಕೆಲಸ ಮುಗಿದಿದೆ. ಒಂದು ತಿಂಗಳಲ್ಲಿ ವಿದ್ಯುತ್ ಸಂಬಂಧಿತ ಕೆಲಸ ಪೂರ್ಣಗೊಳ್ಳಲಿದೆ. ನಂತರ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
    – ವಿಷ್ಣು ಕಾಮತ್, ಸಹಾಯಕ ಕಾರ್ಯಪಾಲ ಅಭಿಯಂತರ, ಸಣ್ಣ ನೀರಾವರಿ ಇಲಾಖೆ

    ಇದುವರೆಗೆ ಹರೇಕಳ ಭಾಗದ ಜನರು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ದೋಣಿ ಮೂಲಕ ನದಿ ದಾಟಿ ಮಂಗಳೂರು, ಬಿ.ಸಿ.ರೋಡು, ಬಂಟ್ವಾಳಕ್ಕೆ ಹೋಗಬೇಕಾಗಿತ್ತು. ಮಳೆಗಾಲದಲ್ಲಿ ನದಿಯಲ್ಲಿ ಪ್ರಯಾಣ ಅಪಾಯಕಾರಿಯಾಗಿತ್ತು. ಆದರೆ ಸೇತುವೆ ನಿರ್ಮಾಣದಿಂದ ನೀರಿನ ಜೊತೆ ಸಾರಿಗೆ ಸಮಸ್ಯೆಗೂ ಪರಿಹಾರ ಸಿಗಲಿದೆ.
    – ಅಬ್ದುಲ್ ಮಜೀದ್ ಎಂ.ಪಿ., ಸದಸ್ಯ, ಹರೇಕಳ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts