More

    ನಿರಂತರ ಮಳೆ, ಕಡೂರು ಗ್ರಾಮ ಜಲಾವೃತ ಭೀತಿ; ಕೆರೆ ಕೋಡಿ ಬಿದ್ದು ಊರೊಳಗೆ ನುಗ್ಗಿದ ನೀರು

    ಹನುಮಸಾಗರ: ಸತತ ಮಳೆಯಿಂದ ಕಡೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಗ್ರಾಮದೊಳಗೆ ನೀರು ನುಗ್ಗಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕಿನ ಗಡಿಭಾಗದಲ್ಲಿರುವ ಕಡೂರು ಗ್ರಾಮದ ಕೆರೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಧಾರಾಕಾರ ಮಳೆಗೆ ಬುಧವಾರ ರಾತ್ರಿ ತುಂಬಿದೆ. ಕೋಡಿ ಬಿದ್ದು ನೀರು ಗ್ರಾಮದೊಳಗೆ ಬರುತ್ತಿದ್ದು, ಸದ್ಯ ಸರ್ಕಾರಿ ಶಾಲೆಯಲ್ಲಿ ನೀರು ಸಂಗ್ರಹವಾಗಿದೆ. ಅಕ್ಕಪಕ್ಕದ ಮನೆಗಳತ್ತ ನೀರು ನುಗುತ್ತಿದ್ದು, ಸಂಪೂರ್ಣ ಜಲಾವೃತವಾಗುವ ಭೀತಿ ಮನೆ ಮಾಡಿದೆ. ಈಗಾಗಲೇ ಮೂರು ಮನೆಗಳು ಬಿದ್ದಿವೆ. ಮಳೆ ಮುಂದುವರಿದರೆ ಹಾನಿ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

    ಈ ಕುರಿತು ತಹಸೀಲ್ದಾರ್ ಗುರುರಾಜ ಛಲವಾದಿ ಪ್ರತಿಕ್ರಿಯಿಸಿ, ಗ್ರಾಮವು 2009ರಲ್ಲಿ ಮುಳುಗಡೆಯಾಗಿದ್ದು, ಸ್ಥಳಾಂತರಿಸಲಾಗಿತ್ತು. ಗ್ರಾಮಸ್ಥರಿಗೆ ನಿವೇಶನ ಹಂಚಿಕೆ ಮಾಡಲು ಪ್ರಯತ್ನ ಮಾಡಲಾಗಿದೆ. ಆದರೆ ಬೇರೆಡೆ ಹೋಗಲು ಎಲ್ಲರೂ ಒಪ್ಪುತ್ತಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿಸಿದರು.

    ತಾವರಗೇರಾ: ನಿರಂತರ ಮಳೆಗೆ ಗೇರಿಪುರದ ಜಿನುಗು ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ದಶಕದ ಬಳಿಕ ತುಂಬಿದ್ದು, ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಹೊಲಗಳಿಗೆ ಹೋಗಲು ರೈತರಿಗೆ ದಾರಿ ಇಲ್ಲದಂತಾಗಿದೆ. ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಜಿನುಗು ಕೆರೆ ಭರ್ತಿಯಾಗಿರುವುದು ಒಂದೆಡೆ ಖುಷಿ ನೀಡಿದರೆ, ಮತ್ತೊಂದೆಡೆ ಜಮೀನುಗಳಿಗೆ ನೀರು ನುಗ್ಗಿರುವುದು ಕೃಷಿಕರಿಗೆ ಚಿಂತೆಯಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಕೆರೆ ಒಳಪಟ್ಟಿದ್ದು, ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts