More

    ಅನುದಾನ ಹಂಚಿಕೆಯಲ್ಲಿ ಸರ್ಕಾರ ತಾರತಮ್ಯ

    ಶಿವಮೊಗ್ಗ: ಹಂಪಿ ಕನ್ನಡ ವಿವಿ ಕನ್ನಡದ ಅಸ್ಮಿತೆಯ ಪ್ರತೀಕ. ಕನ್ನಡಿಗರ ಸ್ವಾಭಿಮಾನದ ಸಂಕೇತ. ಆದರೆ ಸರ್ಕಾರ ಹಂಪಿ ಕನ್ನಡ ವಿವಿಗೆ ಶೇ.70 ಅನುದಾನ ಕಡಿತಗೊಳಿಸಿದೆ. ಆದರೆ ಸಂಸ್ಕೃತ ವಿವಿಗೆ ಎಂದಿನಂತೆಯೇ ಅನುದಾನ ನೀಡುತ್ತಿರುವುದು ಸರ್ಕಾರದ ಕನ್ನಡ ವಿರೋಧಿ ನಿಲುವಿಗೆ ಸಾಕ್ಷಿ ಎಂದು ಮಾಜಿ ಶಾಸಕ ವೈಎಸ್​ವಿ ದತ್ತ ದೂರಿದರು.

    ಸಂಸ್ಕೃತ ವಿವಿಗೆ ಅನುದಾನ ನೀಡುವ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಕನ್ನಡ ವಿವಿಯನ್ನು ಕಡೆಗಣಿಸುವುದು ಸಲ್ಲ. ಹಂಪಿ ವಿವಿಗೆ ಅನುದಾನ ನೀಡಲು ಹಣಕಾಸು ಮುಗ್ಗಟ್ಟು ಎನ್ನುತ್ತಿರುವ ಸರ್ಕಾರ ಸಂಸ್ಕೃತ ವಿವಿ ಅನುದಾನದ ವಿಷಯದಲ್ಲಿ ಉದಾರ ನೀತಿ ತೋರುತ್ತಿರುವುದು ವಿಶೇಷ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕನ್ನಡ ಸಾಹಿತ್ಯ, ಪರಂಪರೆಗೆ ಹಂಪಿ ಕನ್ನಡ ವಿವಿ ನೀಡಿದ ಕೊಡುಗೆ ಅಪಾರ. ಅಲ್ಲಿಂದ ಅನೇಕ ಸಾಹಿತ್ಯಗಳು ಪ್ರಕಟಗೊಂಡಿವೆ. ಈಗ ಅನುದಾನ ಕೊರತೆಯಿಂದ ವಿವಿಯಲ್ಲಿ ಸಾಹಿತ್ಯ ಪ್ರಕಟಣೆ, ಸಂಶೋಧನೆ ಸ್ಥಗಿತಗೊಂಡಿದೆ. ಆದರೂ ಕನ್ನಡಿಗರು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದರು.

    ಕನ್ನಡ ವಿವಿಗೆ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಸರ್ಕಾರವನ್ನು ಎಚ್ಚರಿಸಲು ಅಭಿಯಾನ ಆರಂಭವಾಗಿದೆ. ಗೋಕಾಕ್ ಚಳವಳಿ ಮಾದರಿಯಲ್ಲೇ ಈ ಅಭಿಯಾನ ನಡೆಯುವ ಅವಶ್ಯಕತೆ ಎಂದು ಹೇಳಿದರು.

    ಸಾಹಿತ್ಯ ರಚಿಸಿದ್ದು ಹಿಂದಿಯಲ್ಲಲ್ಲ: ಜ್ಞಾನಪೀಠ ಪ್ರಶಸ್ತಿ ನೀಡುವುದು ಕೇಂದ್ರ ಸರ್ಕಾರ. ಹಾಗೆಂದಮಾತ್ರಕ್ಕೆ ಕನ್ನಡದ ಮೇರು ಸಾಹಿತಿಗಳು ಯಾರೂ ಹಿಂದಿಯಲ್ಲಿ ಸಾಹಿತ್ಯ ರಚನೆ ಮಾಡಿರಲಿಲ್ಲ. ಅವರು ಕನ್ನಡದಲ್ಲಿ ಮಾಡಿದ್ದ ಸಾಹಿತ್ಯ ರಚನೆಯನ್ನೇ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಹೀಗಿರುವಾಗ ರಾಷ್ಟ್ರ ಮಟ್ಟದಲ್ಲೂ ಯುವಜನೋತ್ಸವ ನಡೆಯುತ್ತದೆ ಎಂಬ ಕಾರಣಕ್ಕೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಡೆಸುವ ಸ್ಪರ್ಧೆಗೆ ಕನ್ನಡಿಗರು ಭಾಗವಹಿಸಬೇಕೆಂದು ಕೇಂದ್ರ ಸರ್ಕಾರ ಒತ್ತಡ ಹೇರುವುದು ಎಷ್ಟು ಸರಿ ಎಂದು ವೈಎಸ್​ವಿ ದತ್ತ ಪ್ರಶ್ನಿಸಿದರು.

    ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಮುಖಂಡ ತ್ಯಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

    ಎಲ್ಲ ಜಿಲ್ಲೆಗಳಲ್ಲೂ ಯುವಜನೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಈ ಪೈಕಿ ಆಶುಭಾಷಣ, ಏಕಾಂಕ ನಾಟಕ ಹಾಗೂ ಬೀದಿ ನಾಟಕ ಸ್ಪರ್ಧೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಡೆಸುತ್ತಿರುವುದು ಆಶ್ಚರ್ಯ ಮೂಡಿಸಿದೆ. ಇದು ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ತ್ರಿಭಾಷಾ ಸೂತ್ರ ಹೇರಿಕೆಗೆ ಮಾಡುತ್ತಿರುವ ಹುನ್ನಾರ.

    | ವೈಎಸ್​ವಿ ದತ್ತ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts