More

    ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸ್ಟಾರ್ ಪ್ರಚಾರಕ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ವಿಧಾನಸಭಾ ಚುನಾವಣೆ ತೆರೆ ಹಿಂದಿದ್ದ ವ್ಯಕ್ತಿ ಬಿಜೆಪಿ ಅಭ್ಯರ್ಥಿ. ಪರದೆ ಮುಂದಿದ್ದವರ ಸಾರಥ್ಯ. ಚುನಾವಣೆಯಿಂದ ಚುನಾವಣೆಗೆ ಗೆಲುವಿನ ಅಂತರ ಹೆಚ್ಚಿಸಿಕೊಂಡು ಬಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಸ್ಟಾರ್ ಪ್ರಚಾರಕ! ಹಾಲಾಡಿ ಮೇಲಿನ ಅಭಿಮಾನ ಕುಗ್ಗದ ವರ್ಚಸ್ಸು ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಶೇಷ.

    ಬಿಜೆಪಿ ಸ್ಟಾರ್ ಪ್ರಚಾರಕ

    ಬಿಜೆಪಿ ರಾಜ್ಯಮಟ್ಟದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಾಲಾಡಿ ಹೆಸರಿಲ್ಲದಿರಬಹುದು, ಆದರೆ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಹಾಲಾಡಿಯೇ ಸ್ಟಾರ್. ಸದಾ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾ ಐದು ಬಾರಿ ಚುನಾವಣೆ ಎದುರಿಸಿ ಮತಗಳ ಸಂಖ್ಯೆ ಏರಿಸಿಕೊಂಡಿದ್ದು, ಹಾಲಾಡಿ ಜನಪ್ರತಿನಿಧಿಗಳಲ್ಲಿ ವಿಭಿನ್ನ.

    ಕರಾವಳಿ ವಾಜಪೇಯಿ

    ಕರಾವಳಿ ವಾಜಪೇಯಿ ಎಂದು ಕರೆಯಿಸಿಕೊಳ್ಳುವ ಹಾಲಾಡಿ ಯಾವುದೇ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಗುದ್ದಲಿ ಪೂಜೆ, ಉದ್ಘಾಟನೆ ಹಾರ ತುರಾಯಿಗಳಿಂದ ಬಹಳ ದೂರ. 1999ರಿಂದ ಆರಂಭಗೊಂಡು ಹಾಲಾಡಿ ಚುನಾವಣಾ ರಾಜಕೀಯದಲ್ಲಿ ಸೋಲು ಕಂಡಿಲ್ಲ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಜಾತಿ ಮೀರಿ ಹಾಲಾಡಿ ನಿರಂತರವಾಗಿ ಗೆದ್ದುಕೊಂಡು ಬಂದಿದ್ದಾರೆ.

    ಹಾಲಾಡಿ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಗೆಲುವಿನ ಅಂತರ 2,500 ಮತ ಐದೇ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ವಿರುದ್ಧ ಗೆದ್ದ ಅಂತರ 51 ಸಾವಿರ ಮತ. 2018ರಲ್ಲಿ ಹಾಲಾಡಿಗೆ 1,03,434 ಮತ ಬಿದ್ದರೆ ಕಾಂಗ್ರೆಸ್‌ನ ರಾಕೇಶ್ ಮಲ್ಲಿಗೆ 40,029 ಮತಗಳು ಬಿದ್ದಿದ್ದವು. 2013ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದಾಗ ಶ್ರೀನಿವಾಸ ಶೆಟ್ಟಿಗೆ 80,563 ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟಿಗೆ 39,952 ಮತಗಳು ಸಿಕ್ಕಿತ್ತು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಾಡಿಗೆ 71,695 ಮತಗಳು ಬಿದ್ದರೆ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಗೆ 46,612 ಮತಗಳು ಸಿಕ್ಕಿದ್ದವು.

    ಇದನ್ನೂ ಓದಿ: ಕೃಷ್ಣರಾಯ ಕೊಡ್ಗಿ ಜೈಲಿನಿಂದ ಬರೆದ ಪತ್ರ ವೈರಲ್

    ಇಬ್ಬರಿಗೂ ಹಾಲಾಡಿ ಸಾರಥ್ಯ

    ಎ.ಜಿ.ಕೊಡ್ಗಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರಿದ ಸಂದರ್ಭ ಹಾಲಾಡಿ ಕೂಡ ಇದ್ದು, ಬಿಜೆಪಿಗೆ ಎ.ಜಿ.ಕೊಡ್ಗಿ ಅಭ್ಯರ್ಥಿಯಾದರೆ, ಕೊಡ್ಗಿ ಹಿಂದೆ ಹಾಲಾಡಿ ಕೆಲಸ ಮಾಡಿದ್ದರು. ಇವತ್ತು ಕಿರಣ್ ಕೊಡ್ಗಿ ಪರ ಚುನಾವಣೆ ಪ್ರಚಾರ ಮಾಡುವ ಮೂಲಕ ಹಾಲಾಡಿ ತಂದೆ ಮಗ ಇಬ್ಬರ ಪರವಾಗಿ ಕೆಲಸ ಮಾಡಿದ ಹಿರಿಮೆಗೆ ಪಾತ್ರರಾದರು. ವಿಶೇಷ ಎಂದರೆ ಹಾಲಾಡಿ ಹಿಂದೆ ಕಾಂಗ್ರೆಸ್‌ನಲ್ಲಿದ್ದು, ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಈಗ ಕಿರಣ್ ಕೊಡ್ಗಿ ಟಿಕೆಟ್ ಸಿಗುವಲ್ಲಿ ಕೂಡ ಹಾಲಾಡಿ ಕೊಡುಗೆ ಮರೆಯುವಂತಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದರೂ ಹಾಲಾಡಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪ್ರತಿ ಗೆಲುವಿನಲ್ಲೂ ಜತೆಯಿದ್ದ ಕಿರಣ್ ಕೊಡ್ಗಿ ಪರವಾಗಿ ಸ್ಟಾರ್ ಪ್ರಚಾರಕರಾಗಿದ್ದಾರೆ.

    ಪ್ರಮುಖ ಅಂಶ

    ಹಾಲಾಡಿ ಶ್ರೀನಿವಾಸ ಶೆಟ್ಟಿ ಹಿಡಿತ ಕುಂದಾಪುರಕ್ಕೆ ಸೀಮಿತವಾಗಿಲ್ಲ. ಕಾರ್ಕಳ, ಬೈಂದೂರು, ಉಡುಪಿ ಹಾಗೂ ಕಾಪು ಕ್ಷೇತ್ರಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಎಲ್ಲೇ ಹೋದರು ಜನ ಸಮೂಹವೇ ಹರಿದು ಬರುತ್ತಿದೆ. ಹಾಲಾಡಿ ಬರುತ್ತಾರೆ ಎನ್ನುವ ಕಾರಣದಿಂದ ಪ್ರಚಾರ ಸಭೆಯಲ್ಲಿ ಅತಿ ಹೆಚ್ಚಿನ ಮತದಾರರು ಭಾಗವಹಿಸುತ್ತಿದ್ದು, ಹಾಲಾಡಿ ಜನಪ್ರಿಯತೆಗೆ ಸಾಕ್ಷಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts