More

    ಕಳಪೆ ಕಾಮಗಾರಿಗೆ ಅನುದಾನ ಪೋಲು, ಹಕ್ಲಾಡಿ ಗ್ರಾಮಸ್ಥರ ಆಕ್ರೋಶ

    ಕುಂದಾಪುರ: ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಹಿಂದಕ್ಕೆ ಹೋಗಬಾರದು ಎನ್ನುವ ಉದ್ದೇಶದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೇ ಬೇರೆ ಗುತ್ತಿಗೆದಾರರ ಹೆಸರಲ್ಲಿ ನಡೆಸಿದ ಕಾಮಗಾರಿ ನಿಷ್ಪ್ರಯೋಜಕವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಬೈಂದೂರು ತಾಲೂಕು ಹಕ್ಲಾಡಿ ಗ್ರಾಮ ಪಂಚಾಯಿತಿ 14ನೇ ಹಣಕಾಸು ಯೋಜನೆಯಲ್ಲಿ ಎರಡು ಕಡೆ ಒಳಚರಂಡಿ ಹಾಗೂ ಕಾಲು ಸಂಕ ಕಾಮಗಾರಿ ನಡೆಲಾಗಿದೆ. ಕಾಮಗಾರಿಗಳ ಗುಣಮಟ್ಟ ನೋಡಬೇಕಿದ್ದ ಗ್ರಾಪಂ ಸದಸ್ಯರೇ ನಿರ್ವಹಿಸಿದ ಕಾಮಗಾರಿ ಕಳಪೆಯಾಗಿರುವುದು ಗ್ರಾಮ ವಾಸಿಗಳ ಸಿಟ್ಟಿಗೆ ಕಾರಣವಾಗಿದೆ.

    ಹಕ್ಲಾಡಿ ಗುಡ್ಡೆಯಲ್ಲಿ ಮಾಡಿದ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ. ಭಜನಾ ಮಂದಿರ ಎದುರು ಹಿಂದೆ ಶಿಲೆಕಲ್ಲು ಕಟ್ಟಿ ಚರಂಡಿ ಮಾಡಿದ್ದರೂ ಶಿಲೆಕಲ್ಲು ಕಿತ್ತು ಮತ್ತೆ ಚರಂಡಿ ನಿರ್ಮಿಸಿದ್ದು ಅಲ್ಲದೆ ಒಳಚರಂಡಿ ನೀರು ರಸ್ತೆಮೇಲೆ ಹರಿಯಲು ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕರಿಗೆ ಸಂಚಾರಕ್ಕಾಗಿ ಖಾಸಗಿ ಜಾಗದಲ್ಲಿ 26 ಸಾವಿರ ರೂ. ವೆಚ್ಚದಲ್ಲಿ ಕಾಲುಸಂಕ ನಿರ್ಮಿಸುವ ಮೂಲಕ ಸರ್ಕಾರಿ ಅನುದಾನ ದುರ್ಬಳಕೆ ಮಾಡಲಾಗಿದೆ. ಕಾಲು ಸಂಕದ ಎರಡೂ ಬದಿಯಲ್ಲಿ ನೀರಿನ ಹರಿವಿಗೆ ಕೊಚ್ಚಿ ಹೋಗದಂತೆ ಕಲ್ಲು ಕಟ್ಟಿ ನಂತರ ಸಿಮೆಂಟ್ ಹಾಸು ಹಾಕಬೇಕಿದ್ದರೂ ಹಾಗೆ ಮಾಡದೆ ಸಿಮೆಂಟ್ ಸ್ಲ್ಯಾಬ್ ಹಾಕಿದ್ದು, ಕಾಲು ಸಂಕ ಕುಸಿಯುವ ಹಂತಕ್ಕೆ ಬಂದಿದೆ.

    ಭಜನಾ ಮಂದಿರ ಬಳಿ ಸಾರ್ವಜನಿಕ ಬಾವಿ ಕಟ್ಟೆಗೆ ಸಿಮೆಂಟ್ ಪ್ಲಾಸ್ಟ್ ಮಾಡಿದ್ದು, ಕ್ಯೂರಿಂಗ್ ಮಾಡಿಲ್ಲ. ಭಜನಾಮಂದಿರ ಒಳಚರಂಡಿ ನೀರು ಹರಿದು ಹೋಗಲು ರಸ್ತೆಯಲ್ಲಿ ಮೋರಿಯಿದ್ದರೂ ಅಲ್ಲಿಯವರೆಗೆ ಒಳಚರಂಡಿ ಮುಂದುವರಿಸದೆ, ರಸ್ತೆಗೆ ನೀರು ಬಿಡುವ ಮೂಲಕ ಅನುದಾನ ಖರ್ಚಿಗಾಗಿ ಕಾಮಗಾರಿ ನಡೆಸಲಾಗಿದೆ ಎನ್ನುವುದಕ್ಕೆ ಸಾಕ್ಷಿ. ಎರಡುಕಡೆ ಒಳಚರಂಡಿ ಕ್ಯೂರ್ ಕೂಡ ಮಾಡಿಲ್ಲ. ಒಳಚರಂಡಿ, ಕಾಲುಸಂಕ ಸೇರಿ 14ನೇ ಹಣಕಾಸು ಯೋಜನೆ 1ಲಕ್ಷ ರೂ.ಅನುದಾನ ಖರ್ಚು ಮಾಡಲಾಗಿದೆ.

    ಮೀಸಲು ಪರವಾನಗಿ ಲೈಸೆನ್ಸ್ ದುರ್ಬಳಕೆ..!
    ಹಕ್ಲಾಡಿ ಗ್ರಾಪಂ 14ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸಿದ ಕಾಮಗಾರಿ ಎಸ್ಸಿ ಎಸ್ಟಿ ಮೀಸಲು ಗುತ್ತಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಮೀಸಲು ಗುತ್ತಿಗೆ ಪ್ರಯೋಜನ ಪಡೆದ ಫಲಾನುಭವಿ ವ್ಯಕ್ತಿ ಹೆಸರಲ್ಲಿ ಕಾಮಗಾರಿ ಗುತ್ತಿಗೆ ದಾಖಲಾಗಿದ್ದು, ಕಾಮಗಾರಿ ನಿರ್ವಹಿಸಿದವರು ಗ್ರಾಪಂ ಸದಸ್ಯರು ಎನ್ನುವುದು ವಿಶೇಷ. ಹಕ್ಲಾಡಿ ಗ್ರಾಮದಲ್ಲಿ ಹೆಚ್ಚಿನ ಕಾಮಗಾರಿ ನಡೆಸಿದವರ ಲಿಸ್ಟ್‌ನಲ್ಲಿ ಗ್ರಾಪಂ ಸದಸ್ಯರೇ ಇದ್ದು, ಮೀಸಲು ಗುತ್ತಿಗೆದಾರರ ಹೆಸರಲ್ಲಿ ಕಾಮಗಾರಿ ಮಾಡಲಾಗಿದೆ.

    ಯಾವ ಹೆಡ್‌ನಲ್ಲಿ ಕಾಮಗಾರಿ ನಡೆಸಲಾಗಿದೆ ಯಾರು ಮಾಡಿದ್ದು ಎನ್ನುವ ಬಗ್ಗೆ ಗ್ರಾಪಂ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುವ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ಆಗಿದ್ದರೆ ಕಾನೂನು ಕ್ರಮ ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಲಾಗುತ್ತದೆ.
    -ಕೇಶವ ಶೆಟ್ಟಿಗಾರ್ ಇಒ, ಕುಂದಾಪುರ ತಾಪಂ

    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಪಂ ಅಧಿಕಾರಿಗಳ ಜೊತೆ ಕಾಮಗಾರಿ ಪರಿಶೀಲನೆ ನಡೆಸಿ, ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ.
    -ಇಂದಿರಾ ಶೆಟ್ಟಿ, ಅಧ್ಯಕ್ಷೆ, ತಾಪಂ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts