More

    ಜಲಜೀವನ್ ಯೋಜನೆಯಲ್ಲಿ ಭ್ರಷ್ಟಾಚಾರ ಶಂಕೆ

    ಬಾಳೆಹೊನ್ನೂರು: ಪ್ರತಿಮನೆಗೂ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಿ ನೀರು ಸರಬರಾಜು ಮಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಜಲ ಜೀವನ್ ಯೋಜನೆಯು ಎನ್.ಆರ್.ಪುರ ತಾಲೂಕಿನಲ್ಲಿ ಕಳಪೆಯಾಗಿದ್ದು, ಭ್ರಷ್ಟಾಚಾರದ ಶಂಕೆ ಮೂಡಿದೆ ಎಂದು ಬಿಜೆಪಿ ಮುಖಂಡ, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ದೂರಿದ್ದಾರೆ.

    ಎನ್.ಆರ್.ಪುರ ತಾಲೂಕಿನಲ್ಲಿ ಯೋಜನೆಯು ಲಂಚದ ಕೂಪಕ್ಕೆ ಸಿಲುಕಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಕುರಿತು ಪಿಆರ್‌ಇಡಿ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಕೇಂದ್ರ ಜಲಜೀವನ್ ಮಿಷನ್ ಮುಖ್ಯಸ್ಥರಿಗೆ ದೂರು ಸಲ್ಲಿಸಲಾಗುವುದು. ಈಗಾಗಲೇ ಪಿಆರ್‌ಇಡಿ ಇಂಜಿನಿಯರ್‌ಗೆ ಫೋನ್ ಮುಖಾಂತರ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದು ನೋಡಿದರೆ ಇದರಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಆರೋಪಿಸಿದ್ದಾರೆ.
    ಒಂದು ಮೀಟರ್ ಆಳ ತೆಗೆದು ಪೈಪ್‌ಲೈನ್ ಮಾಡಬೇಕೆಂಬ ನಿಯಮವಿದ್ದರೂ ಸಹ ಕೆಲವೊಂದು ಭಾಗದಲ್ಲಿ ಕೇವಲ ಒಂದು ಅಡಿ ಆಳ ತೆಗೆದು ಪೈಪ್ ಹಾಕಿದ್ದಾರೆ. ಗುಣಮಟ್ಟದ ಪೈಪ್‌ಗಳನ್ನೂ ಬಳಸಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುವಾಗ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಪಿಡಿಒ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಒಪ್ಪಿಗೆ ನೀಡಬೇಕು. ಒಂದೊಮ್ಮ ಕಾಮಗಾರಿ ಕಳಪೆಗೊಂಡಲ್ಲಿ ಗ್ರಾಪಂ ಅನ್ನೇ ಹೊಣೆಯಾಗಿಸಬೇಕು ಎಂದು ಆಗ್ರಹಿಸಿದ್ದಾರೆ.
    ಮಾಜಿ ಸಚಿವ ಡಿ.ಎನ್.ಜೀವರಾಜ್, ಸಂಸದೆ ಶೋಭಾ ಕರಂದ್ಲಾಜೆ ಅವರ ಪರಿಶ್ರಮದಿಂದ ತಾಲೂಕಿಗೆ ಒಟ್ಟು 51.87 ಕೋಟಿ ರೂ. ಯೋಜನೆ ಬಿಡುಗಡೆಗೊಂಡಿದೆ. ಬಾಳೆಹೊನ್ನೂರಿನ ಕೆಇಬಿ ಕಾಲನಿಗೆ 1.95 ಕೋಟಿ ರೂ., ಹೊಸಮನೆ-ಮಾಗೋಡಿಗೆ 84 ಲಕ್ಷ ರೂ., ಕಡ್ಲೆಮಕ್ಕಿ ಮತ್ತು ಮಠದ ಕಾಲನಿಗೆ 1.84 ಕೋಟಿ ರೂ., ಮೆಣಸುಕೊಡಿಗೆ-ತಲವಾನೆಗೆ 62 ಲಕ್ಷ ರೂ., ಸೀಕೆ-ವಾಟುಕೊಡಿಗೆಗೆ 87 ಲಕ್ಷ ರೂ., ಕೆಸುವಿನಮನೆ ಮುದುಗುಣಿಗೆ 1.12 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
    ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಈ ಯೋಜನೆ ಅದ್ವಾನದತ್ತ ಸಾಗಿದೆ. ಜಿಲ್ಲಾಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts