More

    ಚೇಲಾಗಳಿಂದ ಮರಳು ದಂಧೆ: ಡಿ.ಕೆ. ಸುರೇಶ್ ವಿರುದ್ಧ ಎಚ್​ಡಿಕೆ ವಾಗ್ದಾಳಿ

    ಕೈಲಾಂಚ: ಸಂಸದರ ಚೇಲಾಗಳು ಮರಳು ದಂಧೆ ಮಾಡಿಕೊಂಡು ಅಮಾಯಕ ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಸುರೇಶ್ ವಿರುದ್ಧ ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಕೂನಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅರ್ಕಾವತಿ ನದಿ ದಾಟುವಾಗ ಅಮಾಯಕ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಸಂಸದರ ಚೇಲಾಗಳು ನಡೆಸುತ್ತಿರುವ ಮರಳು ದಂಧೆ ಕಾರಣ ಎಂದು ಟೀಕಿಸಿದರು.

    ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆದಿದೆ. ಇದರಿಂದ ನದಿ ಒಡಲಲ್ಲಿ 15ರಿಂದ 20 ಅಡಿಯಷ್ಟು ಗುಂಡಿಗಳು ಬಿದ್ದಿವೆ. ಅಷ್ಟಕ್ಕೂ ಮರಳು ದಂಧೆ ನಡೆಸಲು ಉತ್ತೇಜನ ನೀಡಿದವರು ಯಾರು ಎಂದು ಪ್ರಶ್ನಿಸಿದರು. ನಾನು ಶಾಸಕನಾಗಿದ್ದರೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದುದರಿಂದ ಮರಳು ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಮರಳು ದಂಧೆ ಮಾಡದಂತೆ ಸೂಚಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

    ಮರಳು ದಂಧೆ ಮಾಡಿಕೊಂಡು ಅಮಾಯಕ ಜೀವಗಳ ಜತೆ ಚೆಲ್ಲಾಟ ಆಡುತ್ತಿದ್ದು, ರಸ್ತೆಯಲ್ಲಿ ಹೆಣ ಇಟ್ಟು ನನ್ನ ಮತ್ತು ನನ್ನ ಪತ್ನಿಯ ವಿರುದ್ಧ ನಾಟಕ ಆಡುತ್ತಿರುವವರು ತಾಕತ್ತಿದ್ದರೆ ನೇರ ಚರ್ಚೆಗೆ ಬರಲಿ ಎಂದು ಸವಾಲೆಸೆದರು. ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಹುಲಿಕೆರೆ-ಗುನ್ನೂರು ನಡುವೆ ಸೇತುವೆ ನಿರ್ವಣಕ್ಕೆ ಅನುಮೋದನೆ ನೀಡಿ, ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ಆದರೆ, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿಲ್ಲ ಎಂದರು.

    ಆರ್.ಆರ್.ನಗರ ಕ್ಷೇತ್ರದಲ್ಲಿ ಚುನಾವಣೆಯ ಈಗಿನ ಪದ್ಧತಿ ಪ್ರಕಾರ ಖರ್ಚು ವೆಚ್ಚದ ಕೊರತೆಯಾಗಿದೆ. ಇಲ್ಲದಿದ್ದರೆ ಆರ್.ಆರ್.ನಗರ ಕ್ಷೇತ್ರದಲ್ಲಿಯೂ ಗೆಲ್ಲುವ ಅವಕಾಶ ಇತ್ತು. ಆದರೂ ಕಾರ್ಯಕರ್ತರು ಶ್ರಮಿಸಿದ್ದಾರೆ. ಪಕ್ಷದ ಅಸ್ತಿತ್ವ ಉಳಿಯುವ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರದಲ್ಲಿ ನಾನು ರಾಜಕೀಯ ಬೆರೆಸುವುದಿಲ್ಲ. ಯಾವುದೇ ಪ್ರಕರಣವಾಗಲಿ ಕಾನೂನು ಬದ್ಧವಾಗಿ ಅಧಿಕಾರಿಗಳು ನಿಸ್ಪಕ್ಷಪಾತವಾಗಿ ತನಿಖೆ ಮಾಡಬೇಕು ಎಂದು ಹೇಳಿದರು.

    ಜಿಪಂ ಸದಸ್ಯ ಯೋಗೀಶ್​ಗೌಡ ಪ್ರಕರಣದಲ್ಲಿ ಒಂದಿಬ್ಬರು ಪೊಲೀಸ್ ಅಧಿಕಾರಿಗಳ ಹೆಸರೂ ಕೇಳಿ ಬರುತ್ತಿದೆ. ರಾಜಕಾರಣಿಗಳು ಹೇಳುತ್ತಾರೆಂದು ಒತ್ತಡಕ್ಕೆ ಸಿಲುಕಿ ತೊಂದರೆ ಅನುಭವಿಸಬೇಡಿ ಎಂದು ಪೊಲೀಸರಿಗೆ ಕುಮಾರಸ್ವಾಮಿ ಕಿವಿಮಾತು ಹೇಳಿದರು.

    ಶಿರಾ ಗೆಲುವು ನಮ್ಮದೇ

    ಕೂನಗಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಹಣದ ಹೊಳೆ ಹರಿಸಿರುವುದರಿಂದ ಶಿರಾದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಭಾವಿಸಿದ್ದಾರೆ. ಆದರೆ, ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಸ್ವಲ್ಪ ಎಡವಿದೆವು. ಅಲ್ಲಿ ಆದಂತಹ ತಪ್ಪುಗಳು ಶಿರಾದಲ್ಲಿ ನಡೆದಿಲ್ಲ. ಶಿರಾದಲ್ಲಿ ಗೆಲುವು ನಮ್ಮದೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವ ಉಳಿಯುವ ಫಲಿತಾಂಶ ಬರಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

    ಅರ್ಕಾವತಿ ನದಿಗೆ ಸೇತುವೆ ನಿರ್ವಿುಸಿ

    ಅರ್ಕಾವತಿ ನದಿ ದಾಟುವಾಗ ಕೊಚ್ಚಿಹೋಗಿದ್ದ ಸಬ್ಬಕೆರೆ ಗ್ರಾಮದ ಅಬ್ದುಲ್ ವಾಜಿದ್ ಮನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 25 ಸಾವಿರ ರೂ.ಗಳ ನೆರವು ನೀಡಿದರು.

    ವಾಜಿದ್ ಮಂಗಳವಾರ ನದಿ ದಾಟುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟಿದ್ದ. ಸ್ಥಳೀಯರು ಶವವನ್ನು ರಾಮನಗರ-ಕನಕಪುರ ರಸ್ತೆಯ ಕೋಟಹಳ್ಳಿ ಬಳಿ ಇಟ್ಟು ಶಾಸಕರು ಸ್ಥಳಕ್ಕೆ ಭೇಟಿ ನೀಡುವಂತೆ ಪ್ರತಿಭಟನೆ ನಡೆಸಿದ್ದರು. ವಿಷಯ ತಿಳಿದ ಎಚ್.ಡಿ. ಕುಮಾರಸ್ವಾಮಿ ಗುರುವಾರ ಪ್ರತಿಭಟನೆ ನಡೆದ ಹುಲಿಕೆರೆ ಮತ್ತು ಕೋಟಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

    ಕೂನಗಲ್ ಗ್ರಾಮಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಬಳಿ ಗ್ರಾಮಸ್ಥರು ಚರಂಡಿ, ಕುಡಿಯುವ ನೀರು ಮತ್ತಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶೀಘ್ರವಾಗಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಗ್ರಾಮದ ಜೆಡಿಎಸ್ ಕಾರ್ಯಕರ್ತ ಪುಟ್ಟಸ್ವಾಮಿಗೌಡ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದರು.

    ನಂತರ ನಾಗೋಹಳ್ಳಿ, ಕೈಲಾಂಚ, ವಡ್ಡರಹಳ್ಳಿ, ಗುನ್ನೂರು ಗ್ರಾಮಸ್ಥರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಗ್ರಾಮದ ಸಮಸ್ಯೆಗಳನ್ನು ಗಮನಕ್ಕೆ ತಂದರು.

    ನಂತರ ಹುಲಿಕೆರೆ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು. ಈ ವೇಳೆ ಗ್ರಾಮಸ್ಥರು ಅರ್ಕಾವತಿ ನದಿಗೆ ಸೇತುವೆ ನಿರ್ವಿುಸುವ ಅಗತ್ಯವಿದೆ ಎಂದು ಕುಮಾರಸ್ವಾಮಿಗೆ ವಿವರಿಸಿದರು. ಸಮಸ್ಯೆ ಅರಿತೇ ಸೇತುವೆ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಟೆಂಡರ್ ಪಡೆದ ವ್ಯಕ್ತಿ ಕೆಲಸ ನಿರ್ವಹಿಸದ ಕಾರಣ ಸೇತುವೆ ನಿರ್ಮಾಣ ತಡವಾಗಿದೆ. ಶೀಘ್ರದಲ್ಲೇ ಕೆಲಸ ಆರಂಭವಾಗುತ್ತದೆ ಎಂದು ತಿಳಿಸಿದರು.

    ನಂತರ ಕೋಟಹಳ್ಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲು ಆಲಿಸಿದರು. ಗ್ರಾಮಸ್ಥರು ಸೇತುವೆ ನಿರ್ವಿುಸುವ ಜಾಗಕ್ಕೆ ಭೇಟಿ ನೀಡಬೇಕು ಎಂದು ಪಟ್ಟುಹಿಡಿದ ಪರಿಣಾಮ ನೇರವಾಗಿ ನದಿ ದಂಡೆಯ ಕಡೆ ಸಾಗಿ ಸೇತುವೆ ಕಾಮಗಾರಿ ಸ್ಥಳ ವೀಕ್ಷಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಬಕೈಲಾಂಚ ಹೋಬಳಿ ವ್ಯಾಪ್ತಿಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಜತೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts