More

    ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠಗಳ ಪಾತ್ರ ಅನನ್ಯ ; ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ

    ಚನ್ನಪಟ್ಟಣ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠಗಳ ಪಾತ್ರ ಅನನ್ಯ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಕುಡಿನೀರು ಕಟ್ಟೆ ಮಠದ ಶ್ರೀಹರಿ ಅನುಭವ ಮಂಟಪದಲ್ಲಿ ಭಾನುವಾರ ತಾಲೂಕಿನ ವಿರಕ್ತ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಚರಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮಾಜಕ್ಕೆ ಉತ್ತಮವಾದ ದಾರಿ ತೋರಿಸುವ ಕೆಲಸವನ್ನು ಮಠಮಾನ್ಯಗಳು ನಿರಂತರವಾಗಿ ನಡೆಸುತ್ತಿವೆ. ಬೇವೂರು ಹಾಗೂ ವಿರಕ್ತ ಮಠಗಳು ಈ ಭಾಗದ ಎರಡು ಕಣ್ಣುಗಳಂತಿದ್ದು, ಈ ಭಾಗದಲ್ಲಿ ಈ ಮಠಗಳ ಸೇವೆ ಅಪಾರವಾಗಿದೆ ಎಂದರು.

    ಮಠಗಳನ್ನು ನಡೆಸುವುದು ಸುಲಭದ ಕೆಲಸವಲ್ಲ. ಸರ್ವರನ್ನು ಜೊತೆಯಾಗಿ ಉತ್ತಮ ಮಾರ್ಗದಲ್ಲಿ ನಡೆಸುವ ಮಹತ್ತರವಾದ ಜವಾಬ್ದಾರಿ ಮಠಗಳ ಮೇಲಿದೆ. ಭಕ್ತರು ಸಹ ಮಠಗಳನ್ನು ಮನೆಗಳಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಸೇವೆ ಎಂಬುದರ ಮುಂದೆ ಯಾವುದು ದೊಡ್ಡದಲ್ಲ. ಸೇವಾ ಮನೋಭಾವ ಹಾಗೂ ಸ್ಮರಣೆಯ ಗುಣಗಳನ್ನು ಬೆಳೆಸಿಕೊಂಡು ಭಕ್ತಿಯ ಮಾರ್ಗದಲ್ಲಿ ಬದುಕು ಸಾಗಿಸಬೇಕು ಎಂದು ಕರೆನೀಡಿದರು.

    ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, 19ನೇ ವಯಸ್ಸಿನಲ್ಲಿಯೇ ಗುರುದೀಕ್ಷೆ ಪಡೆದು ಮಠವನ್ನು ಯಶಸ್ವಿಯಾಗಿ ನಡೆಸುತ್ತಿರುವ ವಿರಕ್ತ ಮಠದ ಶ್ರೀಗಳ ಸೇವೆ ಅಪಾರವಾಗಿದೆ. ಈ ಹಿಂದಿನ ಗುರುಗಳ ಆಶಯದಂತೆ ಮಠದ ಗೌರವವನ್ನು ಎತ್ತಿ ಹಿಡಿದಿರುವ ಅವರ ಕಾರ್ಯ ನಿರಂತರವಾಗಿರಲಿ. ಈ ಹಿಂದೆಯೂ ಬೇವೂರು ಹಾಗೂ ವಿರಕ್ತ ಮಠದ ಹಿರಿಯ ಶ್ರೀಗಳು ಜತೆಯಲ್ಲಿಯೇ ಮುನ್ನಡೆಯುತ್ತಿದ್ದರು. ಅವರ ಮಾರ್ಗದಲ್ಲಿಯೇ ಇಂದಿನ ಶ್ರೀಗಳು ಸಾಗುತ್ತಿರುವುದು ಉತ್ತಮವಾದ ವಿಚಾರ ಎಂದರು.

    ವಿರಕ್ತ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, 19ನೇ ವಯಸ್ಸಿಗೆ ಮಠದ ಜವಾಬ್ದಾರಿ ತೆಗೆದುಕೊಂಡ ಪ್ರಸಂಗ ಹಾಗೂ ಸವೆಸಿದ ಹಾದಿಯನ್ನು ನೆನೆಪಿಸಿಕೊಂಡು ಗದ್ಗರಿತರಾದರು.

    ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಮರಳೇಗವಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಬೇವೂರು ಮಠದ ಶ್ರೀಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಡಿವೈಎಸ್‌ಪಿ ಕೆ.ಎನ್. ರಮೇಶ್, ವೀರಶೈವ ಸಹಕಾರ ಸಂಘದ ಅಧ್ಯಕ್ಷ ಶಿವಶಂಕರ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಷಡಕ್ಷರಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಪಿ. ಗುರುಮಾದಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜು, ಲಯನ್ಸ್ ಸಂಸ್ಥೆ ಅಧ್ಯಕ್ಷ ಚಂದ್ರೇಗೌಡ ಸೇರಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts