More

    ಗುರು-ಶಿಷ್ಯ ಸಂಬಂಧ ಪವಿತ್ರ

    ಔರಾದ್: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಗಾದೆಯಂತೆ ಸಮಾಜದಲ್ಲಿ ಗುರು-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

    ಸಂತಪುರದ ಸುಭಾಷಚಂದ್ರ ಬೋಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಮತ್ತು ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗುರು ಯಾವಾಗಲೂ ಶಿಷ್ಯನ ಏಳಿಗೆ ಬಯಸುತ್ತಾನೆ. ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ಗುರುಗಳ ಸೇವೆಗೆ ಹಳೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ಗುರು ಕಾಣಿಕೆ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕೊಂಡಾಡಿದರು.

    ಆಧುನಿಕ ಯುಗದಲ್ಲಿ ಈ ಶಾಲೆ ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ಸನ್ಮಾನಿಸಿರುವುದು ಗುರು-ಶಿಷ್ಯ ಪರಂಪರೆ ಎಷ್ಟು ಮಹತ್ವದ್ದು ಎಂದು ತಿಳಿಯುತ್ತದೆ. ದೇಶದಲ್ಲಿ ಅಕ್ಷರ ಕಲಿಸಿದ ಗುರುಗಳಿಗೆ ವಿಶೇಷ ಸ್ಥಾನಮಾನವಿದೆ. ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಮಿಗಿಲಾದದ್ದು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

    ಮುಖ್ಯಗುರು ಮನೋಹರ ಬಿರಾದಾರ, ಪ್ರಮುಖರಾದ ಬಸವರಾಜ ಸ್ವಾಮಿ, ಝಾಪಾ ಮಹಾರಾಜ, ಶಿವಾಜಿರಾವ ಬೋರಾಳೆ, ಖಾಜಾ ಖಲೀಲುಲ್ಲಾ, ಮಲ್ಲಿಕಾರ್ಜುನ ಹಿಪ್ಪಳಗಾಂವ, ಶಿವರಾಜ ಜುಲಂಡೆ, ಗುರುನಾಥ ದೇಶಮುಖ, ಜಗನ್ನಾಥ ಧುಮ್ಮನಸೂರೆ, ಖಾಜಾ ಮೈನೋದ್ದಿನ್, ಶಾಲಿವಾನ್ ಪನ್ನಾಳೆ, ಮಾರುತಿ ಉತ್ತಮ, ಬಸಯ್ಯ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ, ಜಾರ್ಜ್, ನಾಗಯ್ಯ ಸ್ವಾಮಿ, ಅಶೋಕ ಶೆಂಬೆಳ್ಳಿ, ಡಾ.ನಾಗೇಶ, ನಂದಾದೀಪ, ಸಂತೋಷ ಪಾಟೀಲ್, ಮೋಹನ, ಪ್ರಿಯಾಂಕಾ, ಪೂಜಾ, ಕಲ್ಲಪ್ಪ ತಾಳಘಾಟೆ, ಶಿವು ಕೋಟೆ, ರಾಮಶೆಟ್ಟಿ ಕೆಂಚಾ, ಮಂಜು ಸ್ವಾಮಿ, ಶಿವಾನಂದ ಸ್ವಾಮಿ, ದೇವರಾಜ, ಧನರಾಜ ಬಿರಾದಾರ ಇತರರಿದ್ದರು. ರತಿಕಾಂತ ಮೇತ್ರೆ ಸ್ವಾಗತಿಸಿದರು. ನಾಗೇಶ ಸ್ವಾಮಿ ವಂದಿಸಿದರು. ಗಫಾರ್ ಖಾನ್ ನಿರೂಪಣೆ ಮಾಡಿದರು.

    ಸಾರೋಟಿನಲ್ಲಿ ಭವ್ಯ ಮೆರವಣಿಗೆ: ೪೦ ವರ್ಷದ ನಂತರ ಗುರು-ಶಿಷ್ಯರ ಸಮ್ಮಿಲನ ವಿಶೇಷವೆನಿಸಿತು. ದೇಶದ ವಿವಿಧ ಮೂಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ೩೦೦೦ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಾಗೇಶ ಸ್ವಾಮಿ ರಚಿಸಿದ ಗುರುವಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು. ಬೆಳಗ್ಗೆ ೯ಕ್ಕೆ ಪ್ರೌಢಶಾಲೆಯಿಂದ ಗ್ರಾಮದ ಪ್ರಮುಖ ವೃತ್ತಗಳಲ್ಲಿ ಸಾರೋಟಿನಲ್ಲಿ ಗುರುಗಳ ಭವ್ಯ ಮೆರವಣಿಗೆ ನಡೆಯಿತು. ಮಕ್ಕಳ ಕೋಲಾಟ, ಡಿಜೆ ಡಾನ್ಸ್ ಮೆರವಣಿಗೆಗೆ ಮೆರುಗು ನೀಡಿತು. ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೀದರ್‌ನ ರಾಣಿ ಸತ್ಯಮೂರ್ತಿ ನಾಟ್ಯ ಕಲಾ ತಂಡದ ನೃತ್ಯ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಹುಗ್ಗಿ, ಅನ್ನ-ಸಾಂಬಾರ, ಚಪಾತಿ, ಮಿರ್ಚಿ ಭಜ್ಜಿ, ಮಜ್ಜಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts