More

    ಭಗವಂತನ ಚಿಂತನೆಯೇ ಜೀವನದ ಉದ್ದೇಶ

    ಕಮಲನಗರ: ಮನುಷ್ಯನಾಗಿ ಹುಟ್ಟಿದ ಮೇಲೆ ಭಗವಂತನ ಚಿಂತನೆಯೇ ನಮ್ಮ ಜೀವನದ ಉದ್ದೇಶವಾಗಿದೆ ಎಂದು ಖಟಕಚಿಂಚೋಳಿಯ ಹುಗ್ಗೆಳ್ಳಿ ಹಿರೇಮಠದ ಸದ್ಗುರು ಶ್ರೀ ಬಸವಲಿಂಗ ದೇವರು ಅಭಿಪ್ರಾಯಪಟ್ಟರು.

    ಹೊರಂಡಿ ಗ್ರಾಮದ ಮಹಾದೇವ ಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ೩ನೇ ವರ್ಷದ ಅಖಂಡ ಶಿವನಾಮ ಸಪ್ತಾಹ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಂದ್ರನಲ್ಲಿ ತಂಪಾದ ನೀರು, ಸೂರ್ಯನಲ್ಲಿ ಉರಿಯುವ ಬೆಂಕಿ ಇದ್ದ ಹಾಗೆ ಭಕ್ತರ ಹೃದಯದಲ್ಲಿಯೇ ಭಗವಂತನಿದ್ದಾನೆ. ಸದಾಕಾಲ ಆ ಭಗವಂತನ ಚಿಂತನೆಯಲ್ಲಿ ಜೀವನ ಸವಿಸಬೇಕು. ಅಂದಾಗ ಮಾತ್ರ ಮಾನವ ಜೀವನ ಸಾರ್ಥಕವಾಗುವುದು ಎಂದು ಹೇಳಿದರು.

    ಸತಿ-ಪತಿಗಳು ಒಂದಾದ ಭಕ್ತಿ ಹಿತವಪ್ಪುವುದು ಶಿವಂಗೆ ಅನ್ನುವ ಹಾಗೆ, ಕಾಲಾನುಕಾಲಗಳಿಂದಲೂ, ದೇವಾನು ದೇವತೆಗಳೂ ಒಂದಾಗಿ ಕಾರ್ಯಮಾಡುತ್ತಾರೆ. ಬ್ರಹ್ಮನ ನಾಲಿಗೆಯಲ್ಲಿ ಸರಸ್ವತಿ, ವಿಷ್ಣುವಿನ ಹೃದಯಲ್ಲಿ ಲಕ್ಷ್ಮೀ ಇದ್ದರೆ, ಶಿವನ ಅರ್ಧಾಂಗಿ ಪಾರ್ವತಿಯಾಗಿದ್ದಾಳೆ. ಹೀಗಾಗಿ ಗಂಡ, ಹೆಂಡತಿ ಇಬ್ಬರೂ ಕೂಡಿ ಮಾಡುವ ಭಕ್ತಿಗೆ ಫಲವಿದೆ. ಸದಾಕಾಲ ಆ ಭಗವಂತನ ನಾಮಸ್ಮರಣೆ ಮಾಡುತ್ತಾ ಜೀವನ ಸವಿಸಬೇಕು ಎಂದು ಹೇಳಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾತ್ಮ ಗಾಂಧಿ ಪ್ರೌಢಶಾಲೆ ಕಲವಾಡಿಯ ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ, ೮೪ ಲಕ್ಷ ಜೀವರಾಶಿಗಳಲ್ಲಿ, ಮನುಷ್ಯ ಜೀವನ ಶ್ರೇಷ್ಠವಾಗಿದೆ. ಮನಸ್ಸು, ಬುದ್ದಿ, ಅಹಂಕಾರ, ಚಿತ್ತ ಸೇರಿ ಎಲ್ಲವನ್ನೂ ಅರಿಯಬಲ್ಲ ಜೀವವೇ ಮನುಷ್ಯ ಜೀವನವಾಗಿದೆ. ಹೀಗಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ತನ್ನ ತಾನರಿಯುವ ಕಾರ್ಯ ಮಾಡಬೇಕು. ಅದಕ್ಕಾಗಿ ಸದ್ಗುರುಗಳ ಮೊರೆ ಹೋಗಬೇಕು. ಶಿವನಾಮ ಸಪ್ತಾಹ ನಿಮಿತ್ತ ಗ್ರಾಮಸ್ಥರು ಪ್ರತಿವರ್ಷ ಗುರುಗಳನ್ನು ಕರೆಸಿ ಮಾಡುತ್ತಿರುವ ಕಾರ್ಯ ಪವಿತ್ರ ಕಾರ್ಯವಾಗಿದೆ ಎಂದು ಹೇಳಿದರು.

    ಪತ್ರಕರ್ತ ರಾಜೇಶ ಮುಗಟೆ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಸಂಗಶೆಟ್ಟಿ ಬಿರಾದಾರ, ಎಂಜಿಎಸ್‌ಎಸ್‌ಕೆ ನಿರ್ದೇಶಕ ಬಾಬುರಾವ ಪಾಟೀಲ್, ಪ್ರಮುಖರಾದ ಶಿವಕುಮಾರ ಪಾಟೀಲ್, ಸಚಿನ ಜಲಸಿಂಗೆ, ಸಂತೋಷ ಬಿರಾದಾರ, ಶ್ರೀಧರ ಪಾಟೀಲ್, ಶಾಲಿವಾನ ಬಿರಾದಾರ, ಸುಬಾಷ ಸಿದ್ದೇಶ್ವರೆ, ಸನೀತ ಪಾಟೀಲ್, ಪ್ರದೀಪ ಪಾಟೀಲ್ ಇತರರಿದ್ದರು. ಶಿವಕುಮಾರ ಪಾಟೀಲ್ ಸ್ವಾಗತಿಸಿದರು. ಶರದ ಕೊಂಡೆ ನಿರೂಪಣೆ ಮಾಡಿದರು. ಪ್ರಜ್ವಲ್ ಮುಗಟೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts