More

    ಕತ್ತಲಲ್ಲಿದೆ ಗುರುಪುರ ನಾಡ ಕಚೇರಿ, ವಿದ್ಯುತ್ ಇಲ್ಲದಿದ್ದರೆ ಕೆಲಸ ನಡೆಯದು

    ಭರತ್ ಶೆಟ್ಟಿಗಾರ್ ಮಂಗಳೂರು

    ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ವಿವಿಧ ಸೇವೆಗಳು ಒಂದೇ ಸ್ಥಳದಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ನಾಡ ಕಚೇರಿ ಅಥವಾ ಅಟಲ್‌ಜೀ ಜನಸ್ನೇಹಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅದರಂತೆ ಗುರುಪುರ ಹೋಬಳಿಯ ಕೈಕಂಬದಲ್ಲಿ ನಾಡ ಕಚೇರಿ ಇದೆ. ಆದರೆ ಇಲ್ಲಿ ವಿದ್ಯುತ್ ಕೈಕೊಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲದೆ ಜನ ಕಷ್ಟ ಅನುಭವಿಸುವಂತಾಗಿದೆ.

    ಕೆಲವು ತಿಂಗಳ ಹಿಂದೆ ಇಲ್ಲಿನ ಯುಪಿಎಸ್ ಹಾಳಾಗಿದ್ದು, ದುರಸ್ತಿಯಾಗಿಲ್ಲ. ಇದರಿಂದ ವಿದ್ಯುತ್ ಇಲ್ಲದಾಗ ಕಚೇರಿಗೆ ಬರುವ ಜನ ವಿದ್ಯುತ್ ಬರುವ ತನಕ ಕಾಯಬೇಕು ಇಲ್ಲವೇ ಬೇರೆ ದಿನ ಬರಬೇಕು. ಕೆಲವೊಮ್ಮೆ ಅರ್ಜಿಗೆ ಸಂಬಂಧಿಸಿದ ಕೆಲಸ ಮಾಡುತ್ತಿರುವಾಗಲೇ ವಿದ್ಯುತ್ ಕೈಕೊಡುತ್ತದೆ. ಲಾಕ್‌ಡೌನ್‌ನಿಂದ ನಾಡ ಕಚೇರಿಗೆ ಬರುವ ಜನರ ಸಂಖ್ಯೆ ಕಡಿಮೆ ಇದ್ದುದರಿಂದ ದೊಡ್ಡ ಮಟ್ಟಿನ ಸಮಸ್ಯೆ ಕಾಣಬರಲಿಲ್ಲ. ಪ್ರಸ್ತುತ ಹೆಚ್ಚು ಜನ ಬರುತ್ತಿರುವುದರಿಂದ ಸಮಸ್ಯೆಯಾಗಿದೆ.

    ಗುರುಪುರ ನಾಡ ಕಚೇರಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಿದ್ದು, 15-20 ಕಿ.ಮೀ ದೂರದಿಂದ ಇಲ್ಲಿಗೆ ಜನ ಬರುತ್ತಾರೆ. ಕೆಲಸಕ್ಕೆ ರಜೆ ಹಾಕಿ ಬರುವಾಗ ವಿದ್ಯುತ್ ಕೈಕೊಟ್ಟು, ಪರ್ಯಾಯ ವ್ಯವಸ್ಥೆಯೂ ಇಲ್ಲದೆ ಸಮಸ್ಯೆಯಾಗುತ್ತಿದೆ. ಎರಡೆರಡು ಸಲ ಬಂದು ಹೋಗಬೇಕಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

    13 ಸಾವಿರ ರೂ. ಪಾವತಿ ಬಾಕಿ: ಯುಪಿಎಸ್ ಈ ಹಿಂದೆಯೂ ಹಲವು ಬಾರಿ ಹಾಳಾಗಿದ್ದು, ಸರಿಪಡಿಸಲಾಗಿದೆ. ಹಿಂದಿನ ದುರಸ್ತಿಗೆ ಸಂಬಂಧಿಸಿ ಸುಮಾರು 13 ಸಾವಿರ ರೂ. ಬಿಲ್ ಪಾವತಿಗೆ ಬಾಕಿ ಇದೆ. ಅದನ್ನು ಪಾವತಿಸದ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಬ್ಬಂದಿ ದುರಸ್ತಿಗೆ ಬರುತ್ತಿಲ್ಲ. ತಾಲೂಕು ಕಚೇರಿಗೆ ಬಿಲ್ ಕಳುಹಿಸಿದ್ದು, ಅಲ್ಲಿಂದ ಪಾವತಿಯಾಗಿಲ್ಲ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಬೀರಿದೆ.

    ಸಿಬ್ಬಂದಿಗೂ ಒತ್ತಡ: ಯಾವಾಗ ವಿದ್ಯುತ್ ಅಸ್ತವ್ಯಸ್ತವಾಗುತ್ತದೋ ತಿಳಿಯುವುದಿಲ್ಲ. ಕೆಲವೊಮ್ಮೆ ದುರಸ್ತಿ ಕಾರಣಕ್ಕೆ ಬೆಳಗ್ಗೆ ಪವರ್ ಕಟ್ ಮಾಡಿದರೆ ಮತ್ತೆ ಸಾಯಂಕಾಲವೇ ಬರುವುದು. ನಾಡ ಕಚೇರಿಗೆ ದಿನಕ್ಕೆ ನೂರಾರು ಜನ ಬರುತ್ತಿರುತ್ತಾರೆ. ಕೆಲವರು ಅರ್ಜಿ ಕೊಟ್ಟು ಹೋಗುವುದರಿಂದ, ಆ ದಿನದ ಕೆಲಸದ ಜತೆಗೆ ಮರುದಿನ ಬರುವ ಅರ್ಜಿಗಳ ವಿಲೇವಾರಿಗೆ ಒತ್ತಡ ಹೆಚ್ಚುತ್ತದೆ. ಇದರಿಂದ ಆಯಾ ದಿನದ ಕೆಲಸ ಆಯಾ ದಿನವೇ ಮುಗಿಸುವುದು ಉತ್ತಮ ಎನ್ನುತ್ತಾರೆ ಸಿಬ್ಬಂದಿ.

    ನಾಡ ಕಚೇರಿಗಳಲ್ಲಿ ವಿದ್ಯುತ್‌ಗೆ ಪರ್ಯಾಯವಾಗಿ ಸೋಲಾರ್, ಯುಪಿಎಸ್‌ಗಳನ್ನು ಅಳವಡಿಸಲಾಗಿದೆ. ಗುರುಪುರ ನಾಡ ಕಚೇರಿಯಲ್ಲೂ ಯುಪಿಎಸ್ ವ್ಯವಸ್ಥೆ ಮಾಡಲಾಗಿದೆ. ಕೆಟ್ಟು ಹೋಗಿರುವ ಕುರಿತು ಮಾಹಿತಿಯಿಲ್ಲ. ಯಾವ ಕಾರಣಕ್ಕೆ ದುರಸ್ತಿ ಮಾಡಿಸಿಲ್ಲ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

    ಗುರುಪ್ರಸಾದ್
    ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts