More

    ಕರೊನಾ ವೈರಸ್‌ ತೊಲಗಲು ಕಾಳಿ ಆರಾಧಕ ಮಾಡಿದನೊಂದು ಬೆಚ್ಚಿ ಬೀಳುವ ಕೃತ್ಯ!

    ಪಾಲನ್‌ಪುರ (ಗುಜರಾತ್‌) : ಕರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಸರ್ಕಾರ ಏನೆಲ್ಲಾ ಕಸರತ್ತು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಏನು ಮಾಡಿದರೂ ಈ ವೈರಸ್‌ ಹಲವು ಪ್ರದೇಶಗಳಲ್ಲಿ ಶರವೇಗದಿಂದ ಹರಡುತ್ತಲೇ ಇದೆ.

    ಯಾವುದೇ ತೊಂದರೆ ಬಂದಾಗ, ಬೇರೆ ದಾರಿ ಕಾಣದೇ ದೇವರಲ್ಲಿ ಮೊರೆ ಹೋಗುವ ವಿಷಯ ಹೊಸತೇನಲ್ಲ. ಹಾಗೆನೇ ಕರೊನಾ ವೈರಸ್‌ ಆದಷ್ಟು ಬೇಗ ತೊಲಗಿ ಹೋಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿರುವವರೂ ಹಲವರಿದ್ದಾರೆ. ಹಾಗೆಂದು ಈ ಪೀಡೆಯನ್ನು ನಿರ್ಮೂಲನ ಮಾಡಲು ತನ್ನ ನಾಲಗೆಯನ್ನೇ ಕತ್ತರಿಸಿಕೊಂಡರೆ?

    ಹೌದು. ಇಂಥದ್ದೊಂದು ಬೆಚ್ಚಿಬೀಳುವ ಕೆಲಸ ಮಾಡಿದ್ದಾನೆ ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ನಾದೇಶ್ವರಿಯ ವಿವೇಕ್‌ ಶರ್ಮ. ಕಾಳಿ ದೇವಿ ಆರಾಧಕನಾಗಿರುವ ವಿವೇಕ್‌, ಕರೊನಾ ವೈರಸನ್ನು ಆದಷ್ಟು ಬೇಗ ಈ ಭೂಮಿ ಬಿಟ್ಟು ಓಡಿಸು ಎಂದು ದೇವಿಯಲ್ಲಿ ಹರಕೆ ಹೊತ್ತುಕೊಂಡಿದ್ದಾನೆ. ಅದಕ್ಕಾಗಿ ತನ್ನ ನಾಲಗೆಯನ್ನೇ ದೇವಿಗೆ ಬಲಿ ಕೊಟ್ಟಿದ್ದಾನೆ!

    ಭಾರತ- ಪಾಕಿಸ್ತಾನದ ಗಡಿಗೆ ಕೇವಲ 18 ಕಿ.ಮಿ ದೂರದಲ್ಲಿದೆ ಈ ಗ್ರಾಮ. ಇಲ್ಲಿಗೆ ಮಧ್ಯಪ್ರದೇಶದಿಂದ ಕೆತ್ತನೆ ಕೆಲಸಕ್ಕಾಗಿ ಬಂದಿದ್ದ ದೇವಿ ಭಕ್ತ ವಿವೇಕ್‌. ಭವಾನಿ ದೇವಾಲಯದಲ್ಲಿ ಸದ್ಯ ಕೆತ್ತನೆ ಕೆಲಸದಲ್ಲಿ ಈತ ತೊಡಗಿಕೊಂಡಿದ್ದ.

    ಈತನ ಸಹೋದರ ಫೋನ್‌ ಕರೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ‘ಬೆಳಗ್ಗೆ ಮಾರುಕಟ್ಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ. ವಾಪಸ್‌ ಬರದಾಗ ಫೋನ್‌ ಕರೆ ಮಾಡಿದೆ. ಆದರೆ ಫೋನ್‌ ಅನ್ನು ಬೇರೆ ಯಾರೋ ರಿಸೀವ್‌ ಮಾಡಿದ್ದರು. ಪ್ರಜ್ಞಾಹೀನನಾಗಿ ಅಣ್ಣ ಬಿದ್ದಿರುವ ಬಗ್ಗೆ ಆ ವ್ಯಕ್ತಿ ತಿಳಿಸಿದಾಗ ಸ್ಥಳಕ್ಕೆ ಧಾವಿಸಿದೆ. ಆಗ ವಿಷಯ ತಿಳಿಯಿತು’ ಎಂದು ಸಹೋದರ ಹೇಳಿದ್ದಾನೆ.

    ಈತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ನಾಲಗೆಯನ್ನು ಪುನರ್‌ ಜೋಡಿಸುವ ಸಾಧ್ಯತೆಗಳ ಬಗ್ಗೆ ವೈದ್ಯರು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts