

ಅಹಮದಾಬಾದ್: ಅತಿವೇಗದಲ್ಲಿದ್ದ ಜಾಗ್ವಾರ್ ಕಾರೊಂದು ನಿಯಂತ್ರಣ ಕಳೆದುಕೊಂಡು ಜನರತ್ತ ನುಗಿದ್ದ ಪರಿಣಾಮ ಸ್ಥಳದಲ್ಲೇ 9 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಗುಜರಾತಿನ ಅಹಮದಾಬಾದ್-ಎಸ್ಜಿ ಹೆದ್ದಾರಿಯಲ್ಲಿ ನಡೆದಿದೆ.
ಎಸ್ಜಿ ಹೆದ್ದಾರಿಯ ಇಸ್ಕಾನ್ ಸೇತುವೆ ಮೇಲೆ ದುರ್ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ 1.15ರ ಸುಮಾರಿಗೆ ಟ್ರಕ್ ಮತ್ತು ಎಸ್ಯುವಿ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಇದನ್ನು ನೋಡಲು ಕೆಲ ಜನರು ಅಲ್ಲಿ ಸೇರಿದ್ದರು. ಈ ವೇಳೆ ವೇಗವಾಗಿ ಬಂದು ಐಷಾರಾಮಿ ಜಾಗ್ವರ್ ಕಾರು ಜನರತ್ತ ನುಗ್ಗಿದ್ದರಿಂದ ಓರ್ವ ಪೊಲೀಸ್ ಸಿಬ್ಬಂದಿ ಸೇರಿ 9 ಮಂದಿ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ 13 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಗ್ವರ್ ಡಿಕ್ಕಿಯ ರಭಸಕ್ಕೆ ಅನೇಕ ಮಂದಿ ಸುಮಾರು 20 ರಿಂದ 25 ಅಡಿಗಳಷ್ಟು ದೂರ ಹಾರಿ ನೆಲಕ್ಕೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಾಗ್ವಾರ್ ಕಾರು ಗಂಟೆಗೆ 120 ಕಿ.ಮೀ. ವೇಗದಲ್ಲಿತ್ತು. ಜಾಗ್ವಾರ್ ಕಾರು ಚಾಲಕನಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯ ಬೆನ್ನಲ್ಲೇ ಟ್ರಕ್ ಚಾಲಕನು ಕೂಡ ಎಸ್ಕೇಪ್ ಆಗಿದ್ದಾನೆ. (ಏಜೆನ್ಸೀಸ್)