More

    ಕುಶಾಲುತೋಪು ತಾಲೀಮಿಗೆ ಗಜಪಡೆ ಅಣಿ

    ಮರದ ಅಂಬಾರಿ ಹೊರುವ ತಾಲೀಮು ಶುರು


    ಅವಿನಾಶ್ ಜೈನಹಳ್ಳಿ ಮೈಸೂರು
    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವ ಗಜಪಡೆ ಮರದ ಅಂಬಾರಿ ಹೊರುವ ತಾಲೀಮಿನ ಜತೆಗೆ, ಮೂರು ಹಂತದ ಕುಶಾಲುತೋಪಿನ ತಾಲೀಮಿಗೂ ಅಣಿಯಾಗಿವೆ.
    ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಮರದ ಅಂಬಾರಿ ಹೊರಿಸುವ ತಾಲೀಮನ್ನು ಸೆ.5 ರಿಂದ ಆರಂಭಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ‘ಅಭಿಮನ್ಯು’ ನೇತೃತ್ವದ ಗಜಪಡೆ ಮುಂದಿನ ವಾರದಿಂದ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಿದೆ. ಮೊದಲ ದಿನ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿದಂತೆ 750ಕ್ಕೂ ಹೆಚ್ಚು ಕೆ.ಜಿ. ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಲಿದ್ದಾನೆ. ಬಳಿಕ ಗೋಪಾಲಸ್ವಾಮಿ, ಧನಂಜಯ, ಭೀಮ ಹಾಗೂ ಮಹೇಂದ್ರ ಆನೆಗಳು ಕೂಡ ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸಲಿವೆ.

    ಇಂದಿನಿಂದ ಮೂರನೇ ಸುತ್ತು:
    ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಗಜಪಡೆ ಎರಡು ಸುತ್ತಿನ ಭಾರ ಹೊರುವ ತಾಲೀಮು ಪೂರ್ಣಗೊಳಿಸಲಿದ್ದು, ಸೋಮವಾರದಿಂದ 3ನೇ ಸುತ್ತಿನ ತಾಲೀಮು ನಡೆಸಲಿವೆ.
    ಆ. 10ರಂದು ಅರಮನೆ ಪ್ರವೇಶಿಸಿದ ಗಜಪಡೆ ಆ.14ರಿಂದ ಮೊದಲ ಮತ್ತು ಎರಡನೇ ಹಂತದ (350ರಿಂದ 550 ಕೆ.ಜಿ.) ಭಾರ ಹೊರುವ ತಾಲೀಮನ್ನು ಯಶಸ್ವಿಯಾಗಿ ನಡೆಸಿದ್ದವು. ಇದೇ ಮೊದಲ ಬಾರಿಗೆ ದಸರೆಗೆ ಆಗಮಿಸಿರುವ ಮಹೇಂದ್ರ ಹಾಗೂ 2ನೇ ಬಾರಿಗೆ ಆಗಮಿಸಿರುವ ಭೀಮ ಯಾವುದೇ ಅಂಜಿಕೆ ಇಲ್ಲದೆ ನಿರ್ಭೀತಿಯಿಂದ ತಾಲೀಮಿನಲ್ಲಿ ಭಾಗವಹಿಸಿ ಭಾರ ಹೊತ್ತು ಹೆಜ್ಜೆ ಹಾಕಿದ್ದವು.
    2ನೇ ಹಂತದ ತಾಲೀಮು ಭಾನುವಾರ ಮುಕ್ತಾಯವಾಗಿದ್ದು, ಕೊನೆಯ ದಿನ ಭೀಮ 550 ಕೆ.ಜಿ. ಭಾರ ಹೊತ್ತು ಯಶಸ್ವಿಯಾಗುವ ಮೂಲಕ ನಾನೂ ‘ಭವಿಷ್ಯದ ಅಂಬಾರಿ ಆನೆ’ ಎಂಬ ಭರವಸೆ ಮೂಡಿಸಿದ.

    ಸೋಮವಾರದಿಂದ ಅಂಬಾರಿ ಆನೆ ಅಭಿಮನ್ಯು 750 ಕೆ.ಜಿ. ತೂಕದ ಮರಳು ಮೂಟೆ, 250 ಕೆಜಿ ತೂಕದ ಗಾದಿ ಮತ್ತು ನಮ್ದಾ ಸೇರಿ ಒಂದು ಸಾವಿರ ಕೆ.ಜಿ. ಭಾರ ಹೊತ್ತು ತಾಲೀಮು ನಡೆಸಲಿದ್ದಾನೆ. ಅಭಿಮನ್ಯು ಬಳಿಕ ಗೋಪಾಲಸ್ವಾಮಿ, ಧನಂಜಯ ಆನೆಗಳಿಗೂ ಸಾವಿರ ಕೆ.ಜಿ. ಭಾರ ಹೊರುವ ತಾಲೀಮು ನಡೆಯಲಿದೆ. ಇದರ ಜತೆಗೆ, ಕಿರಿಯ ಆನೆಗಳಾದ ಭೀಮ ಮತ್ತು ಮಹೇಂದ್ರಗೆ 1 ಸಾವಿರ ಕೆ.ಜಿ. ಬದಲು 750 ಕೆ.ಜಿ. ಭಾರ ಹೊರಿಸಿ ತಾಲೀಮು ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ. ಪ್ರತಿ ಬಾರಿಯಂತೆ ಗಜಪಡೆಯ ಮುಂದೆ ಮೂರು ಹಂತದಲ್ಲಿ ಕುಶಾಲುತೋಪಿನ ತಾಲೀಮು ನಡೆಸಲಾಗುತ್ತದೆ. ಸೆಪ್ಟೆಂಬರ್ ಮೊದಲ ವಾರ ಮೊದಲ ಹಂತದ ಕುಶಾಲುತೋಪು ತಾಲೀಮು ನಡೆಯಲಿದೆ. 6 ಫಿರಂಗಿಗಳಿಂದ ತಲಾ 3 ಸುತ್ತಿನಂತೆ ಒಟ್ಟು 18 ಸುತ್ತು ಕುಶಾಲುತೋಪು ಸಿಡಿಸಲಾಗುತ್ತದೆ. ಮೊದಲ ಹಂತದಲ್ಲಿ ಬೆದರದೆ ಇರಲಿ ಎಂಬ ಕಾರಣಕ್ಕೆ ಕೆಲ ಆನೆಗಳ ಕಾಲುಗಳನ್ನು ಸರಪಳಿಯಿಂದ ಕಟ್ಟಲಾಗುತ್ತದೆ.

    ಸೆಪ್ಟೆಂಬರ್ ಮೊದಲ ವಾರದಿಂದ ದಸರಾ ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮಿನ ಜತೆಗೆ ಕುಶಾಲುತೋಪಿನ ತಾಲೀಮು ಆರಂಭಿಸಲಾಗುತ್ತದೆ. ಮೂರು ಹಂತದಲ್ಲಿ ಕುಶಾಲತೋಪು ತಾಲೀಮು ನಡೆಯಲಿದೆ. ಸೋಮವಾರದಿಂದ 3ನೇ ಹಂತದ ಭಾರ ಹೊರುವ ತಾಲೀಮು ಆರಂಭವಾಗಲಿದೆ.
    ಡಾ.ವಿ.ಕರಿಕಾಳನ್, ಡಿಸಿಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts