More

    ಬರಗಾಲದಲ್ಲಿ ವರವಾದ ಗ್ಯಾರಂಟಿಗಳು

    ಕಡೂರು: ಆರ್ಥಿಕವಾಗಿ ಸಬಲತೆಯನ್ನು ಸಾಧಿಸುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

    ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಸಿಂಗಟಗೆರೆ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಸಭೆಯಲ್ಲಿ ಯೋಜನೆಗಳಿಂದ ತಾಂತ್ರಿಕವಾಗಿ ವಂಚಿತರಾಗಿರುವ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಸಲಾಗಿದೆ. ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ಗ್ರಾಮಗಳ ಹಲವು ಜ್ವಲಂತ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಸಕಾರತ್ಮಾಕವಾಗಿ ಸ್ಪಂದಿಸಿ ಉತ್ತರ ದೊರಕಿಸಿಕೊಡಲು ಸಾಧ್ಯವಾಗಿದೆ. ಬರಪೀಡಿತ ಪ್ರದೇಶವಾದ ತಾಲೂಕಿಗೆ ಗ್ಯಾರಂಟಿ ಯೋಜನೆಗಳು ವರದಾನವಾಗಿ ಬಡಕುಟುಂಬಗಳಿಗೆ ಆಸರೆಯಾಗಿವೆ ಎಂದರು.
    ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಗೊಳಿಸುವ ಮೂಲಕ ರಾಜ್ಯ ಸರ್ಕಾರ ಬಡವರ ಪರವಾದ ಸರ್ಕಾರ ಎಂದು ರಾಜ್ಯದ ಜನತೆಗೆ ನಿರೂಪಿಸಿದೆ. ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸುಮಾರು 50,000 ರೂ. ಹಣವನ್ನು ನೀಡುವ ಮೂಲಕ ಆರ್ಥಿಕ ಸಬಲತೆಗೆ ಪ್ರೋತ್ಸಾಹ ನೀಡುತ್ತಿದೆ. ಬಡಕುಟುಂಬಗಳ ಜೀವನ ನಿರ್ವಹಣೆಗೆ ಹೆಚ್ಚಿನ ಸಹಕಾರಿಯಾಗುತ್ತಿರುವುದು ಫಲಾನುಭವಿಗಳ ಅಭಿಪ್ರಾಯಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.
    ಗ್ಯಾರಂಟಿ ಯೋಜನೆಗಳು ಎಂಪಿ ಚುನಾವಣೆ ಮುಗಿದ ಬಳಿಕ ರದ್ದುಪಡಿಸಲಾಗುತ್ತದೆ ಎಂದು ಬೊಬ್ಬೆ ಹೊಡೆದುಕೊಳ್ಳುವ ವಿರೋಧ ಪಕ್ಷಗಳ ಅಪ್ರಚಾರಗಳಿಗೆ ಜನತೆ ಕಿವಿಗೊಡಬೇಡಿ. ಬಡವರ ಪಾಲಿನ ಮಹತ್ವಕಾಂಕ್ಷಿಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಸರ್ಕಾರ ಬಂದರೂ ಯಾರಿಂದಲ್ಲೂ ರದ್ದುಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಕಾಳಜಿಯ ಹಿತದೃಷ್ಟಿಯಿಂದ ಆರ್ಥಿಕ ಪುನಶ್ಚೇತನ ಕಂಡುಕೊಳ್ಳಲು ಶ್ರಮಿಕ ಜೀವಿಗಳಿಗೆ ಹೆಚ್ಚು ಫಲಪ್ರದವಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
    ಬಹುಬೇಡಿಕೆಯಾಗಿರುವ ಸಿಂಗಟಗೆರೆ ಭಾಗದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ಸ್ಥಾಪನೆಗೆ ಈಗಾಗಲೇ ಸಾರಿಗೆ ಸಚಿವರ ಬಳಿ ಚರ್ಚಿಸಲಾಗಿದೆ. ಕೂಡಲೇ ಶಂಕುಸ್ಥಾಪನೆ ಕಾರ್ಯಗಳು ನೇರವೇರಿಸಲಾಗುತ್ತದೆ. ಗ್ರಾಮದಲ್ಲಿ ರಂಗಮಂದಿರ ನಿರ್ಮಾಣಕ್ಕೆ 15 ಲಕ್ಷ ರೂ. ಅನುದಾನವನ್ನು ಮತ್ತು ವಿವಿಧ ದೇವಾಲಯಗಳ ಅಭಿವೃದ್ಧಿ ಅನುದಾನವನ್ನು ಒದಗಿಸಿಕೊಡಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ನಾನು ಸಹ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿಸಿಕೊಡುತ್ತಿದ್ದೇನೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹಾದಿಬೀದಿಯಲ್ಲಿ ಟೀಕೆಗಳು ಮಾಡುವ ಮನಸ್ಥಿತಿಗಳು ಕ್ಷೇತ್ರದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಅಂಕಿ-ಅಂಶಗಳ ಲೆಕ್ಕದ ಮಾಹಿತಿಯನ್ನು ತಿಳಿದುಕೊಳ್ಳಲಿ ಎಂದು ತೀರುಗೇಟು ನೀಡಿದರು.
    ತಹಸೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿ, ಹೋಬಳಿ ಮಟ್ಟದಲ್ಲಿರುವ ಫಲಾನುಭವಿಗಳು ಯೋಜನೆಯಲ್ಲಿ ಸವಲತ್ತುಗಳನ್ನು ಪಡೆಯಲು ವಂಚಿತರಾದ ಜನರಿಗೆ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕು ಮಟ್ಟದ ಅಧಿಕಾರಿಗಳು ಒಂದೆಡೆ ಸೇರಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ. ಬರಪೀಡಿತ ಪ್ರದೇಶವಾಗಿರುವ ತಾಲೂಕಿನಲ್ಲಿ ಅನಗತ್ಯವಾಗಿ ನೀರು ಪೋಲಾಗದಂತೆ ಮುಂಜಾಗೃತ ಕ್ರಮಗಳನ್ನು ವಹಿಸಬೇಕಿದೆ. ಈಗಾಗಲೇ ಸ್ಥಳೀಯ ಗ್ರಾಪಂ ಮಟ್ಟದಲ್ಲಿ ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳ ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದರು.
    ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ ಮಾಡಲಾಯಿತು. ತಾಪಂ ಇಒ ಸಿ.ಆರ್.ಪ್ರವೀಣ್, ವಿವಿಧ ಗ್ರಾಪಂ ಅಧ್ಯಕ್ಷರಾದ ಮಧುಮಾಲಾ, ಎಂ.ಎಚ್.ಮಂಗಳಾ, ಎಸ್.ಎಂ.ರಂಗಪ್ಪ, ಲಲಿತಾಬಾಯಿ, ಎಸ್.ಸುಶೀಲಬಾಯಿ, ಸಿಂಗಟಗೆರೆ ಉಪತಹಸೀಲ್ದಾರ್ ಹೇಮಾವತಿ, ಕಂದಾಯ ನಿರೀಕ್ಷಕ ರವಿ ಇತರರಿದ್ದರು.

    ಕೊಬ್ಬರಿ ನೋಂದಣಿಗೆ ಅವಕಾಶ ಮಾಡಿಕೊಡಿ
    ಉಂಡೆ ಕೊಬ್ಬರಿ ಖರೀದಿಯ ಮರು ನೋಂದಣಿ ಪ್ರಕ್ರಿಯೆಯು ಕೇವಲ ಮೂರು ದಿನಕ್ಕೆ ಮುಕ್ತಾಯಗೊಂಡಿರುವುದು ಅರ್ಹ ರೈತರು ನೋಂದಣಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ. ರೈತರ ಹೆಸರಿನಲ್ಲಿ ವರ್ತಕರು ನೋಂದಣಿ ಮಾಡಿಸಿರುವವರನ್ನು ರದ್ದುಪಡಿಸಬೇಕಿದೆ. ತಾಲೂಕಿನಲ್ಲಿ ಅತಿಹೆಚ್ಚು ತೆಂಗು ಬೆಳೆಯುವ ಪ್ರದೇಶವಾದ ಹಿನ್ನೆಲೆಯಲ್ಲಿ ಸಾಕಷ್ಟು ಜನ ರೈತರು ನೋಂದಾಯಿಸಿಕೊಳ್ಳಬೇಕಿದ್ದು, ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿಕೊಡಬೇಕಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಎಚ್. ರವಿ, ಪದಾಧಿಕಾರಿಗಳು ಶಾಸಕ ಕೆ.ಎಸ್.ಆನಂದ್ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts