More

    ಬಸ್ ಸೌಲಭ್ಯದ ಭರವಸೆ ಹುಸಿ

    ಸಂಶಿ: ನೀ ಅತ್ತಂಗ ಮಾಡ.. ನಾ ಸತ್ತಂಗ ಮಾಡತೇನಿ..! ಹುಬ್ಬಳ್ಳಿ-ಲಕ್ಷ್ಮೇಶ್ವರ ಎರಡು ಬಸ್ ಡಿಪೋಗಳ ಹಗ್ಗ-ಜಗ್ಗಾಟದಿಂದಾಗಿ ಐದಾರು ವರ್ಷ ಕಳೆದರೂ ಸಂಶಿ ಗ್ರಾಮಸ್ಥರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಂತಾಗಿದೆ.

    ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿದ್ಯಾಭ್ಯಾಸ, ನಿತ್ಯ ತುತ್ತಿನ ಚೀಲ ತುಂಬಿಕೊಳ್ಳಲು ಕೆಲಸಕ್ಕಾಗಿ ನಿಗದಿತ ಸಮಯಕ್ಕೆ ತಲುಪುವ ಧಾವಂತದಲ್ಲಿ ಗ್ರಾಮದಿಂದ ನಿತ್ಯ ಹುಬ್ಬಳ್ಳಿಯತ್ತ ತೆರಳುವ ಬಸ್​ಗಳಿಗೆ ಜೋತು ಬಿದ್ದು ಸಂಚರಿಸುವ ಪ್ರಯಾಣ ಅನಿವಾರ್ಯವಾಗಿದೆ. ಬಸ್ ಅವ್ಯವಸ್ಥೆಯಿಂದ ನಾಲ್ಕೈದು ದಿನಕ್ಕೊಮ್ಮೆ ಸಾರ್ವಜನಿಕರು ಬಸ್ ತಡೆದು ಪ್ರತಿಭಟನೆ ಮಾಡಿದಾಗ ಎರಡ್ಮೂರು ದಿನಗಳಷ್ಟೇ ಉತ್ತಮ ಸೇವೆ ನೀಡುವ ಸಾರಿಗೆ ಇಲಾಖೆ ಬಳಿಕ ಹಳೇ ರಾಗ ಮುಂದುವರಿಸುತ್ತಿದೆ. ರೋಸಿಹೋದ ಜನರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಅವ್ಯವಸ್ಥೆ ಕುರಿತು ಸಾರಿಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿಪತ್ರ ಸಲ್ಲಿಸಿ, ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ, ಸಾಲು ಸಾಲು ಸಭೆ ನಡೆಸಿದರೂ ಹುಬ್ಬಳ್ಳಿ ವಿಭಾಗದ ಸಾರಿಗೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.

    ಅಸರ್ಮಕ ಬಸ್ ಸೌಲಭ್ಯದಿಂದಾಗಿ ರೋಸಿ ಹೋದ ಗ್ರಾಮಸ್ಥರು, ಪ್ರಯಾಣಿಕರು ಮತ್ತು ಮುಖಂಡರು ಒಮ್ಮತದ ನಿರ್ಧಾರಕ್ಕೆ ಬಂದು, ವಾರದೊಳಗೆ ಬಸ್ ಸೌಲಭ್ಯ ಕಲ್ಪಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಭರವಸೆ ಹುಸಿಯಾದ ಹಿನ್ನೆಲೆ ಕಂಗೆಟ್ಟ ಗ್ರಾಮಸ್ಥರು ಫೆ. 7ರಂದು ಹುಬ್ಬಳ್ಳಿ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಸಂಚಾರ ತಡೆದು ಪ್ರತಿಭಟನೆ ನಡೆಸಲಿದ್ದಾರೆ.

    ಸಾರಿಗೆ ಅಧ್ಯಕ್ಷರನ್ನು ಭೇಟಿ ಮಾಡಿದ್ದ ಗ್ರಾಮದ ನಿಯೋಗ: ಸ್ವಗ್ರಾಮದವರೇ ಆದ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಜಿಪಂ ಸದಸ್ಯ ಎನ್.ಎನ್. ಪಾಟೀಲ, ಫಕ್ಕಜ್ಜ ಕೋರಿ, ಪರಮೇಶಪ್ಪ ನಾಯ್ಕರ, ಬಸಲಿಂಗಪ್ಪ ಕೋರಿ ಹಾಗೂ ಇತರರ ನಿಯೋಗ 8 ದಿನಗಳ ಹಿಂದೆ ಸಾರಿಗೆ ಸಂಸ್ಥೆ ಅಧ್ಯಕ್ಷ

    ವಿ.ಎಸ್. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಗ್ರಾಮಕ್ಕೆ ಪ್ರತ್ಯೇಕ ಮೂರು ಬಸ್ ಒದಗಿಸುವಂತೆಯೂ ಕೋರಿದ್ದರು. ವಾರ ಕಳೆದರೂ ಸಾರಿಗೆ ಸಂಸ್ಥೆ ಅಧ್ಯಕ್ಷರು ನೀಡಿದ್ದ ಭರವಸೆಯೂ ಹುಸಿಯಾಗಿದೆ.

    ಶಾಸಕರ ಸೂಚನೆಗೂ ಕಿಮ್ಮತ್ತಿಲ್ಲ

    ಈ ಕುರಿತು ಶಾಸಕಿ ಕುಸುಮಾವತಿ ಸಾರಿಗೆ ಅಧಿಕಾರಿಗಳಿಗೆ ಫೋನಾಯಿಸಿ ಸಮಸ್ಯೆ ಬಗೆಹರಿಸುವಂತೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ, ಜ. 25ರಂದು ಹುಬ್ಬಳ್ಳಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಜೊತೆ ರ್ಚಚಿಸಿ, ವ್ಯವಸ್ಥಿತ ಸಾರಿಗೆ ಸೇವೆಗೆ ತಾಕೀತು ಮಾಡಿದ್ದರು. ಶಾಸಕರ ಸೂಚನೆಗೆ ತಲೆದೂಗಿದ್ದ ಸಾರಿಗೆ ಅಧಿಕಾರಿ, ಗೊತ್ತುಪಡಿಸಿದ ಅವಧಿ ಮುಗಿದರೂ ಸಮರ್ಪಕ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ದನ್ನು ನೋಡಿದರೆ ಶಾಸಕರ ಸೂಚನೆಗೂ ಕವಡೆ ಕಿಮ್ಮತ್ತಿಲ್ಲದಂತಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts