More

    ಶೇಂಗಾ ಬಿತ್ತನೆ ಪ್ರದೇಶ ವಿಸ್ತರಣೆ: ಯಲಬುರ್ಗಾ ತಾಲೂಕಿನ 8550 ಹೆಕ್ಟೇರ್‌ನಲ್ಲಿ ಬೀಜ ನಾಟಿ

    ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ

    ಸತತ ಸುರಿದ ಮಳೆಯಿಂದ ಕೆರೆ-ಕಟ್ಟೆಗಳಿಗೆ ಜೀವಕಳೆ ಹಾಗೂ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿದೆ. ಇದರಿಂದ ತಾಲೂಕಿನಲ್ಲಿ ಕಳೆದ ಬಾರಿಗಿಂತ ಪ್ರಸಕ್ತ ವರ್ಷ ಶೇಂಗಾ ಬಿತ್ತನೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

    ಹಿಂಗಾರು ಹಂಗಾಮಿನಲ್ಲಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 8550 ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ ಶೇಂಗಾ ಬೀಜ ಬಿತ್ತನೆಯಾಗಿದೆ. ಈಗಾಗಲೇ 15 ರಿಂದ 20 ದಿನದ ಬೆಳೆ ನಳನಳಿಸುತ್ತಿದೆ. ವಿವಿಧೆಡೆ ಶೇಂಗಾ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಸಲ ಕುಕನೂರು ಹೊರತುಪಡಿಸಿ ಯಲಬುರ್ಗಾ ಹೋಬಳಿಯ 1580 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೀಜ ಬಿತ್ತನೆಯಾಗಿತ್ತು. ಮಂಗಳೂರು 915, ಹಿರೇವಂಕಲಕುಂಟಾ 3330 ಹೆಕ್ಟೇರ್‌ನಲ್ಲಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಈ ಬಾರಿ ಬಿತ್ತನೆ ಪ್ರದೇಶ ಹೆಚ್ಚಿದೆ. ಆ ಪೈಕಿ ಯಲಬುರ್ಗಾ 2400 ಹೆಕ್ಟೇರ್, ಮಂಗಳೂರು 1200 ಹೆಕ್ಟೇರ್, ಹಿರೇವಂಕಲಕುಂಟಾದ 4950 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೀಜ ಬಿತ್ತನೆ ಆಗಿದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸಲಾಗುವ ಶೇಂಗಾ ಬೀಜ ಈ ಬಾರಿ ಅತಿ ಹೆಚ್ಚು ವಿತರಣೆಯಾಗಿದೆ. ಕೃಷಿ ಇಲಾಖೆಯಿಂದ ವಿತರಿಸಲಾಗುವ ಸ್ಪಿಂಕ್ಲರ್ ಸೆಟ್ ಮೂಲಕ ಬಹುತೇಕ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವುದು ವಿಶೇಷ.

    ಯಾವ ಹೋಬಳಿಯಲ್ಲಿ ಎಷ್ಟು?: ಯಲಬುರ್ಗಾ-ಕುಕನೂರು ತಾಲೂಕುಗಳಲ್ಲಿ ಕಳೆದ ಮೂರು ವರ್ಷ ಶೇಂಗಾ ಬೀಜ ಮಾರಾಟದ ಹೋಬಳಿವಾರು ವಿವರ ಇಂತಿದೆ. 2021-22ನೇ ಸಾಲಿನಲ್ಲಿ ಕುಕನೂರು ಹೊರತುಪಡಿಸಿ ಯಲಬುರ್ಗಾ 350 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ದಾಸ್ತಾನು ಪೈಕಿ ಎಲ್ಲವೂ ಮಾರಾಟವಾಗಿತ್ತು. ಅದರಂತೆ ಮಂಗಳೂರು 202, ಹಿರೇವಂಕಲಕುಂಟಾದಲ್ಲಿ ಸಂಗ್ರಹಿಸಿ ಎಲ್ಲ 1400 ಕ್ವಿಂಟಾಲ್ ಬೀಜ ಬಿಕರಿಯಾಗಿತ್ತು. ಇನ್ನು 2022-23ನೇ ಸಾಲಿನಲ್ಲಿ ಮಂಗಳೂರು 391 ಕ್ವಿಂ. ದಾಸ್ತಾನು ಪೈಕಿ 200 ಕ್ವಿಂ. ಮಾರಾಟವಾಗಿತ್ತು. ಉಳಿದಂತೆ ಯಲಬುರ್ಗಾ 800, ಹಿರೇವಂಕಲಕುಂಟಾ 2100 ಕ್ವಿಂಟಾಲ್ ಬೀಜ ರೈತರು ಖರೀದಿಸಿದ್ದಾರೆ.

    ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಕಾರಣ ಈ ಬಾರಿ ಶೇಂಗಾ ಬಿತ್ತನೆ ಪ್ರದೇಶ ಹೆಚ್ಚಿದೆ. ಸರಿಯಾದ ಸಮಯಕ್ಕೆ ಶೇಂಗಾ ಬೀಜ ವಿತರಿಸಲಾಗುತ್ತಿದೆ. ವಿಶೇಷವಾಗಿ ಹಿರೇವಂಕಲಕುಂಟಾ ಭಾಗದಲ್ಲಿ ಕಳೆದ ಬಾರಿ 1400 ಕ್ವಿಂಟಾಲ್ ಶೇಂಗಾ ಬೀಜ ವಿತರಣೆಯಾಗಿತ್ತು. ಆದರೆ ಈ ಸಲ 2100 ಕ್ವಿಂಟಾಲ್ ಬೀಜ ನೀಡಲಾಗಿದೆ. ರೈತರು ಶೇಂಗಾವನ್ನು ಬಹು ಬೆಳೆಯಾಗಿ ಬೆಳೆಯುತ್ತಿರುವುದು ವಿಶೇಷ.
    | ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts