More

    ಜಾತಿ ಗಣತಿ ವರದಿ ಸ್ವೀಕಾರ ಮುಂದಕ್ಕೆ; ಮತ್ತೊಮ್ಮೆ ಆಯೋಗದ ಅವಧಿ ವಿಸ್ತರಣೆ

    ಬೆಂಗಳೂರು: ಜಾತಿ ಗಣತಿ ವರದಿ ಸ್ವೀಕಾರ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಕಾಲಾವಧಿಯನ್ನು ಫೆ.29ರವರೆಗೂ ವಿಸ್ತರಿಸಿದೆ.
    ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರಾಗಿರುವ ಆಯೋಗದ ಅವಧಿ ಜನವರಿ 31 (ಬುಧವಾರ) ಕೊನೆಯಾಗುವುದಿತ್ತು. ಈ ಹಿಂದೆ ನವೆಂಬರ್ ಅಂತ್ಯಕ್ಕೆ ಅವಧಿ ಪೂರ್ಣಗೊಂಡಿತ್ತು, ಆದರೆ ಜಾತಿ ಗಣತಿ ಕಾರಣಕ್ಕೆ ಜನವರಿ 31ರವರೆಗೂ ಕಾಲಾವಧಿ ವಿಸ್ತರಿಸಲಾಗಿತ್ತು.
    ಜಾತಿ ಗಣತಿ ವರದಿ ಸ್ವೀಕಾರ ರಾಜ್ಯದ ಮಟ್ಟಿಗೆ ಚುನಾವಣಾ ವಿಚಾರವಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಅಳೆದು ತೂಗಿ ಹೆಜ್ಜೆ ಇಡುತ್ತಿದೆ. ಅಂದಹಾಗೆ ವರದಿ ಸಿದ್ಧವಿದ್ದು ಸರ್ಕಾರ ಸಮಯ ನೀಡಿದಾಕ್ಷಣ ವರದಿ ಸಲ್ಲಿಸುವುದಾಗಿ ಜಯಪ್ರಕಾಶ್ ಹೆಗ್ಡೆ ಹೇಳಿಕೆ ನೀಡಿದ್ದರು.
    ಮುಖ್ಯಮಂತ್ರಿಯವರೂ ಸಹ ಜಾತಿ ಗಣತಿ ವರದಿ ಸ್ವೀಕರಿಸುತ್ತೇವೆಂದು ಖಚಿತವಾಗಿ ಹೇಳಿಕೆ ನೀಡಿದ್ದರು. ವರದಿ ವಿಚಾರವಾಗಿ ತಮ್ಮ ಪಕ್ಷದಲ್ಲಿಯೇ ಅಪಸ್ವರ ಬಂದರೂ ಸಹ ಗಟ್ಟಿ ನಿರ್ಧಾರಕ್ಕೆ ಮುಂದಾದ ಸಿಎಂ, ವರದಿ ಸ್ವೀಕರಿಸುತ್ತೇವೆ, ನಂತರ ಚರ್ಚೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು.
    ವರದಿಯೇ ಅವೈಜ್ಞಾನಿಕ ಎಂದು ಆಡಳಿತ ಪಕ್ಷದ ಶಾಸಕರೇ ಸಹಿ ಮಾಡಿ, ವರದಿ ಸ್ವೀಕರಿಸಕೂಡದೆಂದು ಒತ್ತಡ ಹೇರಿದ್ದರು. ಹೀಗಾಗಿ ಪ್ರತಿ ತೀರ್ಮಾನವೂ ರಾಜಕೀಯವಾಗಿ ಮಹತ್ವವಾಗುವ ಕಾರಣ ಆಯೋಗದ ಅವಧಿಯನ್ನೇ ಇನ್ನೊಂದು ತಿಂಗಳು ವಿಸ್ತರಿಸಲು ಸಿಎಂ ನಿರ್ಧರಿಸಿದರೆಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts