More

    ವಾರಾಂತ್ಯದ ಕರ್ಫ್ಯೂಗೆ ಉತ್ತಮ ಸ್ಪಂದನೆ


    ಶಿರಸಿ/ಕಾರವಾರ: ವೀಕೆಂಡ್ ಕರ್ಫ್ಯೂವಿಗೆ ಜಿಲ್ಲೆಯಲ್ಲಿ ಸ್ಪಂದನೆ ದೊರೆತಿದ್ದು, ಬೀದಿಗಳು ಜನ ಹಾಗೂ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.
    ದಿನನಿತ್ಯದ ಅಗತ್ಯ ವಸ್ತುಗಳಾದ ದಿನಸಿ ಅಂಗಡಿಗಳು, ಹಣ್ಣು ತರಕಾರಿ, ಹಾಲು ಮತ್ತು ಮೀನು ಮಾಂಸ ಹಾಗೂ ಪಡಿತರ ಅಂಗಡಿಗಳು ತೆರೆದಿದ್ದವು. ಮೆಡಿಕಲ್ ಶಾಪ್, ಆಸ್ಪತ್ರೆಗಳಿಗೆ ಸಂಚರಿಸುವ ರೋಗಿಗಳಿಗೆ ಅನುಮತಿ ನೀಡಲಾಗಿತ್ತು. ಹೋಟೆಲ್​ನಲ್ಲಿ ಪಾರ್ಸೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರಿಗೆ ಸಂಸ್ಥೆ ಬಸ್, ಟೆಂಪೋ, ರಿಕ್ಷಾಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು.
    ಶಿರಸಿ ಪಟ್ಟಣದಲ್ಲಿ ಜನರೇ ಇಲ್ಲದಿರುವುದರಿಂದ ಅವಶ್ಯಕತೆಯಿದ್ದಲ್ಲಿ ಮಾತ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಯಿತು. ಪೊಲೀಸ್ ಇಲಾಖೆಯು ವ್ಯವಸ್ಥಿತವಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ನಗರದ ಪ್ರಮುಖ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಹಾಗೂ ಕೋವಿಡ್ ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಯಿತು.
    ಸಿದ್ದಾಪುರ ತಾಲೂಕಿನಾದ್ಯಂತ ವೀಕೆಂಡ್ ಕರ್ಪ್ಯೂಗೆ ಜನತೆ ಸ್ವ ಇಚ್ಚೆಯಿಂದ ಸ್ಪಂದಿಸಿದ್ದಾರೆ. ಪಟ್ಟಣದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ಬಾಗಿಲು ತೆರೆದಿವೆ. ಪೊಲೀಸ್, ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಾಲೂಕಿನಾದ್ಯಂತ ಸಂಚರಿಸಿ ವೀಕೆಂಡ್ ಕರ್ಪ್ಯೂವನ್ನು ಪರಿಶೀಲಿಸಿದರು.
    ಮುಂಡಗೋಡ ಪಟ್ಟಣದ ಮತ್ತು ಗ್ರಾಮೀಣ ಭಾಗಗಳಲ್ಲಿ ವೀಕೆಂಡ್ ಕರ್ಫ್ಯೂನ ಶನಿವಾರದಂದು ಸ್ತಬ್ಧವಾದ ವಾತಾವರಣ ಕಂಡು ಬಂದಿತು. ಪೊಲೀಸರು ಅಲ್ಲಲ್ಲಿ ತಮ್ಮ ಕಾರ್ಯಾಚರಣೆ ನಡೆಸಿ ಅನವಶ್ಯವಾಗಿ ಓಡಾಡುತ್ತಿದ್ದ ಪಾದಚಾರಿಗಳನ್ನು ಮತ್ತು ಬೈಕ್ ಸವಾರರನನ್ನು ತಡೆದು ಎಚ್ಚರಿಕೆ ನೀಡಿದರು. ಅವಶ್ಯಕ ಸಾಮಗ್ರಿಗಳನ್ನು ಹೊರತುಪಡಿಸಿ ಇನ್ನುಳಿದ ವ್ಯಾಪಾರ-ವಹಿವಾಟುಗಳು ಬಂದ್ ಆಗಿದ್ದವು. ಖಾಸಗಿ ವಾಹಗಳ ಸಂಚಾರ ಕಡಿಮೆಯಾಗಿತ್ತು.
    ಕುಮಟಾದಲ್ಲಿ ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಜನ, ವಾಹನ ಸಂಚಾರ ತೀರಾ ಕಡಿಮೆ ಇತ್ತು. ಮಧ್ಯಾಹ್ನದವರೆಗೂ ಅಲ್ಲಲ್ಲಿ ಬೀದಿ ಬದಿ ವ್ಯಾಪಾರ ನಡೆಯಿತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳ ಓಡಾಟ ಯಥಾ ಪ್ರಕಾರ ನಡೆದಿದ್ದು ಗ್ರಾಮೀಣ ಜನರು ಪೇಟೆ ಕಡೆ ಬರಲಿಲ್ಲ.
    ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ದಾಂಡೇಲಿಯಲ್ಲಿ ಜನರ, ವಾಹನಗಳ ಓಡಾಟ ಕಡಿಮೆ ಇತ್ತು. ಕೆಲವು ಅಗತ್ಯ ವಸ್ತುಗಳ ಮಳಿಗೆಗಳು ತೆರೆದಿದ್ದರೂ ಜನರಿಲ್ಲದೆ ವ್ಯಾಪಾರವಿಲ್ಲದಂತಾಗಿತ್ತು. ಬಸ್ ಮತ್ತು ಆಟೋಗಳು ಪ್ರಯಾಣಿಕರಿಲ್ಲದೆ ಖಾಲಿಯಾಗಿದ್ದವು.
    ಅಂಕೋಲಾ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ವಸ್ತುಗಳನ್ನು ಹೊರತು ಪಡಿಸಿ, ಇತರೇ ವ್ಯಾಪರ ವಹಿವಾಟುಗಳು ಬಹುತೇಕ ಬಂದ್ ಆಗಿದ್ದರೂ ಕಳೆದ ವಾರಕ್ಕೆ ಹೋಲಿಸಿದರೆ ಪಟ್ಟಣದಲ್ಲಿ ಜನ ಸಂಚಾರ ತುಸು ಹೆಚ್ಚಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts